ಪೌರತ್ವ ಮಸೂದೆ: ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಗೋಹೈನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
Update: 2019-01-10 20:32 IST
ಗುವಾಹಟಿ,ಜ.10: ಪೌರತ್ವ(ತಿದ್ದುಪಡಿ) ಮಸೂದೆಯ ವಿರುದ್ಧ ಅಸ್ಸಾಂ ರಾಜ್ಯದಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ತನ್ಮಧ್ಯೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಅಸ್ಸಾಮಿ ಸಾಹಿತಿ ಡಾ.ಹಿರೇನ್ ಗೋಹೈನ್,ಹಿರಿಯ ಪತ್ರಕರ್ತ ಮಂಜಿತ್ ಮಹಂತ ಮತ್ತು ಕೆಎಂಎಸ್‌ಎಸ್ ನಾಯಕ ಅಖಿಲ್ ಗೊಗೊಯಿ ಅವರ ವಿರುದ್ಧ ಗುರುವಾರ ದೇಶದ್ರೋಹ ಆರೋಪದಡಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಲ್ಲಿಯ ಲಾತಾಸಿಲ್ ಠಾಣೆಯ ಪೊಲೀಸರು ಐಪಿಸಿಯ ಸಂಬಂಧಿತ ಕಲಮ್ ಗಳಡಿ ಈ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಗುವಾಹಟಿ ಪೊಲೀಸ್ ಆಯುಕ್ತ ದೀಪಕ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ, ಜ.7ರಂದು ನಡೆದಿದ್ದ ‘ನಾಗರಿಕ ಸಮಾಜ್ ’ ಸಭೆಯಲ್ಲಿ ಅವರು ಮಾಡಿದ್ದ ಭಾಷಣಗಳನ್ನು ತಾನು ಪರಿಶೀಲಿಸುತ್ತಿದ್ದೇನೆ ಎಂದರು.
ಈ ಮೂವರು ಪೌರತ್ವ ಮಸೂದೆಯ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ‘ನಾಗರಿಕ ಸಮಾಜ್’ನ ಸದಸ್ಯರಾಗಿದ್ದಾರೆ.