‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ನಿಷೇಧಿಸಲು ಹೈಕೋರ್ಟ್‍ಗೆ ಅರ್ಜಿ

Update: 2019-01-06 08:31 GMT

ಹೊಸದಿಲ್ಲಿ, ಜ.6: ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ನಿಷೇಧಿಸಲು ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಗೆ ಆದೇಶ ನೀಡಬೇಕು ಎಂದು ಕೋರಿ ದಿಲ್ಲಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದು ಸಂವಿಧಾನಾತ್ಮಕ ಹುದ್ದೆಯನ್ನು ಅವಮಾನಿಸುವಂತಹದ್ದಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಈ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಸಿನಿಮಾ ಈ ತಿಂಗಳ 11ರಂದು ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಅಂದರೆ ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸುವಂತೆ ಶನಿವಾರ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿದೆ. ಸಿನಿಮಟೋಗ್ರಾಫ್ ಕಾಯ್ದೆಯಡಿ ಈ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೂಜಾ ಮಹಾಜನ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.

ಸಿನಿಮಟೋಗ್ರಫಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಪ್ರಧಾನಿ ಹುದ್ದೆಯ ಘನತೆಗೆ ಚ್ಯುತಿ ತರುವ ಮತ್ತು ಧಕ್ಕೆಯುಂಟು ಮಾಡುವ ಅಂಶಗಳನ್ನು ಈ ಟ್ರೇಲರ್ ಒಳಗೊಂಡಿದೆ. ಇದು ಪ್ರಧಾನಿ ಹುದ್ದೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಮಾಡುವಂಥದ್ದು ಎಂದು ವಾದಿಸಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸಿಬಿಎಫ್‍ಸಿ, ಗೂಗಲ್ ಇಂಡಿಯಾ ಮತ್ತು ಯೂಟ್ಯೂಬ್ ಅನ್ನು ಕೂಡಾ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ ಎಂದು ವಕೀಲೆ ಎ.ಮೈತ್ರಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News