ಪ್ರಸಿದ್ಧ ನಿರ್ದೇಶಕ ರಾಜ್ ಕುಮಾರ್ ಹಿರಾನಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Update: 2019-01-13 14:50 GMT

ಮುಂಬೈ, ಜ.13: ಮುನ್ನಾಭಾಯಿ ಎಂಬಿಬಿಎಸ್, 3 ಈಡಿಯೆಟ್ಸ್, ಪಿಕೆ ಚಿತ್ರಗಳ ನಿರ್ದೇಶಕ ರಾಜ್ ಕುಮಾರ್ ಹಿರಾನಿಯವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

ಸಂಜು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಸಂದರ್ಭ ಹಿರಾನಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. 2018ರ ಜೂನ್ 29ರಂದು ಸಂಜು ಚಿತ್ರ ಬಿಡುಗಡೆಯಾಗಿತ್ತು.

ಈ ಆರೋಪಗಳನ್ನು ಹಿರಾನಿ ನಿರಾಕರಿಸಿದ್ದಾರೆ. ತನ್ನ ವಿರುದ್ಧದ ಆರೋಪಗಳು ಸುಳ್ಳು ಹಾಗು ಹೆಸರಿಗೆ ಮಸಿ ಬಳಿಯುವಂತಹದ್ದು ಎಂದು ಅವರು ಹೇಳಿದ್ದಾರೆ.

2018,ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಒಂದಕ್ಕಿಂತ ಹೆಚ್ಚು ಬಾರಿ ಹಿರಾನಿ ಅವರು ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದರು ಎಂದು ಸುದ್ದಿ ಜಾಲತಾಣವೊಂದರಲ್ಲಿ ಬರೆದಿರುವ ಲೇಖನದಲ್ಲಿ ಮಹಿಳೆ ಆರೋಪಿಸಿದ್ದಾರೆ. ತಾನು 2018,ನ.3ರಂದು ಹಿರಾನಿಯವರ ದೀರ್ಘಕಾಲದ ಸಹಭಾಗಿ ಮತು ‘ಸಂಜು’ ಚಿತ್ರದ ಸಹನಿರ್ಮಾಪಕ ವಿಧು ವಿನೋದ ಚೋಪ್ರಾ ಅವರಿಗೆ ಕಳುಹಿಸಿದ್ದ ಇ-ಮೇಲ್‌ನಲ್ಲಿಯೂ ಈ ಆರೋಪಗಳನ್ನು ಮಾಡಿದ್ದಾಗಿ ಮಹಿಳೆ ಬರೆದಿದ್ದಾರೆ. ಹಿರಾನಿ ಅವರನ್ನು ತಾನು ತಂದೆಯಂತೆ ಕಾಣುತ್ತಿದ್ದೆ ಎಂದೂ ಅವರು ಹೇಳಿದ್ದಾರೆ.

ಚೋಪ್ರಾರ ಪತ್ನಿ,ಚಿತ್ರ ವಿಮರ್ಶಕಿ ಮತ್ತು ನಿರ್ದೇಶಕಿ ಅನುಪಮಾ,‘ಸಂಜು’ ಚಿತ್ರಕಥಾ ಲೇಖಕ ಅಭಿಜಿತ್ ಜೋಶಿ ಹಾಗೂ ನಿರ್ಮಾಪಕಿ ಮತ್ತು ಚೋಪ್ರಾರ ಸೋದರಿ ಶೆಲ್ಲಿ ಚೋಪ್ರಾ ಅವರಿಗೂ ಮೇಲ್ ಕಳುಹಿಸಿದ್ದೆ ಎಂದಿದ್ದಾರೆ.

ತನ್ನ ತಂದೆ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದರಿಂದ ತನಗೆ ಉದ್ಯೋಗದ ಅಗತ್ಯವಿತ್ತು,ಹೀಗಾಗಿ ಹಿರಾನಿಯವರ ಕಿರುಕುಳವನ್ನು ಅವುಡುಗಚ್ಚಿ ಸಹಿಸಿಕೊಂಡಿದ್ದೆ. ಅವರಿಗೆ ವಿಧೇಯಳಾಗಿರುವುದು ಬಿಟ್ಟರೆ ತನಗೆ ಬೇರೆ ಆಯ್ಕೆಯಿರಲಿಲ್ಲ. ತಾನು ಮಧ್ಯದಲ್ಲಿಯೇ ಕೆಲಸವನ್ನು ಬಿಟ್ಟರೆ ಮತ್ತು ಹಿರಾನಿ ಪ್ರಭಾವಶಾಲಿಯಾಗಿರುವುದರಿಂದ ಅವರು ತನ್ನ ವಿರುದ್ಧ ಮಾತನಾಡಿದರೆ ತನಗೆ ಚಿತ್ರರಂಗದಲ್ಲಿ ಇನ್ನೊಂದು ಉದ್ಯೋಗ ಕಂಡುಕೊಳ್ಳುವುದು ಅಸಾಧ್ಯವಾಗುತ್ತಿತ್ತು ಎಂದು ಆಕೆ ಲೇಖನದಲ್ಲಿ ಗೋಳು ತೋಡಿಕೊಂಡಿದ್ದ್ದಾರೆ.

ಮಹಿಳೆ ತನ್ನ ಸಂಕಷ್ಟವನ್ನು ತನ್ನ ಬಳಿ ಹಂಚಿಕೊಂಡಿದ್ದನ್ನು ಅನುಪಮಾ ಒಪ್ಪಿಕೊಂಡಿದ್ದಾರೆ. ಲೈಂಗಿಕ ಕಿರುಕುಳದ ದೂರುಗಳನ್ನು ಪರಿಶೀಲಿಸಲು ವಿನೋದ ಚೋಪ್ರಾ ಫಿಲ್ಮ್ಸ್ ಸಮಿತಿಯೊಂದನ್ನು ರಚಿಸಿದೆ. ‘ನಾನು ಮಹಿಳೆಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದೇನೆ. ನಾವು ಈ ವಿಷಯದಲ್ಲಿ ಮಧ್ಯಸ್ಥಿಕೆದಾರರು ಅಥವಾ ನ್ಯಾಯಾಧೀಶರಾಗಲು ಸಾಧ್ಯವಿಲ್ಲದ್ದರಿಂದ ಕಾನೂನಿನ ಮೊರೆ ಹೋಗುವಂತೆ ನಾವು ಸೂಚಿಸಿದ್ದೇವೆ ’ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News