ಗೊತ್ತುಗುರಿಯಿಲ್ಲದೆ ಯುಟ್ಯೂಬ್ ವೀಡಿಯೊ ವೀಕ್ಷಿಸುತ್ತೀರಾ?: ಹಾಗಿದ್ದರೆ ಈ ಅಪಾಯದ ಬಗ್ಗೆ ಎಚ್ಚರಿಕೆಯಿರಲಿ

Update: 2019-01-07 12:17 GMT

ಈ 21ನೇ ಶತಮಾನದಲ್ಲಿ ನಮ್ಮ ಬದುಕುಗಳಲ್ಲಿ ಮತ್ತು ನಮ್ಮ ವ್ಯಕ್ತಿತ್ವಗಳನ್ನು ರೂಪಿಸುವಲ್ಲಿ ಅಂತರ್ಜಾಲದ ಪಾತ್ರದ ಕುರಿತು ನಮಗೆಲ್ಲ ಗೊತ್ತೇ ಇದೆ. ಆದರೆ ಯೂಟ್ಯೂಬ್‌ನಲ್ಲಿ ಗೊತ್ತುಗುರಿಯಿಲ್ಲದೆ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರೆ ಅದು ನಿಮ್ಮ ಭಾವನಾತ್ಮಕ ಸ್ಥಿತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತೇ?

ಅಮೆರಿಕದ ಸೋಷಿಯಲ್ ಸೈಕಾಲಾಜಿಕಲ್ ಆ್ಯಂಡ್ ಪರ್ಸನಾಲಿಟಿ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ನೂತನ ಅಧ್ಯಯನವೊಂದು ಈ ಎಚ್ಚರಿಕೆಯನ್ನು ನೀಡಿದೆ. ಸಂಶೋಧಕರು ವೀಕ್ಷಕರ ಭಾವನಾತ್ಮಕ ಸ್ಥಿತಿಯ ಮೇಲೆ ಯುಟ್ಯೂಬ್ ವೀಡಿಯೊಗಳು ಉಂಟು ಮಾಡುವ ಪರಿಣಾಮಗಳನ್ನು ವಿಶ್ಲೇಷಿಸಿದ ಬಳಿಕ ಇವುಗಳ ನಡುವಿನ ಸಂಬಂಧವನ್ನು ಭಾವನಾತ್ಮಕ ಸೋಂಕು ಎಂದು ಕರೆದಿದ್ದಾರೆ. ಈ ಭಾವನಾತ್ಮಕ ಸೋಂಕು ಭೌತಿಕ ವಾತಾವರಣದಲ್ಲಿ ಸೋಂಕುಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತೆ ಆನ್‌ಲೈನ್‌ ನಲ್ಲಿ ಭಾವನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ವಿದ್ಯಮಾನವಾಗಿದೆ.

ನಮ್ಮ ಸುತ್ತಮುತ್ತಲಿರುವ ಸಾಂಕ್ರಾಮಿಕ ಕಾಯಿಲೆಗಳಿಂದ ಪೀಡಿತ ವ್ಯಕ್ತಿಗಳಿಂದ ನಮಗೆ ಸೋಂಕು ಹರಡುವಂತೆ ಮಾಧ್ಯಮಗಳಿಂದ,ಈ ಪ್ರಕರಣದಲ್ಲಿ ವೀಡಿಯೊಗಳು,ಮೂಡ್ ಹರಡುವ ಸಾಧ್ಯತೆಯಿದೆ ಎಂಬ ನಿರ್ಧಾರಕ್ಕೆ ಸಂಶೋಧಕರು ಬಂದಿದ್ದಾರೆ. ವೀಡಿಯೊಗಳ ಮೂಲಕ ಹರಡುವ ಮೂಡ್ ಅಲ್ಪಕಾಲಿಕ ಸೋಂಕು ಆಗಿರಬಹುದು ಅಥವಾ ಸುದೀರ್ಘ ಕಾಲ ಇರಬಹುದು.

ಹೀಗಾಗಿ ಯುಟ್ಯೂಬಿಗರು ಧನಾತ್ಮಕ ವೀಡಿಯೊಗಳನ್ನು ಪೋಸ್ಟ್ ಮಾಡುವುದರಿಂದ ಅವು ವೀಕ್ಷಕರಲ್ಲಿ ಧನಾತ್ಮಕ ಭಾವನೆಗಳನ್ನು ಹೆಚ್ಚಿಸುತ್ತವೆ ಮತ್ತು ನಕಾರಾತ್ಮಕ ವೀಡಿಯೋಗಳು ನಕಾರಾತ್ಮಕ ಭಾವನಾತ್ಮಕ ಸ್ಥಿತಿಯನ್ನುಂಟು ಮಾಡುತ್ತವೆ. ವಿಶ್ವದಲ್ಲಿಂದು ಜನರು ಪ್ರತಿದಿನ ಸುಮಾರು ಐದು ಕೋಟಿ ಯುಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಯನ ವರದಿಯು ಮಹತ್ವವನ್ನು ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News