ರಫೇಲ್ ಆಡಿಟ್ ವಿವರಗಳ ಬಹಿರಂಗಕ್ಕೆ ಸಿಎಜಿ ನಿರಾಕರಣೆ

Update: 2019-01-15 15:50 GMT

ಹೊಸದಿಲ್ಲಿ,ಜ.15: ವಿವಾದಾತ್ಮಕ ರಫೇಲ್ ಒಪ್ಪಂದದ ಕುರಿತು ತನ್ನ ಆಡಿಟ್ ವಿವರಗಳನ್ನು ಬಹಿರಂಗಗೊಳಿಸಲು ಮಹಾ ಲೇಖಪಾಲ(ಸಿಎಜಿ)ರ ಕಚೇರಿಯು ನಿರಾಕರಿಸಿದೆ. ಆಡಿಟ್ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಈ ಹಂತದಲ್ಲಿ ಅದನ್ನು ಬಹಿರಂಗಗೊಳಿಸಿದರೆ ಸಂಸತ್ತಿನ ಹಕ್ಕುಚ್ಯುತಿಯಾಗುತ್ತದೆ ಎಂದು ಆರ್‌ಟಿಐ ಉತ್ತರವೊಂದರಲ್ಲಿ ಅದು ತಿಳಿಸಿದೆ.

ಆಡಿಟ್ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಮತ್ತು ವರದಿಯನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಮಾಹಿತಿಯನ್ನು ಬಹಿರಂಗಗೊಳಿಸಿದರೆ ಅದು ಸಂಸತ್ತಿನ ಹಕ್ಕುಚ್ಯುತಿಗೆ ಕಾರಣವಾಗುವುದರಿಂದ ಆರ್‌ಟಿಐ ಕಾಯ್ದೆಯ ಕಲಂ 8(1)(ಸಿ) ಅಡಿ ಅದನ್ನು ಒದಗಿಸಲು ಸಾಧ್ಯವಿಲ್ಲ ಎಂದು ಸಿಎಜಿಯಿಂದ ವರದಿಯನ್ನು ಕೋರಿದ್ದ ಪುಣೆಯ ಆರ್‌ಟಿಐ ಕಾರ್ಯಕರ್ತ ವಿಹಾರ್ ದುರ್ವೆ ಅವರಿಗೆ ನೀಡಿರುವ ಉತ್ತರದಲ್ಲಿ ತಿಳಿಸಲಾಗಿದೆ. ಆರ್‌ಟಿಐ ಕಾಯ್ದೆಯ ಕಲಂ 8(1)(ಸಿ) ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸುವುದು ಸಂಸತ್ತು ಅಥವಾ ರಾಜ್ಯ ಶಾಸಕಾಂಗದ ಹಕ್ಕುಚ್ಯುತಿಗೆ ಕಾರಣವಾಗುತ್ತಿದ್ದರೆ ಅದನ್ನು ಬಹಿರಂಗಗೊಳಿಸುವುದರಿಂದ ವಿನಾಯಿತಿಯನ್ನು ನೀಡಿದೆ.

ರಫೇಲ್ ಒಪ್ಪಂದದ ಆಡಿಟ್‌ಗೆ ಸಂಬಂಧಿಸಿದಂತೆ ಯಾವುದೇ ಸರಕಾರಿ ಇಲಾಖೆ ಅಥವಾ ರಾಜಕೀಯ ಪಕ್ಷಗಳೊಂದಿಗೆ ತನ್ನ ಪತ್ರವ್ಯವಹಾರವನ್ನು ಹಂಚಿಕೊಳ್ಳಲೂ ಸಿಎಜಿ ನಿರಾಕರಿಸಿದೆ. ಇಂತಹ ದಾಖಲೆಗಳು ಗೋಪ್ಯತೆಯನ್ನು ಹೊಂದಿರುವುದರಿಂದ ಆರ್‌ಟಿಐ ಕಾಯ್ದೆಯಡಿ ಅವುಗಳಿಗೆ ವಿನಾಯಿತಿಯಿದೆ ಎಂದೂ ಸಿಎಜಿ ದುರ್ವೆಯವರಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದೆ.

ಭಾರತೀಯ ವಾಯುಪಡೆಯಲ್ಲಿ ಆಡಿಟ್ ಕಾರ್ಯವನ್ನು ಪಡೆಯಿಂದ ನಿಯೋಜಿತ ಪ್ರಧಾನ ಆಡಿಟ್ ಅಧಿಕಾರಿ ನಿರ್ವಹಿಸಿದ್ದಾರೆ ಮತ್ತು ವರದಿಗಳನ್ನು ಅನುಮೋದನೆಗಾಗಿ ತನಗೆ ಸಲ್ಲಿಸಲಾಗಿದೆ ಎಂದೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News