ಪಾಂಡ್ಯ-ರಾಹುಲ್ ಪ್ರಕರಣ ಶೀಘ್ರ ಇತ್ಯರ್ಥಪಡಿಸಿ

Update: 2019-01-12 18:48 GMT

ಹೊಸದಿಲ್ಲಿ, ಜ.12: ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಅಮಾನತಿಗೆ ಗುರಿಯಾಗಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ವಿರುದ್ಧದ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಅಧ್ಯಕ್ಷ ವಿನೋದ್ ರಾಯ್ ಒತ್ತಾಯಿಸಿದ್ದಾರೆ. ಇಬ್ಬರು ಆಟಗಾರರಿಗೆ ಅಮಾನತು ಪತ್ರವನ್ನು ಶುಕ್ರವಾರ ಸಂಜೆ ತಲುಪಿಸಲಾಗಿದೆ. ಇದೀಗ ತಕ್ಷಣ ತನಿಖಾ ಪ್ರಕ್ರಿಯೆಯನ್ನು ಆರಂಭಿಸಿ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ರಾಹುಲ್ ಜೊಹ್ರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಇಬ್ಬರು ಆಟಗಾರರ ಅಮಾನತಿನಿಂದ ಇದೀಗ ತಂಡದಲ್ಲಿರುವ ಆಟಗಾರರ ಸಂಖ್ಯೆ 13ಕ್ಕೆ ಇಳಿದಿದೆ. ಇವರಲ್ಲಿ ಯಾರಾದರೂ ಗಾಯಾಳುಗಳಾದರೆ ಮತ್ತಷ್ಟು ಸಮಸ್ಯೆಯಾಗುತ್ತದೆ. ಆಟಗಾರರ ಹೇಳಿಕೆಯನ್ನು ತಕ್ಷಣ ದಾಖಲಿಸಿಕೊಳ್ಳಬೇಕು. ಶೀಘ್ರ ವಿಚಾರಣೆ ನಡೆಸಿ, ಆಸ್ಟ್ರೇಲಿಯ ಎದುರಿಗಿನ ದ್ವಿತೀಯ ಏಕದಿನ ಪಂದ್ಯ ಮುಗಿಯುವ ವೇಳೆಗೆ ನಿರ್ಧಾರ ಪ್ರಕಟಿಸಬೇಕು ಎಂದು ರಾಯ್ ಒತ್ತಾಯಿಸಿದ್ದಾರೆ. ಆದರೆ ಈ ಹೇಳಿಕೆಯ ಬಗ್ಗೆ ಆಡಳಿತ ಮಂಡಳಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನಿಖೆಯ ತೀರ್ಮಾನದ ಮೇಲೆ ಪ್ರಭಾವ ಬೀರಲು ಅಧ್ಯಕ್ಷರು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ಆಟಗಾರರಿಗೆ ವಿಧಿಸುವ ಶಿಕ್ಷೆಯು ತಂಡದ ಬಲವನ್ನು ಅವಲಂಬಿಸುತ್ತದೆ ಎಂಬುದು ರಾಯ್ ಹೇಳಿಕೆಯ ಅರ್ಥವಾಗಿರಬಹುದೇ ಎಂದು ಸದಸ್ಯರು ಪ್ರಶ್ನಿಸಿದ್ದಾರೆ. ಅಧ್ಯಕ್ಷರಿಗೆ ಮತ್ತು ಆಟಗಾರರಿಗೆ ಅನುಕೂಲವಾಗುವ ಸಮಯ ನೋಡಿ ವಿಚಾರಣೆ ಮುಂದುವರಿಯಲಿ. ಅವರು ಫ್ರಾಂಚೈಸ್(ಐಪಿಎಲ್ ತಂಡದ ಮಾಲಕರು)ನಿಂದ ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂದು ಸದಸ್ಯರು ಪ್ರಶ್ನಿಸಿದ್ದಾರೆ. ರಾಯ್ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಸಿಒಎ ಸದಸ್ಯೆ ಡಯಾನಾ ಎಡುಲ್ಜಿ, ಆತುರಪಟ್ಟು ತಪ್ಪು ನಿರ್ಧಾರ ಕೈಗೊಳ್ಳುವುದು ಬೇಡ ಎಂದಿದ್ದಾರೆ. ಇಬ್ಬರು ಆಟಗಾರರು ವಾಪಸು ಬಂದರೆ, ಅವರ ಬದಲು ಬೇರೆ ಆಟಗಾರರನ್ನು ಆಯ್ಕೆ ಮಂಡಳಿ ಆಯ್ಕೆ ಮಾಡಲಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News