ಸಮಸ್ಯೆ ಬಗೆಹರಿಸದಿದ್ದರೆ ಬಿಜೆಪಿಗೆ ಮತ ನೀಡೆವು: ಆದಿತ್ಯನಾಥ್ ವಿರುದ್ಧ ಯುಪಿ ರೈತರ ಆಕ್ರೋಶ

Update: 2019-01-06 05:01 GMT

ಲಕ್ನೋ, ಜ.6: ಉತ್ತರ ಪ್ರದೇಶದಲ್ಲಿ ಗೋರಕ್ಷಕರ ಹಾವಳಿ ಮಿತಿಮೀರಿರುವ ಬೆನ್ನಲ್ಲೇ ಈಗ ಬೀದಿ ದನಗಳ ಹಾವಳಿಯಿಂದ ರೈತರು ಕಂಗಲಾಗಿರುವ ವರದಿಗಳು ಬರುತ್ತಿವೆ. ಜನರು ಸಾಕಲು ಸಾಧ್ಯವಿಲ್ಲದೆ ಬೀದಿಗಟ್ಟುತ್ತಿರುವ ದನಗಳು ಹೊಲಗಳಿಗೆ ನುಗ್ಗಿ ರೈತರು ಬೆಳೆದ ಬೆಳೆಯನ್ನು ತಿಂದು ಹಾಕುತ್ತಿರುವ ಘಟನೆಗಳ ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಿನ ರೈತರು ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ‘ದಿ ಹಿಂದೂ’ ಪತ್ರಿಕೆ ರವಿವಾರ ತನ್ನ ಮುಖಪುಟದಲ್ಲಿ ಪ್ರಕಟಿಸಿರುವ ವಿಶೇಷ ವರದಿಯಲ್ಲಿ ತಿಳಿಸಿದೆ.

2017ರ ಮಾರ್ಚ್‌ನಲ್ಲಿ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬೀದಿ ದನಗಳ ಹಾವಳಿ ಮಿತಿಮೀರಿದೆ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋರಕ್ಷಕರ ದಾಳಿಗೆ ಹೆದರಿ ಗೋ ಸಾಗಾಟ, ಜಾನುವಾರು ಮಾರಾಟ ಇತ್ಯಾದಿಗಳು ತೀವ್ರಗತಿಯಲ್ಲಿ ಇಳಿಕೆಯಾಗಿವೆ. ಇದರ ನೇರ ಪರಿಣಾಮ ಕೃಷಿಕರ ಬೆಳೆಯ ಮೇಲೆ ಆಗಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಆದಿತ್ಯನಾಥ್ ಸರಕಾರಕ್ಕೆ ರೈತರಿಂದ ಗಡು
‘‘ನನ್ನ ಒಂದು ಇಡೀ ಬೆಳೆಯನ್ನು ಬೀದಿದನಗಳು ತಿಂದು ಹಾಕಿವೆ. ನಾನು ಮತ್ತೊಮ್ಮೆ ಬಿತ್ತನೆ ಮಾಡಿದ್ದೇನೆ. ಈಗ ನಾನು ಹೇಗಾದರೂ ಬೇಲಿ ಹಾಕದಿದ್ದರೆ ಮಾರಾಟಕ್ಕೆ ಬಿಡಿ, ನನ್ನ ಮನೆಯವರಿಗೆ ತಿನ್ನಲು ಧಾನ್ಯಗಳು ಉಳಿಯುದಿಲ್ಲ. ತಕ್ಷಣ ಇದಕ್ಕೆ ಸರಕಾರ ಏನಾದರೂ ವ್ಯವಸ್ಥೆ ಮಾಡದಿದ್ದರೆ 2019ರಲ್ಲಿ ನಾನು ಬಿಜೆಪಿಗೆ ಮತ ಹಾಕುವುದಿಲ್ಲ. 2014, 2017ರಲ್ಲಿ ನಾನು ಮತ ಹಾಕಿದ್ದು ಬಿಜೆಪಿಗೆ’’ ಎಂದು ಮೋಹನ್‌ಲಾಲ್ ಗಂಜ್‌ನ ಕೃಷಿಕ ವಿಜಯ್ ರಾವತ್ ಎಂಬವರು ಹೇಳಿದ್ದಾರೆ.

ಕಳೆದ ವಾರ ಆಕ್ರೋಶಿತ ರೈತರು ಫಿರೋಝಬಾದ್ ಹಾಗೂ ಅಲಿಗಢಗಳಲ್ಲಿ ಬೀದಿದನಗಳನ್ನು ಸರಕಾರಿ ಶಾಲೆಯೊಳಗೆ ಕೂಡಿಟ್ಟು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಿದ ಘಟನೆ ನಡೆದಿದೆ. ಪಕ್ಷಭೇದ ಮರೆತು ಎಲ್ಲಾ ರೈತರು ಆದಿತ್ಯನಾಥ್ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೋರ್ವ ರೈತ ರಾಧೆ ಮೋಹನ್ ಎಂಬವರು, ‘‘ ನಾನು ಪ್ರತೀ ವರ್ಷ ಆಲೂಗಡ್ಡೆ ಮತ್ತು ಇತರ ತರಕಾರಿಗಳನ್ನು ಬೆಳೆಯುತ್ತಿದ್ದೆ. ಆದರೆ ಈ ಬಾರಿ ಕೃಷಿಗೆ ಕೈ ಹಾಕಲೇ ಇಲ್ಲ. ಏನು ಮಾಡಿದರೂ ಈ ಬೀದಿ ದನಗಳು ಬಂದು ತಿಂದು ಹಾಕುತ್ತಿವೆ. ಹಾಗಾಗಿ ಈ ಬಾರಿ ಮಂಡಿಯಿಂದ ತರಕಾರಿ ಖರೀದಿಸಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ’’ ಎಂದು ಹೇಳಿದ್ದಾರೆ.

ದಿನವಿಡೀ ಕಷ್ಟಪಟ್ಟು ಹೊಲದಲ್ಲಿ ದುಡಿಯುವ ರೈತರು ರಾತ್ರಿ ತಮ್ಮ ಮನೆಯ ಸದಸ್ಯ ಜೊತೆ ಲಾಠಿ ಹಿಡಿದು ಹೊಲ ಕಾಯುವ ಕೆಲಸ ಮಾಡುವುದು ಈಗ ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News