ಲೋಕಸಭಾ ಚುನಾವಣೆ: ಮೈತ್ರಿಗೆ ಎಸ್‌ಪಿ, ಬಿಎಸ್‌ಪಿ ತಾತ್ವಿಕ ಒಪ್ಪಿಗೆ

Update: 2019-01-05 15:08 GMT

ಲಕ್ನೋ, ಜ.5: ಲೋಕಸಭಾ ಚುನಾವಣೆಗೆ ಮುನ್ನ ಪರಸ್ಪರ ಮೈತ್ರಿಗೆ ಸಮಾಜವಾದಿ ಪಾರ್ಟಿ ಮತ್ತು ಬಿಎಸ್‌ಪಿ ತಾತ್ವಿಕವಾಗಿ ಒಪ್ಪಿಕೊಂಡಿವೆ ಎಂದು ಎಸ್‌ಪಿ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧರಿ ಅವರು ಶನಿವಾರ ತಿಳಿಸಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದ ಇವೆರಡು ಪಕ್ಷಗಳ ನಡುವೆ ಮೈತ್ರಿಯನ್ನು ಇದೇ ತಿಂಗಳು ವಿಧ್ಯುಕ್ತವಾಗಿ ಘೋಷಿಸಬಹುದು. ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ನಡುವೆ ಸರಣಿ ಮಾತುಕತೆಗಳ ಬಳಿಕ ಮೈತ್ರಿಗೆ ತಮ್ಮ ತಾತ್ವಿಕ ಒಪ್ಪಿಗೆಯನ್ನು ನೀಡಿದ್ದಾರೆ. ಮೈತ್ರಿಕೂಟ ರಚನೆಯ ಬಗ್ಗೆ ಇತರ ಪಕ್ಷಗಳೊಂದಿಗೂ ಮಾತುಕತೆಗಳು ನಡೆಯುತ್ತಿವೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಅಸ್ತಿತ್ವವನ್ನು ಹೊಂದಿರುವ ರಾಷ್ಟ್ರೀಯ ಲೋಕದಳವೂ ಈ ಪಕ್ಷಗಳಲ್ಲೊಂದಾಗಿದೆ ಎಂದರು.

ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನ ಸಂಭಾವ್ಯ ಸೇರ್ಪಡೆ ಕುರಿತು ಪ್ರಶ್ನೆಗೆ,ಇದನ್ನು ಅಖಿಲೇಶ್ ಮತ್ತು ಮಾಯಾವತಿ ನಿರ್ಧರಿಸಲಿದ್ದಾರೆ ಎಂದು ಉತ್ತರಿಸಿದ ಅವರು,ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಅಮೇಥಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಯಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿಕೂಟವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ತಿಳಿಸಿದರು.

ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶವು 80 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಕಳೆದ ವರ್ಷ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿಗೆ ಸೋಲಿನ ರುಚಿಯನ್ನು ಉಣಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News