ಇನ್ನು ಮುಂದೆ 20 ನಿಮಿಷಗಳ ಮೊದಲು ನಿಲ್ದಾಣ ತಲುಪದಿದ್ದರೆ, ರೈಲು ಪ್ರಯಾಣ ಸಾಧ್ಯವಿಲ್ಲ!

Update: 2019-01-06 15:31 GMT

ಹೊಸದಿಲ್ಲಿ,ಜ.: ವಿಮಾನ ನಿಲ್ದಾಣಗಳಲ್ಲಿರುವ ಭದ್ರತಾ ತಪಾಸಣೆ ವ್ಯವಸ್ಥೆಯನ್ನು ರೈಲು ನಿಲ್ದಾಣಗಳಲ್ಲಿಯೂ ಜಾರಿಗೆ ತರಲು ರೈಲ್ವೆ ಇಲಾಖೆಯು ಉದ್ದೇಶಿಸಿದೆ. ಹೀಗಾಗಿ ಇನ್ನು ಮುಂದೆ ಪ್ರಯಾಣಿಕರು ಭದ್ರತಾ ತಪಾಸಣೆಯನ್ನು ಮುಗಿಸಿಕೊಳ್ಳಲು ರೈಲು ಹೊರಡುವ ಕನಿಷ್ಠ 15-20 ನಿಮಿಷಗಳ ಮೊದಲೇ ನಿಲ್ದಾಣವನ್ನು ತಲುಪಬೇಕಾಗುತ್ತದೆ. ತಡವಾಗಿ ಆಗಮಿಸಿದರೆ ನಿಲ್ದಾಣವು ಸೀಲ್ ಆಗಿರುತ್ತದೆ ಮತ್ತು ಅವರು ರೈಲು ತಪ್ಪಿಸಿಕೊಳ್ಳಬೇಕಾಗುತ್ತದೆ.

ಈ ಹೈಟೆಕ್ ಭದ್ರತಾ ವ್ಯವಸ್ಥೆಯನ್ನು ಈಗಾಗಲೇ ಈ ತಿಂಗಳು ಕುಂಭಮೇಳ ಆರಂಭಗೊಳ್ಳಲಿರುವ ಅಲಹಾಬಾದ್ ಮತ್ತು ಕರ್ನಾಟಕದ ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ಜಾರಿಗೊಳಿಸಲಾಗಿದೆ. ಇನ್ನೂ 202 ನಿಲ್ದಾಣಗಳಲ್ಲಿ ಜಾರಿಗಾಗಿ ನೀಲನಕ್ಷೆ ಸಿದ್ಧವಾಗಿದೆ ಎಂದು ರೈಲ್ವೆ ರಕ್ಷಣಾ ಪಡೆಯ ಮಹಾ ನಿರ್ದೇಶಕ ಅರುಣ ಕುಮಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ರೈಲ್ವೆ ನಿಲ್ದಾಣಗಳನ್ನು ಸೀಲ್ ಮಾಡುವುದು ನಮ್ಮ ಯೋಜನೆಯಾಗಿದೆ. ಈಗ ಪ್ರವೇಶ ಸಾಧ್ಯವಿರುವ ಹಲವಾರು ತೆರವು ಸ್ಥಳಗಳಿವೆ. ಅವುಗಳನ್ನು ಗುರುತಿಸಿ ಆಯ್ದ ಕೆಲವನ್ನು ಶಾಶ್ವತ ಗೋಡೆಗಳನ್ನು ನಿರ್ಮಿಸುವ ಮೂಲಕ ಮುಚ್ಚಲಾಗುವುದು. ಉಳಿದ ಕಡೆಗಳಲ್ಲಿ ಆರ್‌ಪಿಎಫ್ ಸಿಬ್ಬಂದಿಗಳು ಕಾವಲಿರಲಿದ್ದಾರೆ ಮತ್ತು ಇತರ ಕೆಲವು ಕಡೆಗಳಲ್ಲಿ ಗೇಟ್‌ಗಳನ್ನು ನಿರ್ಮಿಸಲಾಗುವುದು. ಪ್ರತಿಯೊಂದು ಪ್ರವೇಶದ್ವಾರದಲ್ಲಿಯೂ ಭದ್ರತಾ ತಪಾಸಣೆಗಳು ನಡೆಯಲಿವೆ. ಆದರೆ ವಿಮಾನ ನಿಲ್ದಾಣಗಳಂತೆ ಪ್ರಯಾಣಿಕರು ಗಂಟೆಗಟ್ಟಲೆ ಮೊದಲು ಆಗಮಿಸುವ ಅಗತ್ಯವಿಲ್ಲ,ಅವರು ರೈಲು ಹೊರಡುವ ಸಮಯಕ್ಕೆ ಕೇವಲ 15-20 ನಿಮಿಷ ಮೊದಲು ಬಂದರೆ ಸಾಕು ಎಂದರು.

ಭದ್ರತಾ ವ್ಯವಸ್ಥೆ ಹೆಚ್ಚಲಿದ್ದರೂ ಭದ್ರತಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದಿಲ್ಲ. ನಾವು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತೇವೆ ಎಂದರು.

ಈ ಕ್ರಮಗಳು 202 ರೈಲು ನಿಲ್ದಾಣಗಳಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಹೆಚ್ಚಿಸಲು 2016ರಲ್ಲಿ ಒಪ್ಪಿಗೆ ನೀಡಲಾಗಿದ್ದ ಏಕೀಕೃತ ಭದ್ರತಾ ವ್ಯವಸ್ಥೆ(ಐಎಸ್‌ಎಸ್)ಯ ಭಾಗಗಳಾಗಿವೆ.

ಐಎಸ್‌ಎಸ್ ವ್ಯವಸ್ಥೆಯು ಸಿಸಿಟಿವಿ ಕ್ಯಾಮೆರಾಗಳು,ಪ್ರವೇಶ ನಿಯಂತ್ರಣ,ವೈಯಕ್ತಿಕ ಹಾಗೂ ಬ್ಯಾಗೇಜ್ ಸ್ಕ್ರೀನಿಂಗ್,ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಯೋಜನೆಗೆ ಸುಮಾರು 385.06 ಕೋ.ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News