ಉತ್ತರ ಪ್ರದೇಶದಲ್ಲಿ ಸಂಕೋಲೆಗಳಿಂದ ಮಾನಸಿಕ ಅಸ್ವಸ್ಥರ ಬಂಧನ: ಕಳವಳ ವ್ಯಕ್ತಪಡಿಸಿದ ನ್ಯಾ. ಸಿಕ್ರಿ

Update: 2019-01-05 15:22 GMT

ಹೊಸದಿಲ್ಲಿ, ಜ.5: ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎ.ಕೆ.ಸಿಕ್ರಿ ಅವರು ಶನಿವಾರ ಇಲ್ಲಿ ಕಳವಳವನ್ನು ವ್ಯಕ್ತಪಡಿಸಿದರು. ಇದು ಮಾನವ ಹಕ್ಕುಗಳ ವಿಷಯವಾಗಿದೆ ಮತ್ತು ಅವರಿಗೆ ಘನತೆಯಿಂದ ಬದುಕುವ ಹಕ್ಕು ಇದೆ ಎಂದು ವಿಚಾರ ಸಂಕಿರಣವೊಂದರಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.

ಉತ್ತರ ಪ್ರದೇಶದ ಬದಾಯುನ್ ಜಿಲ್ಲೆಯ ಆಶ್ರಮವೊಂದರಲ್ಲಿ ಹಲವಾರು ಮಾನಸಿಕ ಅಸ್ವಸ್ಥರನ್ನು ಸಂಕೋಲೆಗಳಿಂದ ಬಂಧಿಸಿಟ್ಟಿದ್ದ ಇತ್ತೀಚಿನ ಘಟನೆಯನ್ನು ಉಲ್ಲೇಖಿಸಿದ ಅವರು,ಮಾನಸಿಕ ಅಸ್ವಸ್ಥ ವ್ಯಕ್ತಿಗಳ ಶಾಸನಾತ್ಮಕ ಹಕ್ಕುಗಳ ಬಗ್ಗೆ ನಾವು ಮಾತನಾಡುತ್ತಿರುವ ಈ 2019ನೇ ಸಾಲಿನಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿವೆ. ಅದೀಗ ಕೇವಲ ಆರೋಗ್ಯದ ವಿಷಯವಾಗುಳಿದಿಲ್ಲ,ಅವರಿಗೆ ಅಗತ್ಯವಾಗಿರುವ ಸೂಕ್ತ ಪರಿಸರ ಅವರಿಗೆ ಲಭಿಸುತ್ತಿಲ್ಲವಾದ್ದರಿಂದ ಅದು ಮಾನವ ಹಕ್ಕುಗಳ ವಿಷಯವೂ ಆಗಿದೆ. ಅವರಿಗೆ ಇತರ ಯಾವುದೇ ವ್ಯಕ್ತಿಯಂತೆ ಬದುಕುವ ಹಕ್ಕಿದೆ ಎಂದು ಹೇಳಿದರು. ಮಾನಸಿಕ ಅಸ್ವಸ್ಥರೂ ಈ ದೇಶದ ಪ್ರಜೆಗಳಾಗಿದ್ದಾರೆ ಮತ್ತು ಅವರಿಗೆ ಘನತೆಯಿಂದ ಬದುಕುವ ಹಕ್ಕಿದೆ. ಖುದ್ದು ಅಧಿಕಾರಿಗಳೇ ಅವರ ಬದುಕುವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದರು.

ಬದಾಯುನ್‌ನ ಆಶ್ರಮದಲ್ಲಿ ಮಾನಸಿಕ ಅಸ್ವಸ್ಥರನ್ನು ಸಂಕೋಲೆಗಳಿಂದ ಬಂಧನದಲ್ಲಿರಿಸಿರುವ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಎರಡು ದಿನಗಳ ಹಿಂದಷ್ಟೇ ಕೈಗೆತ್ತಿಕೊಂಡಿದ್ದ ನ್ಯಾ.ಸಿಕ್ರಿ ಮತ್ತು ನ್ಯಾ.ಎಸ್.ಅಬ್ದುಲ್ ನಝೀರ್ ಅವರ ಪೀಠವು,ಇದು ಸಂವಿಧಾನದ ವಿಧಿ 21ರಡಿ ಅವರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. ಶನಿವಾರ ಜಿಲ್ಲಾಡಳಿತವು ಈ ಆಶ್ರಮದಲ್ಲಿ ಬಂಧನದಲ್ಲಿದ್ದ 22 ಜನರನ್ನು ವಿಮೋಚನೆಗೊಳಿಸಿ ಅವರ ಕುಟುಂಬಗಳಿಗೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News