ಆಡುವ ಗೊಂಬೆ: ಭಗವಾನ್ ಸೂತ್ರದಲ್ಲಿ ಬೊಂಬೆಗಳು

Update: 2019-01-05 18:32 GMT

ದೊರೈ-ಭಗವಾನ್ ಖ್ಯಾತಿಯ ನಿರ್ದೇಶಕ ಭಗವಾನ್ ಎರಡು ದಶಕಗಳ ಬಳಿಕ ನಿರ್ದೇಶಿಸಿರುವ ಚಿತ್ರ ಆಡುವ ಗೊಂಬೆ. ಅವರು ಒಂದು ಗ್ಯಾಪ್ ಬಳಿಕ ಚಿತ್ರರಂಗಕ್ಕೆ ಮರಳಿ ಬಂದಿರುವುದು ಪಾಸಿಟಿವ್ ಎನ್ನುವುದರ ಜೊತೆಗೆ ನೆಗೆಟಿವ್ ಕೂಡ ಹೌದು. ಏಕೆಂದರೆ ಬಂದಿದ್ದು ಪಾಸಿಟಿವೇ. ಆದರೆ ತಡವಾಯಿತು ಎನ್ನುವುದು ನೆಗೆಟಿವ್. ಅವರು ಮತ್ತೆ ನಿರ್ದೇಶನಕ್ಕಿಳಿದ ಈ ಚಿತ್ರದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿರುವ ಯುವಕ ಮಾಧವ. ಆತನನ್ನು ತನ್ನ ಮಗನಂತೆ ಬೆಳೆಸುವಳು ಅಕ್ಕ. ಅಕ್ಕ ಬಾವನ ಆರೈಕೆಯಲ್ಲಿ ಬೆಳೆದ ಯುವಕ ಮಾಧವ ಕೆಲಸಕ್ಕಾಗಿ ದಿಲ್ಲಿಗೆ ಹೋಗುತ್ತಾನೆ. ಅಲ್ಲಿ ಕಚೇರಿಯ ಸಹೋದ್ಯೋಗಿ ಜೊತೆಗೆ ಪ್ರೀತಿಯಾಗುತ್ತದೆ. ಆದರೆ ಇದರ ಮಧ್ಯೆ ಅಕ್ಕ ಮೈ ಹುಷಾರಿಲ್ಲ ಎಂದು ಆತನನ್ನು ಮನೆಗೆ ಕರೆಸಿಕೊಳ್ಳುತ್ತಾಳೆ. ಅಕ್ಕನಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡ ಮಗಳನ್ನು ಮದುವೆಯಾಗುವಂತೆ ಮಾಧವನಲ್ಲಿ ಹೇಳುತ್ತಾಳೆ ಅಕ್ಕ. ಆನಂತರದ ಕತೆಯನ್ನು ಪ್ರೇಕ್ಷಕರು ಊಹಿಸಬಲ್ಲರು. ಆದರೆ ಯಾರ ಊಹೆಯನ್ನು ಕೂಡ ಮೀರಿಸುವ ರೀತಿಯ ತಿರುವುಗಳನ್ನು ತೋರುವುದೇ ಆಡುವ ಗೊಂಬೆ ಚಿತ್ರದ ವಿಶೇಷ.

ಚಿತ್ರದ ಕತೆಯಲ್ಲಿ ತಿರುವುಗಳಿದ್ದರೂ ಕೂಡ ಪ್ರಮುಖ ಪಾತ್ರಗಳ ವರ್ತನೆಗಳನ್ನು ಗಮನಿಸುವಾಗ ಈ ಕಾಲದಲ್ಲಿ ಕೂಡ ಇಷ್ಟೊಂದು ತಾಳ್ಮೆಯ ಮಂದಿ ಇರುತ್ತಾರೆಯೇ, ಹೀಗೆಲ್ಲ ನಡೆಯಲು ಸಾಧ್ಯವೇ ಎಂಬ ಸಂದೇಹ ಬಂದರೆ ಅಚ್ಚರಿಯಿಲ್ಲ. ಪೊಲೀಸ್ ಇಲಾಖೆಯ ತನಿಖಾ ರೀತಿ ಕೂಡ ನಂಬಲಾಗದ ಹಾಗಿವೆ. ಚಿತ್ರದ ಸಂಭಾಷಣೆಗಳು, ಭಾವನೆ ವ್ಯಕ್ತಪಡಿಸುವ ರೀತಿ ಮತ್ತು ಹಿನ್ನೆಲೆ ಸಂಗೀತ ಇವೆಲ್ಲವೂ ಎರಡು ದಶಕಗಳ ಹಿಂದಿನ ಕನ್ನಡ ಸಿನೆಮಾಗಳ ಮಾದರಿಯನ್ನೇ ತೋರಿಸುವಂತಿವೆ. ಭಗವಾನ್ ಅವರು ಈ ಕತೆಯನ್ನು ಆ ಕಾಲಘಟ್ಟದ ಚಿತ್ರವಾಗಿಯೇ ತೋರಿಸಿದ್ದರೆ ಬಹುಶಃ ಇನ್ನಷ್ಟು ಹೊಸತನ ತುಂಬಬಹುದಿತ್ತು. ನಾಯಕರಾಗಿ ಸಂಚಾರಿ ವಿಜಯ್ ಅವರು ಭಗವಾನ್ ಶೈಲಿಗೆ ಕನ್ನಡಿಯಾಗಿದ್ದಾರೆ. ಅದು ಭಗವಾನ್ ನಿರ್ದೇಶನದ ಮೂಲಕ ತೋರಿಸಿರುವ ರಾಜ್ ಕುಮಾರ್ ಶೈಲಿಯ ನಟನೆಯಾಗಿರಲಿ, ರಾಜ್ ಕುಮಾರ್ ಅವರು ಧರಿಸಿರುವ ವಸ್ತ್ರದ ಬಳಕೆಯಲ್ಲಾಗಲಿ ಎದ್ದು ಕಾಣುತ್ತದೆ.

ಆಡುವ ಗೊಂಬೆಯ ಮೂಲಕ ಮೂವರು ನಾಯಕಿಯರನ್ನು ಪರಿಚಯಿಸಲಾಗಿದೆ. ಅವರಲ್ಲಿ ವಿಜಯ್ ಪತ್ನಿಯಾಗಿ ನಿರೋಷಾ ಶೆಟ್ಟಿಗೆ ನಟನೆಗೆ ಹೆಚ್ಚು ಅವಕಾಶ ಲಭಿಸಿದೆ. ಮಾತ್ರವಲ್ಲ ಆಕೆ ಅದನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ತನ್ನನ್ನು ಗೊಂಬೆಯಾಗಿಸಿ ದೇವರು ಆಟವಾಡುವ ರೀತಿಗೆ ರೋಸಿ ಹೋಗಿ ಅಳುವ, ಅಳುತ್ತಾ ನಗುವ ಮಾಧವನಾಗಿ ಸಂಚಾರಿ ವಿಜಯ್ ಅದ್ಭುತವಾಗಿ ನಟಿಸಿದ್ದಾರೆ. ಅಕ್ಕನಾಗಿ ಸುಧಾ ಬೆಳವಾಡಿ ಎಂದಿನಂತೆ ಉತ್ಸಾಹದ ನಟನೆ ತೋರಿದರೆ, ಅನಂತನಾಗ್ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪಾತ್ರ ಮಾಡಿದ್ದಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಹೇಮಂತ್ ಕುಮಾರ್ ಸಂಗೀತದಲ್ಲಿ ಚಿತ್ರದ ಹಾಡುಗಳು ತುಂಬ ಗಮನ ಸೆಳೆಯುತ್ತವೆ. ಶಿವರಾಜ್ ಕುಮಾರ್ ಹಾಡಿರುವ ಮೆಲೊಡಿ, ವಿಜಯ ರಾಘವೇಂದ್ರ ಕಂಠದಲ್ಲಿರುವ ಮದುವೆಯ ಹಾಡು ಮತ್ತು ಥೀಮ್ ಸಾಂಗ್ ಹಾಡಿರುವ ರಾಘವೇಂದ್ರ ರಾಜ್ ಕುಮಾರ್ ಅವರ ಹಾಡುಗಳು ಮನಸಾರೆ ಗುನುಗುವಂತಿವೆ. ಹಾಗಾಗಿ ಆಡುವ ಗೊಂಬೆ ಹಾಡುವ ಗೊಂಬೆಯಾಗಿ ಗೆದ್ದಿದೆ. ಚಿತ್ರಕ್ಕೆ ಗೆಲುವು ನೀಡುವುದು ಬಿಡುವುದು ಪ್ರೇಕ್ಷಕರ ಕೈಯಲ್ಲಿದೆ.

ತಾರಾಗಣ: ಸಂಚಾರಿ ವಿಜಯ್, ನಿರೋಷಾ ಶೆಟ್ಟಿ
ನಿರ್ದೇಶನ: ದೊರೈ ಭಗವಾನ್
ನಿರ್ಮಾಣ: ಕಸ್ತೂರಿ ನಿವಾಸ ಕ್ರಿಯೇಶನ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News