ದಿಲ್ಲಿ ದರ್ಬಾರ್

Update: 2019-01-05 18:34 GMT

ದಿಲ್ಲಿಯಲ್ಲಿ ನವೀನ್‌ ಬಾಬು
ಒಡಿಶಾ ಮುಖ್ಯಮಂತ್ರಿ ಹಾಗೂ ಬಿಜು ಜನತಾದಳ ಮುಖ್ಯಸ್ಥ ನವೀನ್ ಪಟ್ನಾಯಕ್ ರಾಜಧಾನಿಯಲ್ಲಿ ಜನವರಿ 8ರಂದು ನಡೆಯುವ ಒಂದು ದಿನದ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಸರಕಾರ ಈ ಹಿಂದೆ ರಾಜ್ಯಕ್ಕೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆಪಾದಿಸಿ ಈ ಧರಣಿ ನಡೆಯುತ್ತಿದೆ. 2014ರಲ್ಲಿ ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೋದಿ ಸರಕಾರದ ವಿರುದ್ಧದ ಪ್ರತಿಭಟನಾ ರ್ಯಾಲಿಯಲ್ಲಿ ಒಡಿಶಾ ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಉಭಯ ಪಕ್ಷಗಳು 2000ದಿಂದ 2009ರ ವರೆಗೆ ಮಿತ್ರಪಕ್ಷಗಳಾಗಿದ್ದವು. ಸಂಸತ್ತಿನಲ್ಲಿ ಹಲವು ವಿಚಾರಗಳಲ್ಲಿ ಮತದಾನದಿಂದ ದೂರ ಉಳಿಯುವ ಮೂಲಕ ಅಥವಾ ಸಭಾತ್ಯಾಗ ಮಾಡುವ ಮೂಲಕ ಬಿಜೆಪಿಯನ್ನು ಬೆಂಬಲಿಸಿದ್ದ ಬಿಜೆಡಿಯ ಹೊಸ ನಡೆ ರಾಜಕೀಯ ಪಂಡಿತರಿಗೆ ಅಚ್ಚರಿ ಮೂಡಿಸಿದೆ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂಬ ನಿರೀಕ್ಷೆ ಮುಖ್ಯಮಂತ್ರಿಯನ್ನು ಕಂಗೆಡಿಸಿದೆ ಎನ್ನಲಾಗಿದೆ. ರಾಜ್ಯದಲ್ಲಿ ಬಿಜೆಡಿ ಬಹುತೇಕ ಎಲ್ಲ ಸ್ಥಾನಗಳನ್ನು ಗೆಲ್ಲುತ್ತಾ ಬಂದಿದ್ದು, ಈ ಅವಕಾಶವನ್ನು ಬಿಜೆಪಿಗೆ ಬಿಟ್ಟುಕೊಡಲು ಬಿಜೆಡಿ ಸಿದ್ಧವಿಲ್ಲ. ಬಿಜೆಪಿ ಒಡಿಶಾದಲ್ಲಿ ಬಿಜೆಡಿಯ ಬೆಂಬಲ ಯಾಚಿಸುವಂತಾಗಬೇಕೇ ವಿನಃ ಒಡಿಶಾದಲ್ಲಿ ಅದು ಪ್ರಬಲ ಶಕ್ತಿಯಾಗಿ ಹೊರಹೊಮ್ಮಬಾರದು ಎನ್ನುವುದು ಆ ಪಕ್ಷದ ಬಯಕೆ. ಪೂರ್ವಪ್ರವಾಹವನ್ನು ಬಿಜೆಪಿಯತ್ತ ತಿರುಗಿಸುವ ಸಲುವಾಗಿ ಸ್ವತಃ ಮೋದಿ ಪುರಿ ಕ್ಷೇತ್ರದಿಂದ ಕಣಕ್ಕೆ ಧುಮುಕಲಿದ್ದಾರೆ ಎಂಬ ಹೇಳಿಕೆಗಳ ಬೆನ್ನಲ್ಲೇ, ಪಟ್ನಾಯಕ್ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಕಾರಣಕ್ಕೆ ದಿಲ್ಲಿಯಲ್ಲಿ ಧರಣಿ ಹಮ್ಮಿಕೊಂಡಿದ್ದಾರೆ ಎನ್ನಲಾಗುತ್ತಿದೆ.


ಪಟೇಲ್ ತಲೆನೋವು
ಆರ್‌ಎಲ್‌ಎಸ್‌ಪಿ ಬಿಹಾರದಲ್ಲಿ ಬಿಜೆಪಿ ಕೂಟಕ್ಕೆ ಗುಡ್‌ಬೈ ಹೇಳಿದ ಬಳಿಕ, ಉತ್ತರ ಪ್ರದೇಶದಲ್ಲಿ ಅಪ್ನಾ ದಳ ಜತೆಗಿನ ಮೈತ್ರಿಗೂ ಧಕ್ಕೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಮೋದಿಯನ್ನು ಹೊಗಳುವಲ್ಲಿ ಹೊಗಳುಭಟರನ್ನೂ ಮೀರಿಸಿದ್ದ ರಾಜ್ಯ ಸಚಿವೆ ಅನುಪ್ರಿಯಾ ಪಾಟೀಲ್ ಇದೀಗ ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆಕೆಯ ಪತಿ ಹಾಗೂ ಪಕ್ಷದ ಮುಖ್ಯಸ್ಥ ಆಶೀಶ್ ಪಟೇಲ್, ‘‘ಅಪ್ನಾದಳ ಕೆಲ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ’’ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ರಾಜಕೀಯದಲ್ಲಿ ಒಂದು ದಿನ ಕೂಡಾ ಸುದೀರ್ಘ ಎನಿಸಬಹುದು. ಅಪ್ನಾ ದಳ ಹಾಗೂ ಬಿಜೆಪಿ ಕೆಲವೇ ಗಂಟೆಗಳಲ್ಲಿ ಪರಸ್ಪರ ಒಲವನ್ನು ಬಹಿರಂಗಪಡಿಸಿವೆ. ಹಿಂದಿನ ತಮ್ಮ ಹೇಳಿಕೆಗಳನ್ನು ತಳ್ಳಿಹಾಕಿದ ಆಶೀಶ್, ತಕ್ಷಣಕ್ಕೆ ಬಿಜೆಪಿಯಿಂದ ದೂರ ಸರಿಯುವ ಯಾವ ಯೋಚನೆಯೂ ಇಲ್ಲ ಎಂದು ದೃಢಪಡಿಸಿದ್ದಾರೆ. ಅನುಪ್ರಿಯಾ ಕೂಡಾ ಬಿಜೆಪಿ ಸದಸ್ಯರ ಜತೆಗೆ ಸ್ನೇಹಪರರಾಗಿರುವಂತೆ ಕಾಣುತ್ತಿದೆ. ಆದ್ದರಿಂದ ಪತಿ ಕೆಲ ದಿನಗಳ ಹಿಂದೆ ಹುಟ್ಟಿಸಿದ್ದ ಕುತೂಹಲ, ಸಂಬಂಧ ಗಟ್ಟಿಗೊಳಿಸಿದೆ ಎಂದು ಹೇಳಬಹುದು.


ಉತ್ತರಪ್ರದೇಶಕ್ಕೆ ರಾಹುಲ್ ಸೂತ್ರ
ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಜತೆ ಸೇರುವ ಸಾಧ್ಯತೆಗಳು ನಿಚ್ಚಳವಾಗಿದ್ದು, ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್‌ಗೆ ಯಾವ ಸ್ಪಷ್ಟತೆಯೂ ಇಲ್ಲ. ಆದ್ದರಿಂದ ರಾಹುಲ್‌ಗಾಂಧಿ ಉತ್ತರ ಪ್ರದೇಶದ ಕಾರ್ಯತಂತ್ರ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ರಾಜ್ಯದ ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪಕ್ಷ ನಿರತವಾಗಿದೆ ಎಂಬ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಇತ್ತೀಚೆಗೆ ನೀಡಿದ ಸಂದೇಶ ಚುನಾವಣೆಗೆ ಸಜ್ಜಾಗಿ ಎನ್ನುವುದು. ರಾಜ್ಯದಲ್ಲಿ ಮೈತ್ರಿ ಸಾಧ್ಯವಾಗದಿದ್ದರೆ ಈ ಸೂತ್ರ ಅನ್ವಯಿಸಲಾಗುತ್ತದೆ ಎಂದು ಹೇಳಲಾಗಿದೆ. ಮಾಯಾವತಿ, ಅಖಿಲೇಶ್ ಹಾಗೂ ಲೋಕದಳದ ಅಜಿತ್ ಸಿಂಗ್ ಅವರು ಒಗ್ಗೂಡಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ 2-6 ಸ್ಥಾನಗಳನ್ನಷ್ಟೇ ಬಿಟ್ಟುಕೊಡಲು ನಿರ್ಧರಿಸಿವೆ. ಆದರೆ ಈ ಪ್ರಸ್ತಾವವನ್ನು ಕಾಂಗ್ರೆಸ್ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಬದಲಾಗಿ ಸ್ವತಂತ್ರವಾಗಿ ಕನಿಷ್ಠ 30 ಸ್ಥಾನಗಳಿಗೆ ಸ್ಪರ್ಧಿಸಲಿದೆ. ಈ ಕಾರಣದಿಂದ ರಾಹುಲ್ ಅವರಿಂದ ಸ್ಪಷ್ಟ ಸಂದೇಶ ರವಾನೆಯಾಗಿದೆ. ಈ ಕಾರ್ಯತಂತ್ರಕ್ಕೆ ಪಕ್ಷದ ತಳಮಟ್ಟದ ನಾಯಕರು ಹೇಗೆ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕು. ಸಂಭಾವ್ಯ ಮೈತ್ರಿಕೂಟದ ಪಾಲುದಾರ ಪಕ್ಷಗಳು ಒಪ್ಪದಿದ್ದರೆ ತನ್ನ ಹಾದಿ ತುಳಿಯಲು ರಾಹುಲ್ ಸಜ್ಜಾಗಿದ್ದಾರೆ.


ದೀದಿಗೆ ಆ್ಯಂಟನಿ ನೆನಪು!
ನಂಬಿದರೆ ನಂಬಿ, ಬಿಟ್ಟರೆ ಬಿಡಿ; ಮಾಜಿ ಕೇಂದ್ರ ಸಚಿವ ಎ.ಕೆ.ಆ್ಯಂಟನಿ ಮತ್ತು ಅರುಣ್ ಜೇಟ್ಲಿ ನಡುವೆ ಹಲವು ಸಾಮ್ಯತೆಗಳಿವೆ! ಉಭಯ ನಾಯಕರ ಜನ್ಮದಿನ ಒಂದೇ ಆಗಿದೆ. ಇದಲ್ಲದೆ ಎರಡೂ ಮುತ್ಸದ್ಧಿ ರಾಜಕಾರಣಿಗಳ ಭಿನ್ನತೆ ಅವರ ಜಂಟಿ ಹುಟ್ಟುಹಬ್ಬದಂದು ಬೆಳಕಿಗೆ ಬಂತು. ಜೇಟ್ಲಿಗೆ ಸಂಸತ್ತಿನಲ್ಲಿ ಎಲ್ಲರೂ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕವೂ ಶುಭಾಶಯ ಕೋರಿದರು. ಆದರೆ ಆ್ಯಂಟನಿ ಹುಟ್ಟುಹಬ್ಬ ಗಂಭೀರ. ಹಿರಿಯ ನಾಯಕನ ಹುಟ್ಟುಹಬ್ಬದ ಜತೆಗೆ ಪಕ್ಷದ ಸಂಸ್ಥಾಪನಾ ದಿನ ಆಚರಿಸುವ ಸಲುವಾಗಿ ಕಾಂಗ್ರೆಸ್ ಪಕ್ಷ ಕೇಕ್ ತರಿಸಿತ್ತು. ಆದರೆ ಬಹಳಷ್ಟು ಮಂದಿಗೆ ಅದು ಆ್ಯಂಟನಿ ಪಾಲಿಗೂ ಸಂಭ್ರಮದ ದಿನ ಎಂಬ ವಿಚಾರ ತಿಳಿದೇ ಇರಲಿಲ್ಲ. ಆದರೆ ಈ ನೆನಪು ಮಾಸುವುದಕ್ಕೆ ಅಪವಾದವೂ ಇದೆ. ಏಕೆಂದರೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮುಂಜಾನೆಯೇ ಆ್ಯಂಟನಿಯವರಿಗೆ ಶುಭ ಹಾರೈಸಿ ಟ್ವೀಟ್ ಮಾಡಿದರು. ಕಾಂಗ್ರೆಸ್‌ನಿಂದ ಹೊರಗಿರುವವರು ಆ್ಯಂಟನಿಯನ್ನು ನೆನಪಿಟ್ಟುಕೊಂಡಿದ್ದಾರೆ!


ಗಡ್ಕರಿ ನಡೆ
ಎಲ್ಲರ ಕಣ್ಣು ನಿತಿನ್ ಗಡ್ಕರಿಯವರತ್ತ ನೆಟ್ಟಿದೆ ಎನ್ನುವುದು ಅವರ ಗಮನಕ್ಕೆ ಬಂದಿದೆ. ಗಡ್ಕರಿಯವರ ಇತ್ತೀಚಿನ ಟೀಕೆಗಳು ಪಕ್ಷದ ನಾಯಕತ್ವವನ್ನು ಗುರಿಮಾಡಿದ್ದವು. ನಾಗ್ಪುರ ಮೂಲದ ಗಡ್ಕರಿ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಆಪ್ತರು ಎಂದೇ ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಅವರು ಹಲವು ಮಂದಿ ಪ್ರಮುಖ ರಾಜ್ಯ ಮುಖಂಡರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಸಹಜವಾಗಿಯೇ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಪ್ರಾಬಲ್ಯವನ್ನು ವಿರೋಧಿಸುವವರ ಈ ಪಟ್ಟಿಯಲ್ಲಿ ಅತೃಪ್ತ ಆತ್ಮ ಎನ್ನಲಾದ ಶಿವರಾಜ್ ಸಿಂಗ್ ಚೌಹಾಣ್ ಹೆಸರೂ ಸೇರಿದೆ. ಶಾ ಅವರೊಂದಿಗೆ ಗಡ್ಕರಿ ಸಂಬಂಧ ಸುಮಧುರವಾಗಿಲ್ಲ ಎನ್ನುವುದು ಪಕ್ಷದ ಹಳೆಮುಖಗಳಿಗೆ ಗೊತ್ತು. ಇಬ್ಬರ ನಡುವಿನ ವೈಮನಸ್ಯ, ಗಡ್ಕರಿ ಪಕ್ಷಾಧ್ಯಕ್ಷರಾಗಿದ್ದ ಅವಧಿಯಷ್ಟು ಹಿಂದಕ್ಕೆ ಹೋಗುತ್ತದೆ. ಪಕ್ಷಾಧ್ಯಕ್ಷರಾಗಿ ಗಡ್ಕರಿ ಶಾ ಅವರನ್ನು ಪ್ರೇಕ್ಷಕರ ಗ್ಯಾಲರಿಯಲ್ಲೇ ದೀರ್ಘಕಾಲ ಕಾಯಿಸಿದ್ದರು. ಮತ್ತೆ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಜತೆ ಸೇರಿ ಸರಕಾರ ರಚನೆಗೆ ಮುಂದಾದಾಗ, ಸಿಎಂ ಗಾದಿ ತಮಗೆ ದಕ್ಕುತ್ತದೆ ಎಂಬ ನಿರೀಕ್ಷೆ ಗಡ್ಕರಿಯವರದ್ದಾಗಿತ್ತು. ಆದರೆ ಇದಕ್ಕೆ ಅಡ್ಡಗಾಲಾದವರು ಶಾ. ಬಿಜೆಪಿಯ ಅಧಿಕಾರ ಶ್ರೇಣಿಯಲ್ಲಿ ಕೆಳಹಂತದಲ್ಲಿದ್ದ ದೇವೇಂದ್ರ ಫಡ್ನವೀಸ್ ಅವರು, ಗಡ್ಕರಿಯವರನ್ನು ಹಿಂದಿಕ್ಕಿ ಸಿಎಂ ಹುದ್ದೆ ಏರಿದರು. ಇತ್ತೀಚಿನ ವಿಧಾನಸಭಾ ಚುನಾವಣೆಗಳ ಬಳಿಕ ಮತ್ತೆ ಅಸಮಾಧಾನ ಭುಗಿಲೆದ್ದಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಸರಕಾರ ರಚಿಸಲು ಸಾಕಾಗುವಷ್ಟು ಸ್ಥಾನಗಳು ಬರುವುದಿಲ್ಲ ಎಂಬ ದೃಢನಂಬಿಕೆ ಗಡ್ಕರಿಯವರದ್ದು. ಮಿತ್ರಪಕ್ಷಗಳನ್ನು ಅದು ಅವಲಂಬಿಸಬೇಕಾಗಿರುವುದರಿಂದ ಪ್ರಧಾನಿ ಗದ್ದುಗೆ ಹಿಡಿಯುವ ತಮ್ಮ ಅವಕಾಶ ಉಜ್ವಲವಾಗುತ್ತಿದೆ ಎಂಬ ನಂಬಿಕೆ ಅವರದ್ದು. ಈ ಕಾರಣದಿಂದ ಪಕ್ಷಾಧ್ಯಕ್ಷರನ್ನು ಅವರು ಗುರಿ ಮಾಡಿದ್ದಾರೆ. ಅವರು ಧ್ವನಿ ಎತ್ತಿರುವುದು ಸರಿಯಾಗಿಯೇ ಇದೆ ಎನ್ನುವುದು ಹಲವರ ಅಂಬೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News