ಸರಕಾರದ ಕೈಗೊಂಬೆ ಸಿವಿಸಿ ಚೌಧರಿಯನ್ನು ವಜಾಗೊಳಿಸಿ: ಕಾಂಗ್ರೆಸ್ ಆಗ್ರಹ

Update: 2019-01-13 14:47 GMT

ಹೊಸದಿಲ್ಲಿ,ಜ.13: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಜಾ ಕುರಿತ ವಿವಾದದ ನಡುವೆಯೇ ಕಾಂಗ್ರೆಸ್ ಪಕ್ಷವು ಮುಖ್ಯ ಜಾಗ್ರತ ಆಯುಕ್ತ(ಸಿವಿಸಿ)ಕೆ.ವಿ.ಚೌಧರಿ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಆಗ್ರಹಿಸಿದೆ. ಸಿವಿಸಿ ಸರಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂದು ಅದು ಆರೋಪಿಸಿದೆ.

ರವಿವಾರ ಇಲ್ಲಿ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು,ಸಿವಿಸಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಇಲ್ಲವೇ ಅವರು ರಾಜೀನಾಮೆಯನ್ನು ನೀಡಬೇಕು,ಏನೇ ಆದರೂ ಅವರು ತೊಲಗಲೇಬೇಕು ಎಂದು ಹೇಳಿದರು.

ರಫೇಲ್ ಪ್ರಕರಣದಲ್ಲಿ ಯಾವುದೇ ವಿಚಾರಣೆಯನ್ನು ತಪ್ಪಿಸಲು ಚೌಧರಿಯವರು ಕೈಗೊಂಬೆಯಂತೆ ವರ್ತಿಸುವಂತೆ ಮಾಡಲಾಗುತ್ತಿದೆ ಎಂದ ಅವರು, ಸಿವಿಸಿ ಸರಕಾರದ ರಾಯಭಾರಿ, ಸಂದೇಶವಾಹಕನಂತೆ ವರ್ತಿಸುತ್ತಿದ್ದಾರೆ ಮತ್ತು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಪರ ಲಾಬಿ ಮಾಡುತ್ತಿದ್ದಾರೆ. ತಾನು ಸಾರ್ವಜನಿಕರ ಹಿತಕ್ಕಾಗಿ ವಿಚಕ್ಷಣಾ ಕರ್ತವ್ಯವನ್ನು ನಿರ್ವಹಿಸಬೇಕು ಮತ್ತು ರಾಜಕೀಯ ಧಣಿಗಳ ಕೈಗೊಂಬೆಯಾಗಬಾರದು ಎನ್ನುವುದನ್ನು ಅವರು ಮರೆತಿದ್ದಾರೆ ಎಂದು ಆರೋಪಿಸಿದರು.

ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳಲ್ಲಿಯ ವಸ್ತುನಿಷ್ಠ ಅಂಶಗಳನ್ನು ಆಧರಿಸಿ ತನ್ನ ಪಕ್ಷದ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದೇನೆ ಎಂದ ಸಿಂಘ್ವಿ,ಈ ಮಾಹಿತಿಗಳು ತಕ್ಷಣದ ಕ್ರಮವನ್ನು ಅಗತ್ಯವಾಗಿಸಿವೆ ಮತ್ತು ಇದು ಸಿವಿಸಿಯವರನ್ನು ವಜಾಗೊಳಿಸುವುದರಿಂದ ಆರಂಭಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News