ದುಬೈ: ರಾಹುಲ್ ಗಾಂಧಿಗೆ ‘ಪ್ರಶ್ನೆ ಕೇಳಿದ’ ಬಾಲಕಿಯ ಫೋಟೊ 3 ವರ್ಷ ಹಳೆಯದು

Update: 2019-01-14 10:30 GMT

“ದುಬೈಯಲ್ಲಿ ಪುಟ್ಟ ಬಾಲಕಿಯ ಪ್ರಶ್ನೆಗಳಿಂದ ತಬ್ಬಿಬ್ಬಾದ ರಾಹುಲ್ ಗಾಂಧಿ” ಎನ್ನುವ ತಲೆಬರಹದೊಂದಿಗೆ ಹಲವು ಮಾಧ್ಯಮಗಳು ಸುದ್ದಿಯೊಂದನ್ನು ವರದಿ ಮಾಡಿತ್ತು. ದುಬೈ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸುವಾಗ ಬಾಲಕಿಯೊಬ್ಬಳು ಅವರಿಗೆ ಪ್ರಶ್ನೆಯನ್ನು ಕೇಳಿದ್ದು, ಈ ಪ್ರಶ್ನೆಗೆ ಉತ್ತರಿಸಲಾಗದೆ ರಾಹುಲ್ ತಡವರಿಸಿದ್ದರಲ್ಲದೆ, ಆಯೋಜಕರು ಕಾರ್ಯಕ್ರಮದ ಲೈವ್ ಅನ್ನು ಕೆಲ ಕಾಲ ಸ್ಥಗಿತಗೊಳಿಸಿದ್ದರು ಎಂದು ‘ಮೈ ನೇಶನ್’ ಸೇರಿದಂತೆ ಕನ್ನಡದ ಕೆಲ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.

“ಹಲವು ದಶಕಗಳ ಕಾಲ ಭಾರತದಲ್ಲಿ ಅಧಿಕಾರದಲ್ಲಿದ್ದುದಕ್ಕಾಗಿ ಕಾಂಗ್ರೆಸ್ ಹೆಮ್ಮೆ ಪಡುತ್ತಿದೆ. ಆದರೆ ಈವರೆಗೂ ಅಭಿವೃದ್ಧಿ ಯಾಕಾಗಿಲ್ಲ, ಇನ್ನಾದರೂ ಆಗಬಹುದೇ?” ಹಾಗು “ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ವಿಶ್ವದಲ್ಲಿ ಮನ್ನಣೆ ಸಿಕ್ಕಿದೆ. ಭ್ರಷ್ಟಾಚಾರ ಮುಕ್ತ ಭಾರತದ ಭರವಸೆಯೊಂದಿಗೆ ಮತ ಕೇಳಬೇಕೇ ಹೊರತು ಜಾತಿಯ ಆಧಾರದಲ್ಲಿ ಅಲ್ಲ” ಎಂದು ಬಾಲಕಿ ಹೇಳಿದ್ದಾಗಿ, ಬಾಲಕಿಯ ಪ್ರಶ್ನೆಯಿಂದ ಕಾರ್ಯಕ್ರಮದ ಆಯೋಜಕರು, ಸಭಿಕರು ಒಂದು ಕ್ಷಣ ಸ್ತಬ್ಧರಾಗಿದ್ದಾಗಿ ‘ಮೈ ನೇಶನ್' ವರದಿ ಮಾಡಿತ್ತು. ಕನ್ನಡದಲ್ಲಿ ‘ಉದಯವಾಣಿ’, ‘ಕನ್ನಡ ಪ್ರಭ’, ‘ನ್ಯೂಸ್ 13’ ಸೇರಿ ಕೆಲ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿದ್ದವು.

ಆದರೆ ಈ ಆರೋಪಗಳಿಗೆ ಯಾವುದೇ ಸಾಕ್ಷಿಗಳನ್ನಾಗಲೀ, ವಿಡಿಯೋಗಳನ್ನಾಗಲೀ ಪ್ರಕಟಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಸಾವಿರಾರು ಮಂದಿ ಶೇರ್ ಮಾಡಿದ್ದರು. ಎಂದಿನಂತೆ ತನ್ನ ಚಾಳಿ ಮುಂದುವರಿಸಿದ ನಕಲಿ, ಸುಳ್ಳು ಸುದ್ದಿಗಳನ್ನು ಪ್ರಕಟಿಸುವ 'ಪೋಸ್ಟ್ ಕಾರ್ಡ್' ಕೂಡ ಈ ಸುಳ್ಳನ್ನು ಪ್ರಕಟಿಸಿತು. ಅಷ್ಟೇ ಏಕೆ ಸಂಸದ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಾಕಿದ್ದಾರೆ. ಈ ಎಲ್ಲಾ ಆರೋಪಗಳು ಅದರಲ್ಲಿದ್ದವು. ಈ ಪೋಸ್ಟ್ 2500ಕ್ಕೂ ಹೆಚ್ಚು ಶೇರ್ ಆಗಿತ್ತು.

ಈ ಹಿಂದೆಯೂ ಹಲವು ಬಾರಿ ನಕಲಿ ಸುದ್ದಿಗಳನ್ನು ಶೇರ್ ಮಾಡಿದ್ದ ಆರ್ ಬಿಐ ನಿರ್ದೇಶಕ ಗುರುಮೂರ್ತಿ ಈ ಬಾರಿಯೂ ಟ್ವಿಟರ್ ನಲ್ಲಿ ಈ ಸುಳ್ಳನ್ನು ಶೇರ್ ಮಾಡಿದ್ದರು.

ಸತ್ಯವೇನು?

ಈ ಬಗ್ಗೆ 'ಆಲ್ಟ್ ನ್ಯೂಸ್' ಫ್ಯಾಕ್ಟ್ ಚೆಕ್ ಮಾಡಿದಾಗ 'ರಾಹುಲ್ ತಬ್ಬಿಬ್ಬು' ಎನ್ನುವ ಸುದ್ದಿಯಲ್ಲಿರುವ ಫೋಟೊ 3 ವರ್ಷ ಹಳೆಯದ್ದೆಂದು ತಿಳಿದು ಬಂತು. ರಾಹುಲ್ ಗಾಂಧಿ ಬಾಲಕಿಯ ಪ್ರಶ್ನೆಯಿಂದ ತಬ್ಬಿಬ್ಬಾಗಿದ್ದಾರೆ ಎನ್ನುವ ತಲೆಬರಹದೊಂದಿಗೆ ವಿವಿಧ ವೆಬ್ ಸೈಟ್ ಗಳು, ಪ್ರತಾಪ್ ಸಿಂಹ ಶೇರ್ ಮಾಡಿರುವ ವಿಡಿಯೋದಲ್ಲಿರುವ ಬಾಲಕಿಯ ಫೋಟೊ 3 ವರ್ಷಗಳಷ್ಟು ಹಳೆಯದ್ದು ಎನ್ನುವುದು ತಿಳಿದು ಬಂತು.

‘ಸೇವ್ ಗರ್ಲ್ ಚೈಲ್ಡ್- ಪವರ್ ಫುಲ್ ಸ್ಪೀಚ್ ಬೈ ಸಿದ್ಧಿ ಬಾಗ್ವೆ’ ಎನ್ನುವ ಟೈಟಲ್ ನೊಂದಿಗೆ 3 ವರ್ಷಗಳ ಹಿಂದೆ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋದಲ್ಲಿ ಬಾಲಕಿಯೊಬ್ಬಳು ಮಾತನಾಡುತ್ತಾಳೆ. ಆ ಬಾಲಕಿಯ ಫೋಟೊವನ್ನು ಈ ಸುಳ್ಳು ಸುದ್ದಿಯನ್ನು ಹರಡಲು ಬಳಸಲಾಗಿದೆ. ಮುಂಬೈ ವಿಖ್ರೋಲಿ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮ 3 ವರ್ಷಗಳ ಹಿಂದೆ ನಡೆದಿತ್ತು.

ಇನ್ನೊಂದು ವಿಚಾರವನ್ನು ಹೇಳುವುದಾದರೆ ಅಬುಧಾಬಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಹೊರತುಪಡಿಸಿ ರಾಹುಲ್ ಗಾಂಧಿ ಭಾಗವಹಿಸಿದ್ದ 2 ಕಾರ್ಯಕ್ರಮಗಳು ಎಂದರೆ ವಿವಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಕಾರ್ಮಿಕ ಕ್ಯಾಂಪ್ ನಲ್ಲಿ ಕಾರ್ಮಿಕರ ಜೊತೆ ಮಾತುಕತೆ.

ಈ ಮೂರೂ ಕಾರ್ಯಕ್ರಮಗಳಲ್ಲಿ ಬಾಲಕಿಯರು ಯಾರು ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ. ರಾಹುಲ್ ಗಾಂಧಿಯವರ ದುಬೈ ಪ್ರವಾಸದ ಬಗ್ಗೆ ವರದಿಯ ಉಸ್ತುವಾರಿ ವಹಿಸಿದ್ದ ಇಬ್ಬರು ಪತ್ರಕರ್ತರಾದ ಎಲ್ವಿಸ್ ಚುಮ್ಮಾರ್ ಮತ್ತು ರಾಜು ಮ್ಯಾಥ್ಯೂ ಅವರನ್ನು ಆಲ್ಟ್ ನ್ಯೂಸ್ ಸಂಪರ್ಕಿಸಿದ್ದು ಇಬ್ಬರೂ ಈ ಸುದ್ದಿಯನ್ನು “100 ಶೇ. ಸುಳ್ಳು” ಎಂದು ಸ್ಪಷ್ಟಪಡಿಸಿದ್ದಾರೆ.

ಕೃಪೆ: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News