ಚುನಾವಣಾಪೂರ್ವ ಕಸರತ್ತು: ಕೇಂದ್ರದಿಂದ ಸಣ್ಣ ವ್ಯಾಪಾರಿಗಳ ಓಲೈಕೆ

Update: 2019-01-11 04:13 GMT

ಹೊಸದಿಲ್ಲಿ, ಜ.11: ಮೇಲ್ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸುವ ಮೂಲಕ ದೊಡ್ಡ ವರ್ಗವನ್ನು ಬುಟ್ಟಿಗೆ ಹಾಕಿಕೊಳ್ಳಲು ಕಸರತ್ತು ನಡೆಸಿರುವ ಕೇಂದ್ರ ಎನ್‌ಡಿಎ ಸರ್ಕಾರ ಇದೀಗ ಜಿಎಸ್‌ಟಿ ಅನ್ವಯವಾಗುವ ವಹಿವಾಟು ಮಿತಿಯನ್ನು 40 ಲಕ್ಷ ರೂ.ಗೆ ಹೆಚ್ಚಿಸುವ ಮೂಲಕ ಸಣ್ಣ ವ್ಯಾಪಾರಿಗಳ ವಲಯವನ್ನು ಓಲೈಸಲು ಮುಂದಾಗಿದೆ.

ಜಿಎಸ್‌ಟಿ ಕಾಯ್ದೆಯಡಿ ನೋಂದಾಯಿಸಬೇಕಾದ ಉತ್ಪಾದನಾ ಘಟಕಗಳು, ಕಿರಾಣಿ ಮತ್ತು ಸಿದ್ಧ ಉಡುಪು ಮಳಿಗೆಗಳ ವಹಿವಾಟು ಮಿತಿಯನ್ನು ಹಾಲಿ ಇರುವ ವಾರ್ಷಿಕ 20 ಲಕ್ಷ ಮಿತಿಯ ಬದಲು 40 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಗುರುವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಂತೆಯೇ ಬ್ಯೂಟಿಪಾರ್ಲರ್‌ನಂಥ ಸೇವಾ ಪೂರೈಕೆದಾರರು ರಿಟರ್ನ್ಸ್ ಸಲ್ಲಿಸದೇ, ನಿಗದಿತ ಹಂತದ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ಸಣ್ಣ ವ್ಯಾಪಾರಿ ವರ್ಗ ಜಿಎಸ್‌ಟಿ ಭೂತದಿಂದ ಹೊರಬರಲು ಸಾಧ್ಯವಾಗಲಿದೆ.

ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಇಎಸ್‌ಟಿ ಮಂಡಳಿ, ಹಲವು ವಸ್ತುಗಳ ಮೇಲಿನ ತೆರಿಗೆ ದರವನ್ನು ಕಡಿತಗೊಳಿಸಿತ್ತು.
ಆದರೆ ರಾಜ್ಯಗಳು ಈ ಮಿತಿಯನ್ನು 40 ಲಕ್ಷ ರೂ.ಗಿಂತ ಕಡಿಮೆಗೆ ನಿಗದಿಪಡಿಸಲು ಅವಕಾಶ ನೀಡಲಾಗಿದೆ. ಇಷ್ಟಾಗಿಯೂ ಇದರ ಲಾಭ ಸಣ್ಣ ವ್ಯಾಪಾರಿಗಳು ಹಾಗೂ ಉತ್ಪಾದನಾ ಘಟಕಕ್ಕೆ ಲಭಿಸುವುದು ಕಷ್ಟಸಾಧ್ಯ ಎನ್ನುವುದು ತಜ್ಞರ ಅಭಿಮತ. ಏಕೆಂದರೆ ದೊಡ್ಡ ಕಂಪೆನಿಗಳು ಇನ್‌ಪುಟ್ ಕ್ರೆಡಿಟ್ ಪಡೆಯುವ ಸಲುವಾಗಿ ಜಿಎಸ್‌ಟಿ ವ್ಯಾಪ್ತಿಯಲ್ಲೇ ಉಳಿಯುವಂತೆ ಸಣ್ಣ ಘಟಕಗಳ ಮೇಲೆ ಒತ್ತಡ ತರುವ ಸಾಧ್ಯತೆಗಳಿವೆ.

ಸದ್ಯ 11 ಲಕ್ಷ ಘಟಕಗಳು 20 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿದ್ದರೂ, ಜಿಎಸ್‌ಟಿಯಡಿ ನೋಂದಾಯಿಸಿಕೊಂಡಿವೆ. ಅಂತೆಯೇ ಸೇವಾ ವಲಯಕ್ಕೆ ರಿಜಿಸ್ಟ್ರೇಷನ್ ಮಿತಿ ರೂ.20 ಲಕ್ಷವೇ ಮುಂದುವರಿಯಲಿದೆ.

ಜಿಎಸ್‌ಟಿ ಮಂಡಳಿಯ ಹೊಸ ನಿರ್ಧಾರದ ಪ್ರಕಾರ, ಬ್ಯೂಟಿಪಾರ್ಲರ್‌ಗಳು, ಅಟೊಮೊಬೈಲ್ ಸರ್ವೀಸ್ ಸೆಂಟರ್‌ಗಳು ಮತ್ತು 50 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಇತರ ಸೇವಾ ಪೂರೈಕೆದಾರರು ಶೇಕಡ 6ರಷ್ಟು ತೆರಿಗೆ ಪಾವತಿಸಿ, ವಾರ್ಷಿಕ ರಿಟರ್ನ್ಸ್ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News