×
Ad

ಪುರುಷನಾದ ಲಿಂಗಾಂತರಿ ಮಹಿಳೆಯ ದಾಂಪತ್ಯದಲ್ಲಿ ಬಿರುಕು!

Update: 2019-01-06 12:17 IST

ಚಂಡೀಗಢ, ಜ.6: ತನ್ನ ಶಾಲಾ ಸ್ನೇಹಿತೆಯನ್ನು ವಿವಾಹವಾಗುವ ಸಲುವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 21 ವರ್ಷದ ಹರ್ಯಾಣ ಮಹಿಳೆಯ ದಾಂಪತ್ಯದಲ್ಲಿ ಇದೀಗ ಬಿರುಕು ಕಾಣಿಸಿಕೊಂಡಿದ್ದು, ಈ ಕೌಟುಂಬಿಕ ಸಂಬಂಧದಿಂದ ಹೊರಬರಲು ಪತ್ನಿ ನಿರ್ಧರಿಸಿದ್ದಾಳೆ.

ಈ ಬಗ್ಗೆ ಲಿಂಗಪರಿವರ್ತಿತ ಗಂಡ ಪೊಲೀಸರಿಗೆ ದೂರು ನೀಡಿದ್ದು, ತನ್ನ ಪತ್ನಿಯನ್ನು ಆಕೆಯ ಪೋಷಕರು ಕೂಡಿಹಾಕಿದ್ದಾರೆ ಹಾಗೂ ನನ್ನನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಶಾಲೆಯಲ್ಲಿದ್ದಾಗಲೇ ನಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನಾವಿಬ್ಬರೂ ಪರಸ್ಪರ ವಿವಾಹವಾಗಲು ಬಯಸಿದ್ದೆವು. ಆದರೆ ಸಲಿಂಗ ವಿವಾಹಕ್ಕೆ ನಮ್ಮ ಕುಟುಂಬಗಳು ಒಪ್ಪಿಗೆ ನೀಡುವುದಿಲ್ಲ ಎಂಬ ಕಾರಣಕ್ಕೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ ಎಂದು ಪತಿ ದೂರಿನಲ್ಲಿ ವಿವರಿಸಿದ್ದಾರೆ.

"ದಿಲ್ಲಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬೇರೆಯವರಿಂದ 10 ಲಕ್ಷ ರೂ. ಸಾಲ ಪಡೆದಿದ್ದೆವು" ಎಂದು ಗಂಡನ ಮನೆಯ ಕುಟುಂಬದವರು ಹೇಳಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಇವರಿಬ್ಬರ ವಿವಾಹ ದಿಲ್ಲಿಯ ದೇವಾಲಯವೊಂದರಲ್ಲಿ ಆಗಿತ್ತು. ಪತ್ನಿ ಈ ವಿವಾಹಕ್ಕೆ ಪೋಷಕರು ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿ ಮನವೊಲಿಸಲು ಸಮಯಾವಕಾಶ ಕೋರಿದ್ದಳು. ಬಹುಶಃ ಇದಕ್ಕೆ ಮನೆಯವರು ಒಪ್ಪಿಗೆ ನೀಡಿರಲಾರರು. ಆದ್ದರಿಂದ ಪತಿಯನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಪೊಲೀಸರು ಪತ್ನಿಯನ್ನು ಕರೆಸಿ ಕೌನ್ಸಿಲಿಂಗ್ ಮಾಡಿದಾಗ, ಪತಿಯ ಜತೆಗೆ ಹೋಗಲು ತನಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ ಎಂದು ಪೊಲೀಸ್ ಅಧೀಕ್ಷಕಿ ಸ್ಮಿತಿ ಚೌಧರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News