×
Ad

ಮಹಾ ಮೈತ್ರಿಕೂಟದಿಂದ ದಿಢೀರ್ ನಿರ್ಗಮನಕ್ಕೆ ಕಾರಣ ತಿಳಿಸಿದ ನಿತೀಶ್ ಕುಮಾರ್

Update: 2019-01-16 22:00 IST

ಪಾಟ್ನಾ,ಜ.16: ಮಾಜಿ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ನಿಲುವೊಂದನ್ನು ತಳೆಯುವಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಅಸಾಮರ್ಥ್ಯ ಪ್ರತಿಪಕ್ಷ ಮೈತ್ರಿಕೂಟದಿಂದ ತನ್ನ ದಿಢೀರ್ ನಿರ್ಗಮನಕ್ಕೆ ಕಾರಣವಾಗಿತ್ತು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.

2015ರ ಬಿಹಾರ ವಿಧಾನದಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ಗೆ 40 ಕ್ಷೇತ್ರಗಳು ದೊರಕುವಂತಾಗುವಲ್ಲಿ ತನ್ನ ಪಕ್ಷವು ಪ್ರಮುಖ ಪಾತ್ರವನ್ನು ವಹಿಸಿತ್ತು ಎಂದು ಜೆಡಿಯು ಮುಖ್ಯಸ್ಥರೂ ಆಗಿರುವ ನಿತೀಶ್ ಹೇಳಿದರು.

ಆಗ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ತಾನು ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮಾಡಬಹುದಾದ ಹೇಳಿಕೆಯನ್ನೂ ನೀಡದೆ ತನ್ನನ್ನು ಕಡೆಗಣಿಸಿದ್ದರು ಎಂದೂ ಅವರು ಹೇಳಿದರು. ಸಿಬಿಐ ಭ್ರಷ್ಟಾಚಾರದ ಆರೋಪಗಳಲ್ಲಿ ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಳಿಕ ಮತ್ತು ತನ್ನ ಹಾಗೂ ಆರ್‌ ಜೆಡಿ ನಡುವೆ ಬಿರುಕು ಮೂಡಿದ ಬಳಿಕ ನಿತೀಶ್ 2017,ಜುಲೈನಲ್ಲಿ ಜೆಡಿಯು,ಕಾಂಗ್ರೆಸ್ ಮತ್ತು ಆರ್‌ಜೆಡಿಯನ್ನೊಳಗೊಂಡಿದ್ದ ಮೈತ್ರಿಕೂಟದಿಂದ ಹೊರಗೆ ಬಂದಿದ್ದರು.

‘ನನಗೆ ಬೇರೆ ಆಯ್ಕೆಯಿಲ್ಲದ್ದರಿಂದ ನಾನು ಹುದ್ದೆಗೆ ರಾಜೀನಾಮೆ ನೀಡಿದ್ದೆ. ಅದರ ಬೆನ್ನಲ್ಲೇ ಬಿಜೆಪಿ ಬೆಂಬಲದ ಕೊಡುಗೆಯನ್ನು ನನ್ನ ಮುಂದಿರಿಸಿತ್ತು. ಹೀಗಾಗಿ ಬಿಹಾರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಜೊತೆ ಕೈಸೇರಿಸಲು ನಾನು ನಿರ್ಧರಿಸಿದ್ದೆ ’ ಎಂದ ಅವರು, ‘ಅಯೋಧ್ಯೆ,370ನೇ ವಿಧಿ ಮತ್ತು ಏಕರೂಪ ನಾಗರಿಕ ಸಂಹಿತೆಯಂತಹ ವಿಷಯಗಳಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿವೆ, ನಿಜ. ಆದರೆ 1999ರಲ್ಲಿ ಎನ್‌ ಡಿಎ ರಚನೆಯಾಗುವ ಮೊದಲೇ ನಾನು ಬಿಜೆಪಿಯ ಒಡನಾಟವನ್ನು ಹೊಂದಿದ್ದೆ. ಆದರೆ ನಾವು ಸದಾ ಸೌಹಾರ್ದದಿಂದಲೇ ಕಾರ್ಯ ನಿರ್ವಹಿಸಿದ್ದೇವೆ. ಈಗಲೂ ನಮಗೆ ನರೇಂದ್ರ ಮೋದಿ ಸರಕಾರದಿಂದ ಸಂಪೂರ್ಣ ಬೆಂಬಲ ಲಭಿಸುತ್ತಿದೆ ಎಂದರು.

2013ರಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿಯನ್ನಾಗಿ ಬಿಂಬಿಸುವ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿಂದಾಗಿ ನಿತೀಶ್ ಬಿಜೆಪಿ ಜೊತೆ ಸಂಬಂಧವನ್ನು ಕಡಿದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News