ಸಿಬಿಐ ಮುಖ್ಯಸ್ಥ ಸ್ಥಾನದಿಂದ ಮತ್ತೆ ಅಲೋಕ್ ವರ್ಮಾರನ್ನು ವಜಾ ಮಾಡಿದ ಕೇಂದ್ರ ಸರಕಾರ

Update: 2019-01-10 16:52 GMT

ಹೊಸದಿಲ್ಲಿ,ಜ.10: ಗುರುವಾರ ಎರಡನೇ ಬಾರಿಗೆ ಸಭೆ ಸೇರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ಸಿಬಿಐ ನಿರ್ದೇಶಕ ಅಲೋಕ್ ವರ್ಮಾರನ್ನು ಎತ್ತಂಗಡಿಗೊಳಿಸಲು ನಿರ್ಧರಿಸಿದೆ.

ಸಿಬಿಐ ವಿಶೇಷ ನಿರ್ದೇಶಕ ರಾಕೇಶ ಅಸ್ತಾನಾರೊಂದಿಗೆ ಬಹಿರಂಗ ಕಲಹದ ಹಿನ್ನೆಲೆಯಲ್ಲಿ ವರ್ಮಾ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದ ಸರಕಾರದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರವಷ್ಟೇ ತಳ್ಳಿಹಾಕಿತ್ತು ಮತ್ತು ಇದರ ಬೆನ್ನಲ್ಲೇ ಸಮಿತಿಯ ನಿರ್ಧಾರ ಹೊರಬಿದ್ದಿದೆ. 77 ದಿನಗಳ ಬಲವಂತದ ರಜೆಯ ಬಳಿಕ ಬುಧವಾರ ಬೆಳಿಗ್ಗೆ ತನ್ನ ಕರ್ತವ್ಯಕ್ಕೆ ಹಾಜರಾಗಿದ್ದ ವರ್ಮಾ ಐವರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದರು ಮತ್ತು ಇತರ 10 ಅಧಿಕಾರಿಗಳ ವರ್ಗಾವಣೆಗಳನ್ನು ರದ್ದುಗೊಳಿಸಿದ್ದರು.

ಪ್ರಧಾನಿ,ಭಾರತದ ಮುಖ್ಯ ನ್ಯಾಯಾಧೀಶರು ಮತ್ತು ಏಕೈಕ ದೊಡ್ಡ ಪ್ರತಿಪಕ್ಷದ ನಾಯಕನನ್ನು ಒಳಗೊಂಡ ಸಮಿತಿಯು ವರ್ಮಾ ಅವರ ಹಣೆಬರಹವನ್ನು ನಿರ್ಧರಿಸುವವರೆಗೆ ಅವರು ಯಾವುದೇ ನೀತಿ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಸರ್ವೋಚ್ಚ ನ್ಯಾಯಾಲಯವು ನಿರ್ಬಂಧಿಸಿತ್ತು. ತನ್ಮಧ್ಯೆ ಸ್ವತಂತ್ರ ತನಿಖೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅತಿಯಾಗಿ ಹೆದರಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ದಾಳಿ ನಡೆಸಿದೆ.

ರಫೇಲ್ ಒಪ್ಪಂದದ ಕುರಿತು ತನಿಖೆಯ ಸಂಭಾವ್ಯತೆಯು ಸಮಿತಿಯ ನಿರ್ಧಾರವನ್ನು ಪ್ರಚೋದಿಸಿದೆ ಎಂದು ಆರೋಪಿಸಿರುವ ಖ್ಯಾತ ನ್ಯಾಯವಾದಿ ಪ್ರಶಾಂತ ಭೂಷಣ್ ಅವರು,ಸಮಿತಿಯು ವರ್ಮಾರ ವಾದವನ್ನು ಆಲಿಸದೆ ಕ್ರಮವನ್ನು ಕೈಗೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ವರ್ಮಾ ಅವರಿಗೆ ತನ ವಾದವನ್ನು ಮಂಡಿಲು ಅವಕಾಶ ನೀಡದೆ ಅವರನ್ನು ಹುದ್ದೆಯಿಂದ ತೆಗೆಯುವ ಮೂಲಕ ಸ್ವತಂತ್ರ ಸಿಬಿಐ ನಿರ್ದೇಶಕರಿಂದ ಅಥವಾ ಜೆಪಿಸಿಯ ಮೂಲಕ ಸಂಸತ್ತಿನ ತನಿಖೆಯ ಬಗ್ಗೆ ತನಗೆ ಅತಿಯಾದ ಭೀತಿಯಿದೆ ಎನ್ನುವುದನ್ನು ಪ್ರಧಾನಿ ಮೋದಿ ಮತ್ತೊಮ್ಮೆ ತೋರಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಸಮಿತಿಯ ಸದಸ್ಯರಾಗಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ತಾನು ವರ್ಮಾಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದರಿಂದ ಸಭೆಯಿಂದ ದೂರವುಳಿದಿದ್ದರು ಮತ್ತು ನ್ಯಾ.ಎ.ಕೆ ಸಿಕ್ರಿ ಅವರನ್ನು ನಿಯೋಜಿಸಿದ್ದರು. ಸಮಿತಿಯ ಇನ್ನೋರ್ವ ಸದಸ್ಯರಾಗಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವರ್ಮಾ ಅವರನ್ನು ಹುದ್ದೆಯಿಂದ ತೆಗೆಯುವ ನಿರ್ಧಾರಕ್ಕೆ ಭಿನ್ನಮತವನ್ನು ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ವರ್ಮಾ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ನೇಮಕಗೊಳಿಸುವ ಸಾಧ್ಯತೆಗಳಿವೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಬುಧವಾರವೂ ಸಮಿತಿಯು ಸಭೆ ಸೇರಿತ್ತಾದರೂ ಅದು ಅಪೂರ್ಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News