ಭಾರತದ ಫುಟ್ಬಾಲ್ ಕೋಚ್ ರಾಜೀನಾಮೆ

Update: 2019-01-15 18:53 GMT

ಹೊಸದಿಲ್ಲಿ, ಜ.15: 2019ರ ಏಶ್ಯಕಪ್ ಫುಟ್ಬಾಲ್ ಟೂರ್ನಿಯಿಂದ ಭಾರತ ಹೊರಬಿದ್ದಿರುವುದರಿಂದ ನೈತಿಕ ಹೊಣೆ ಹೊತ್ತು ತಂಡದ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ಎಎಫ್‌ಸಿ ಏಶ್ಯಕಪ್ ಫುಟ್ಬಾಲ್‌ನಲ್ಲಿ 91ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸಿದ ಬಹರೈನ್‌ತಂಡದ ಜಮಾಲ್ ರಶೀದ್ ತನ್ನ ತಂಡಕ್ಕೆ ಭಾರತ ವಿರುದ್ಧ ರೋಚಕ ಗೆಲುವು ತಂದು ಕೊಟ್ಟರು. ಈ ಕುರಿತು ಮಾತನಾಡಿರುವ ಅವರು, ‘‘ನಾನು ನಾಲ್ಕು ವರ್ಷಗಳಿಂದ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಏಶ್ಯಕಪ್ ಟೂರ್ನಿಗೆ ಅರ್ಹತೆ ಪಡೆಯುವುದು ಮೊದಲಿನಿಂದಲೂ ನನ್ನ ಗುರಿಯಾಗಿತ್ತು. ಆ ಕನಸು ನನಸಾಗಿದೆ’’ ಎಂದಿದ್ದಾರೆ.

‘‘ಆಟಗಾರರು ನೀಡಿರುವ ಪ್ರದರ್ಶನ ಸಂಪೂರ್ಣ ತೃಪ್ತಿ ತಂದಿದೆ. ನನಗೆ ಸಹಕಾರ ಒದಗಿಸಿದ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ, ಅಧಿಕಾರಿಗಳಾದ ಕುಶಾಲ್ ದಾಸ್, ಪ್ರಫುಲ್ ಪಟೇಲ್ ಮತ್ತು ಅಭಿಷೇಕ್ ಯಾದವ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಅವಧಿ ಮುಗಿದಿದೆ ಎಂದೆನಿಸುತ್ತದೆ. ನಾನು ನೀಡಿದ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದೇನೆ. ಈಗ ತೆರಳುವ ಸಮಯ’’ ಎಂದು ಕಾನ್‌ಸ್ಟಂಟೈನ್ ಹೇಳಿದ್ದಾರೆ.

56 ವರ್ಷದ ಕಾನ್‌ಸ್ಟಂಟೈನ್, ಆರಂಭದಲ್ಲಿ 2002-2005 ರ ಅವಧಿಯಲ್ಲಿ ಭಾರತ ತಂಡದ ಕೋಚ್ ಆಗಿದ್ದರು. ಆ ಬಳಿಕ ಮತ್ತೆ 2015ರಲ್ಲಿ ಕೋಚ್ ಹುದ್ದೆಯನ್ನು ಅವರಿಗೆ ಮತ್ತೆ ನೀಡಲಾಗಿತ್ತು. ಸುಮಾರು 8 ವರ್ಷಗಳ ಬಳಿಕ ತಂಡವನ್ನು ಏಶ್ಯಕಪ್ ಟೂರ್ನಿಯವರೆಗೂ ಅವರು ಕರೆತಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News