ಶಬರಿಮಲೆ ತಂತ್ರಿ ಓರ್ವ ‘ಬ್ರಾಹ್ಮಣ ರಾಕ್ಷಸ’ ಎಂದ ಕೇರಳ ಸಚಿವ
ಕೊಚ್ಚಿ, ಜ.5: ಐವತ್ತು ವರ್ಷ ಒಳಗಿನ ಪ್ರಾಯದ ಇಬ್ಬರು ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದ ಹಿನ್ನೆಲೆಯಲ್ಲಿ ದೇಗುಲವನ್ನು ಶುದ್ಧೀಕರಣ ಮಾಡಿರುವುದನ್ನು ಖಂಡಿಸಿರುವ ಕೇರಳದ ಹಿರಿಯ ಸಚಿವ ಜಿ.ಸುಧಾಕರನ್ ಅವರು ಶಬರಿಮಲೆಯ ತಂತ್ರಿಯನ್ನು ಓರ್ವ ಬ್ರಾಹ್ಮಣ ರಾಕ್ಷಸ ಎಂದು ಸಂಬೋಧಿಸಿದ್ದಾರೆ.
ಬುಧವಾರದಂದು ಶತಮಾನದಷ್ಟು ಹಳೆಯ ಸಂಪ್ರದಾಯವನ್ನು ಮುರಿದು ಶಬರಿಮಲೆ ದೇಗುಲ ಪ್ರವೇಶಿದ ಕನಕದುರ್ಗಾ (44) ಮತ್ತು ಬಿಂದು (42) ಎಂಬ ಇಬ್ಬರು ಮಹಿಳೆಯರು ಸ್ವಾಮಿ ಅಯ್ಯಪ್ಪನ ದರ್ಶನ ಪಡೆದು ಪ್ರಾರ್ಥನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ದೇಗುಲದ ತಂತ್ರಿ ಕಂಡರು ರಾಜೀವರು ದೇಗುಲದ ಗರ್ಭಗುಡಿಯನ್ನು ಮುಚ್ಚಿ ಶುದ್ಧೀಕರಣ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಕೇರಳ ಸಾರ್ವಜನಿಕ ಕಲ್ಯಾಣ ಇಲಾಖೆ ಸಚಿವ ಮತ್ತು ಸಿಪಿಐ(ಎಂ)ನ ಹಿರಿಯ ನಾಯಕ ಜಿ.ಸುಧಾಕರನ್, ಓರ್ವ ವ್ಯಕ್ತಿ ತನ್ನ ತಂಗಿಯರನ್ನೇ ಅಶುದ್ಧ ಎಂದು ಭಾವಿಸಿದರೆ ಆತನನ್ನು ಮನುಷ್ಯ ಎಂದು ಪರಿಗಣಿಸಲು ಸಾಧ್ಯವೇ ಎಂದು ಕಿಡಿಕಾರಿದ್ದರು.
ಈ ತಂತ್ರಿ ಜಾತಿ ಕ್ರೌರ್ಯದ ಚಿಹ್ನೆಯಾಗಿದ್ದಾರೆ. ಅವರು ಬ್ರಾಹ್ಮಣ ಅಲ್ಲ. ಬ್ರಾಹ್ಮಣ ರಾಕ್ಷಸರಾಗಿದ್ದಾರೆ. ಬ್ರಾಹ್ಮಣ ರಾಕ್ಷಸನಾದರೆ ಆತ ಉಗ್ರನಾಗುತ್ತಾನೆ ಎಂದು ವರದಿಗಾರರಿಗೆ ಸುಧಾಕರನ್ ತಿಳಿಸಿದ್ದಾರೆ. ಆತ ಶುದ್ಧ ಬ್ರಾಹ್ಮಣ ಅಲ್ಲ. ಅವರಿಗೆ ಸ್ವಾಮಿ ಅಯ್ಯಪ್ಪನ ಮೇಲೆ ನಿಜವಾದ ಪ್ರೀತಿ, ಗೌರವ ಮತ್ತು ಭಕ್ತಿಯಿಲ್ಲ ಎಂದು ಸಚಿವರು ಅಭಿಪ್ರಾಯಿಸಿದ್ದಾರೆ.