ಶಬರಿಮಲೆ ವಿವಾದ: ಸಿಪಿಎಂ, ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ನಾಡ ಬಾಂಬ್ ದಾಳಿ
ಕೋಝಿಕೋಡ್, ಜ. 8: ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಹಿಂಸಾಚಾರ ಮುಂದುವರಿದಿದ್ದು, ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿರುವ ಸಿಪಿಐ (ಎಂ) ಹಾಗೂ ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ನಾಡ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಪಿಐ (ಎಂ)ನ ಪ್ರದೇಶ ಸಮಿತಿಯ ಸದಸ್ಯ ಶಿಜು ಅವರ ಮನೆ ಮೇಲೆ ಮೊದಲು ನಾಡ ಬಾಂಬ್ ದಾಳಿ ನಡೆಯಿತು. ಅನಂತರ ಬಿಜೆಪಿಯ ಸ್ಥಳೀಯ ನಾಯಕ ವಿ.ಕೆ. ಮುಕುಂದನ್ ಮನೆ ಮೇಲೆ ನಾಡ ಬಾಂಬ್ ದಾಳಿ ನಡೆಯಿತು. ಆದಾಗ್ಯೂ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಕೊಯಿಲಾಂಡಿಯಲ್ಲಿರುವ ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ನಾಡ ಬಾಂಬ್ ಎಸೆಯಲಾಗಿತ್ತು. ಕಣ್ಣೂರಿನಿಂದ 18 ನಾಡ ಬಾಂಬ್ ವಶಪಡಿಸಿಕೊಳ್ಳಲಾಗಿತ್ತು. ಋತುಚಕ್ರ ವಯಸ್ಸಿನ ಇಬ್ಬರು ಮಹಿಳೆಯರಾದ ಬಿಂದು ಹಾಗೂ ಕನಕದುರ್ಗ ಕಳೆದ ಬುಧವಾರ ಶಬರಿಮಲೆ ದೇವಾಲಯ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದ ಬಳಿಕ ಕೇರಳದಲ್ಲಿ ಹರತಾಳ ನಡೆಸಲಾಗಿತ್ತು.
ಈ ಸಂದರ್ಭ ವ್ಯಾಪಕ ಹಿಂಸಾಚಾರ ನಡೆದಿತ್ತು. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು 2,187 ಪ್ರಕರಣಗಳನ್ನು ದಾಖಲಿಸಿದ್ದಾರೆ ಹಾಗೂ 6,914 ಜನರನ್ನು ಬಂಧಿಸಿದ್ದಾರೆ.