90 ಸಾವಿರ ಕೋಟಿ ರೂ. ಉಳಿಸಿದ್ದೇವೆ ಎಂದ ಮೋದಿ: ಪ್ರಧಾನಿ ಹೇಳಿಕೆಯಲ್ಲಿ ಸತ್ಯಾಂಶವೆಷ್ಟು?

Update: 2019-01-16 17:24 GMT

“ಹಿಂದಿನ ಸರ್ಕಾರಗಳ ಅಧಿಕಾರಾವಧಿಯಲ್ಲಿ ಸೋರಿಕೆಯಾಗುತ್ತಿದ್ದ ಸುಮಾರು 90 ಸಾವಿರ ಕೋಟಿ ರೂಪಾಯಿಗಳನ್ನು ನಮ್ಮ ಸರ್ಕಾರ ಉಳಿಸಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ.

"ಹಿಂದಿನ ಸರ್ಕಾರಗಳ ಅಧಿಕಾರಾವಧಿಯಲ್ಲಿ ಸಾರ್ವಜನಿಕ ಹಣ ಲೂಟಿ ಮಾಡುತ್ತಿದ್ದ ಮಧ್ಯವರ್ತಿಗಳ ಅಕ್ರಮವನ್ನು ನಾವು ಕೊನೆಗಾಣಿಸಿದ್ದೇವೆ. ಆರು ಲಕ್ಷಕ್ಕೂ ಅಧಿಕ ನಕಲಿ ಪಡಿತರ ಚೀಟಿಗಳನ್ನು, ಎಲ್‍ ಪಿಜಿ ಸಂಪರ್ಕ ಮತ್ತು ಬೋಗಸ್ ಪಿಂಚಣಿಯನ್ನು ಪತ್ತೆ ಮಾಡಿದ್ದೇವೆ" ಎಂದು ಒಡಿಶಾದ ಬಾಲನ್‍ ಗಿರ್ ರ‍್ಯಾಲಿಯಲ್ಲಿ ಮಾತನಾಡುತ್ತಾ ಮೋದಿ ಹೇಳಿದ್ದರು.

“ಕೇಂದ್ರ ಸರ್ಕಾರ ಕೆಲ ವ್ಯಕ್ತಿಗಳ ಅಕ್ರಮ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿರುವುದರಿಂದ ಅವರು ಇದೀಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ದೇಶದ ಚೌಕಿದಾರ (ಕಾವಲುಗಾರ)ನನ್ನು ಕಿತ್ತೆಸೆಯಲು ಕೈಗೂಡಿಸಿದ್ದಾರೆ” ಎಂದು ಮೋದಿ ಆಪಾದಿಸಿದ್ದರು.

ಕೇಂದ್ರ ಸರ್ಕಾರದ ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಉಲ್ಲೇಖಿಸಿ ಮೋದಿ ಈ ಹೇಳಿಕೆ ನೀಡಿದ್ದರು. ಭಾರತದ ಕಲ್ಯಾಣ ವ್ಯವಸ್ಥೆಯು ಫಲಾನುಭವಿಗಳಿಗೆ ನಿಖರವಾಗಿ ತಲುಪಲು ಈ ವ್ಯವಸ್ಥೆ ದಾರಿ ಮಾಡಿಕೊಟ್ಟಿದೆ.

ಆದಾಗ್ಯೂ ಮೋದಿ ಹೇಳಿಕೆಯನ್ನು ಪರಿಶೀಲಿಸಿದರೆ ಹಾಗೂ ಡಿಬಿಟಿ ಮತ್ತು ಆಧಾರ್ ಸಂಬಂಧಿತ ಉಳಿತಾಯದ ವಿಚಾರದಲ್ಲಿ ಸರ್ಕಾರದ ಪ್ರತಿಪಾದನೆ ಬಗ್ಗೆ ವಿಸ್ತೃತವಾಗಿ 3 ಪ್ರಮುಖ ಸಮಸ್ಯೆಗಳು ಇವೆ.

ಮೊದಲು ಮತ್ತು ನಂತರ

ಮೊದಲನೇ ಅಂಶವೆಂದರೆ, ಡಿಬಿಟಿ ಯೋಜನೆಯನ್ನು ಮೋದಿ ಸರ್ಕಾರ 2014ರ ಬಳಿಕ ಕ್ಷಿಪ್ರವಾಗಿ ವಿಸ್ತರಿಸಿದೆಯಾದರೂ, ಇದು ವಾಸ್ತವವಾಗಿ 2013ರಲ್ಲಿ ಹಿಂದಿನ ಯುಪಿಎ-2 ಸರ್ಕಾರದ ಅವಧಿಯಲ್ಲೇ ಆರಂಭವಾಗಿದೆ.

ಹೊಸ ಕಲ್ಯಾಣ ವ್ಯವಸ್ಥೆಯ ಪ್ರಮುಖ ಮೂಲಸೌಕರ್ಯಗಳಿಗೆ ಅಂದರೆ ಆಧಾರ್‍ ನಂತಹ ವ್ಯವಸ್ಥೆಗೆ ಹಿಂದಿನ ಸರ್ಕಾರಗಳೇ ಬುನಾದಿ ಹಾಕಿದ್ದವು. ಎನ್‍ಡಿಎ-2 ಸರ್ಕಾರ ಆರಂಭಿಸಿದ್ದಾಗಿ ಹೇಳಿಕೊಳ್ಳುತ್ತಿರುವ ಜನಧನ್-ಆಧಾರ್-ಮೊಬೈಲ್ ಕಾರ್ಯಸೂಚಿ ಕೂಡಾ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರೂಪುಗೊಂಡವು. ಆದ್ದರಿಂದ ಹಿಂದಿನ ಸರ್ಕಾರ ಆರಂಭಿಸಿದ ಯೋಜನೆಯನ್ನು ಪ್ರಧಾನಿ ಮುಂದುವರಿಸಿದ್ದಕ್ಕಾಗಿ ಅಕ್ರಮ ಹಿತಾಸಕ್ತಿಗಳು ತಮ್ಮನ್ನು ಉಳಿಸಲು ಸಂಚು ರೂಪಿಸಿವೆ ಎನ್ನುವುದು ಸಮಂಜಸವಾಗದು.

ಉಳಿತಾಯ ಏನು?

ಎರಡನೇ ಅಂಶವೆಂದರೆ 90 ಸಾವಿರ ಕೋಟಿ ಉಳಿತಾಯ ಎಂಬ ತಪ್ಪು ಅಂಕಿ ಅಂಶ. ಎಷ್ಟು ಮೊತ್ತವನ್ನು ಉಳಿಸಲಾಗಿದೆ ಎನ್ನುವುದು ಅಸ್ಪಷ್ಟವಾಗಿದ್ದರೂ, ಅದು 90 ಸಾವಿರ ಕೋಟಿಗಿಂತ ತೀರಾ ಕಡಿಮೆ ಇರುವ ಸಾಧ್ಯತೆ ಅಧಿಕ. ಈ ಅಂಕಿ ಅಂಶವನ್ನು ಸರ್ಕಾರದ ಹಿರಿಯ ಸಚಿವರು ಬಳಸುತ್ತಿದ್ದು, ಪ್ರಮುಖವಾಗಿ ಆಧಾರ್ ಸಂಬಂಧಿತ ಉಳಿತಾಯವನ್ನು ಹೇಳುವ ವೇಳೆ ಇದನ್ನು ಬಳಸುತ್ತಾರೆ. ಆದರೆ ನಾಗರಿಕ ಸಮಾಜದ ಹಕ್ಕುದಾರರಾದ ಮಾನವ ಹಕ್ಕು ಕಾರ್ಯಕರ್ತರು ಹಾಗೂ ಕಂಟ್ರೋಲರ್ ಆಡಿಟರ್ ಜನರ್ ಸೇರಿದಂತೆ ಕೆಲ ವಲಯಗಳು ಇದನ್ನು ಅಲ್ಲಗಳೆಯುತ್ತವೆ.

ಸರ್ಕಾರದ ಡ್ಯಾಷ್‍ ಬೋರ್ಡ್ ತೋರಿಸುವ ಪ್ರಕಾರ, 90 ಸಾವಿರ  ಕೋಟಿಯ ಪೈಕಿ ಪ್ರಮುಖ ಭಾಗ ಪಹಲ್, ಪಿಡಿಎಸ್ ಹಾಗೂ ಎಂಜಿಎನ್‍ಆರ್‍ಇಜಿಎಸ್ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದವು.

ಎಲ್‍ಪಿಜಿ ಸಬ್ಸಿಡಿ: ಆಧಾರ್ ಮತ್ತು ಡಿಬಿಟಿಗೆ ಮುನ್ನ ಪ್ರತಿ ಭಾರತೀಯ ಕುಟುಂಬಗಳು ಸರ್ಕಾರ ನಿಗದಿಪಡಿಸಿದ ದರದಲ್ಲಿ ವರ್ಷಕ್ಕೆ 12 ಸಬ್ಸಿಡಿಯುಕ್ತ ಸಿಲಿಂಡರ್ ಖರೀದಿಸುವ ಹಕ್ಕು ಹೊಂದಿದ್ದವು. ಇತರ ಕಲ್ಯಾಣ ಯೋಜನೆಗಳಂತೆ, ಸರ್ಕಾರ ಈ ಸಬ್ಸಿಡಿಯ ಮೊತ್ತವನ್ನು ತೈಲ ಮಾರುಕಟ್ಟೆ ಕಂಪನಿಗಳಿಗೆ ಪಾವತಿಸುತ್ತಿತ್ತು.

ಡಿಬಿಟಿ ಬಳಿಕ ಪಹಲ್ ಯೋಜನೆಯಡಿ, ಗ್ರಾಹಕರು ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿಸಬೇಕು ಹಾಗೂ ಸಬ್ಸಿಡಿಯನ್ನು ತೈಲ ಮಾರುಕಟ್ಟೆ ಕಂಪನಿಗಳ ಬದಲಾಗಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ. 2017ರ ಆರಂಭದಲ್ಲಿ ಮೋದಿ ಸರ್ಕಾರ ಹೇಳಿದಂತೆ, 2016ರ ಕೊನೆಯ ಒಳಗಾಗಿ 25 ಸಾವಿರ ಕೋಟಿಯನ್ನು ಉಳಿತಾಯ ಮಾಡಲಾಗಿದೆ.

ಸಿಎಜಿ ಸೇರಿದಂತೆ ಹಲವು ಸ್ವತಂತ್ರ ವಿಶ್ಲೇಷಣೆಗಳು ಈ ಅಂದಾಜಿನಲ್ಲಿರುವ ಸಮಸ್ಯೆಗಳನ್ನು ಎತ್ತಿಹಿಡಿದಿವೆ. ಸಮಸ್ಯೆಯಲ್ಲಿ ಮುಖ್ಯವಾಗಿ ಸರ್ಕಾರ ನಿಷ್ಕ್ರಿಯ ಹಾಗೂ ತಡೆ ಹಿಡಿಯಲ್ಪಟ್ಟ ಸಂಪರ್ಕಗಳ ಸಂಖ್ಯೆಯನ್ನು ಗಣತಿ ಮಾಡಿರುವ ವಿಧಾನ. ಆಧಾರ್ ‍ನ ಪರಿಣಾಮವನ್ನು ಹೆಚ್ಚಾಗಿ ಅಂದಾಜಿಸಿರುವುದು ಹಾಗೂ ಸಬ್ಸಿಡಿ ಬೆಲೆಯನ್ನು ನಿಖರವಾಗಿ ಲೆಕ್ಕಾಚಾರ ಹಾಕುವಲ್ಲಿನ ಸಮಸ್ಯೆಗಳು ಕೂಡಾ ಸೇರುತ್ತವೆ.

ಪಹಲ್ ಯೋಜನೆಯ ಸಿಎಜಿ ಪರಿಶೋಧನೆಯಲ್ಲಿ ಹೇಳಿರುವಂತೆ, "ಸಬ್ಸಿಡಿಯಲ್ಲಿ ಶೇಕಡ 90ರಷ್ಟು ಇಳಿಕೆಯಾಗಲು" ಪ್ರಮುಖ ಕಾರಣ ಕಚ್ಚಾ ತೈಲದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿರುವುದು. ಒಟ್ಟು ಆಗಿರುವ 23,316 ಕೋಟಿ ರೂಪಾಯಿ ಇಳಿಕೆಯಲ್ಲಿ ಕೇವಲ 1,763 ಕೋಟಿ ರೂಪಾಯಿ ಮಾತ್ರ ಗ್ರಾಹಕರು ಖರೀದಿಸುವ ಸಿಲಿಂಡರ್ ಗಳಿಗೆ ಬಳಕೆಯಾಗಿದೆ"

ರಾಹುಲ್ ಲಹೋಟಿಯವರಂಥ ಶಿಕ್ಷಣತಜ್ಞರು ನಡೆಸಿದ ಪ್ರತ್ಯೇಕ ಸಂಶೋಧನೆಗಳಿಂದ ತಿಳಿದುಬರುವಂತೆ, ವಾಣಿಜ್ಯ ವಲಯಕ್ಕೆ ಆಗುವ ಮಾರಾಟದಲ್ಲಿ ಹೆಚ್ಚಿನ ಹೆಚ್ಚಳದ ಬಗ್ಗೆ ಮಾಹಿತಿ ಇಲ್ಲದಿರುವುದು, ವಾಸ್ತವವಾಗಿ ಪಹಲ್ ಮೂಲಕ ಎಷ್ಟು ಮೊತ್ತವನ್ನು ಉಳಿಸಲಾಗಿದೆ ಎಂಬ ಬಗ್ಗೆ ಮತ್ತು ಯೋಜನೆಯ ಪರಿಣಾಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಿಡಿಎಸ್: ಮೋದಿ ಸರ್ಕಾರ ಹೇಳಿಕೊಂಡಂತೆ 2.75 ಕೋಟಿ ಡೂಪ್ಲಿಕೇಟ್ ಮತ್ತು ನಕಲಿ/ ಅಸ್ತಿತ್ವದಲ್ಲಿರದ ಪಡಿತರ ಚೀಟಿಗಳನ್ನು ಡಿಬಿಟಿ ಹಾಗೂ ಆಧಾರ್ ಪರಿಣಾಮವಾಗಿ ಕಿತ್ತುಹಾಕಲಾಗಿದೆ. ಇದರಿಂದ ನಕಲಿ ಫಲಾನುಭವಿಗಳ ಜೇಬು ಸೇರುತ್ತಿದ್ದ 30 ಸಾವಿರ ಕೋಟಿ ರೂಪಾಯಿ ಉಳಿಸಲಾಗಿದೆ.

ಆದರೆ ‘ದ ವೈರ್’ ವಿಸ್ತೃತವಾಗಿ ವರದಿ ಮಾಡಿದಂತೆ, ಸತಾರ್ಕ್ ನಾಗರಿಕ ಸಂಘಟನ್ (ಎಸ್‍ಎನ್‍ಎಸ್), ದಿಲ್ಲಿ ರೋಝಿ ರೋಟಿ ಅಧಿಕಾರ್ ಅಭಿಯಾನ್, ಮಜೂಂದಾರ್ ಕಿಸಾನ್ ಶಕ್ತಿ ಸಂಘಟನ್ (ಎಂಕೆಎಸ್‍ಎಸ್) ಹಾಗೂ ಆಹಾರದ ಹಕ್ಕು ಅಭಿಯಾನದಂಥ ಸಂಘಟನೆಗಳು ಈ ಅಂಕಿ ಅಂಶವನ್ನು ಅಲ್ಲಗಳೆದಿವೆ. ಈ ನಿರ್ಧಾರಕ್ಕೆ ಬರಲು ಸಾರ್ವಜನಿಕವಾಗಿ ಯಾವುದೇ ಅಂಕಿ ಅಂಶಗಳು ಇಲ್ಲ ಎನ್ನುವುದು ಇವುಗಳ ಸಮರ್ಥನೆ.

ಅರ್ಥಶಾಸ್ತ್ರಜ್ಞೆ ರೀತಿಕಾ ಖೇರಾ ಮತ್ತು ಜಾನ್ ಡ್ರೇಝ್ ಹೇಳುವಂತೆ, ಜಾರ್ಖಂಡ್‍ನಲ್ಲಿ ಅತಿದೊಡ್ಡ ಸಂಖ್ಯೆಯ ಪಡಿತರ ಚೀಟಿ ಹಾಗೂ ಉದ್ಯೋಗ ಚೀಟಿಯನ್ನು ಕಿತ್ತುಹಾಕಲಾಗಿದೆ.

ಆದರೆ ತೀರಾ ಕಳವಳಕಾರಿ ಅಂಶವೆಂದರೆ, ಹಲವು ಮಂದಿ ನೈಜ ಫಲಾನುಭವಿಗಳನ್ನು ಕೂಡಾ ಅವರಿಗೆ ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕಾಗಿ ಪಿಡಿಎಸ್ ಸೌಲಭ್ಯದಿಂದ ಹೊರಗಿಡಲಾಗಿದೆ. ಸರ್ಕಾರಿ ವರದಿಯಲ್ಲಿ ಇದನ್ನು ಕೂಡಾ ಉಳಿತಾಯ ಎಂದು ತೋರಿಸಲಾಗಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಉದ್ಯೋಗದ ಹಕ್ಕು ನೀಡುವ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೆ 100 ದಿನಗಳವರೆಗೆ ವೇತನ ಆಧರಿತ ಉದ್ಯೋಗ (ಬಹುತೇಕ ಕೌಶಲರಹಿತ ಕೂಲಿಗಳಿಗೆ) ಒದಗಿಸುವ ಮೂಲಕ ಜೀವನಾಧಾರ ಭದ್ರತೆಯನ್ನು ನೀಡುವ ಗುರಿ ಹೊಂದಿದೆ.

ಉದ್ಯೋಗ ಕಾರ್ಡ್ ‍ಗಳಿಗೆ ಆಧಾರ್ ಸಂಪರ್ಕಿಸಿರುವುದು, ಯೋಜನೆಯ ಕಳಪೆ ಮೇಲುಸ್ತುವಾರಿಯ ಪರಿಣಾಮವಾಗಿ ಬಡವರ ಬದಲು ನಕಲಿ ಫಲಾನುಭವಿಗಳಿಗೆ ಲಾಭವಾಗುತ್ತಿದೆ ಎಂಬ ಆರೋಪಕ್ಕೆ ಉತ್ತರವಾಗಿದೆ.

ಪಿಡಿಎಸ್ ಉಳಿತಾಯದ ಸಮಸ್ಯೆಯಂತೆಯೇ, ಮೋದಿ ಸರ್ಕಾರ ಸಾರ್ವಜನಿಕವಾಗಿ ನರೇಗಾ ಯೋಜನೆಯ ಡಿಬಿಟಿ ಉಳಿತಾಯ ಲೆಕ್ಕಹಾಕಲು ಯಾವುದೇ ತಾರ್ಕಿಕ ಮಾನದಂಡವನ್ನು ಪ್ರಕಟಿಸಿಲ್ಲ. (ಕೇವಲ ಪಹಲ್-ಎಲ್‍ಪಿಜಿ ಯೋಜನೆ ಮಾತ್ರ ಇದನ್ನು ನಿಖರವಾಗಿ ಲೆಕ್ಕ ಹಾಕಿದ್ದು, ಈ ಕಾರಣದಿಂದ ಸಿಎಜಿ ಪರಿಶೋಧನೆ ನಡೆಸಿದೆ). ಸರ್ಕಾರ 2018ರ ಮಾರ್ಚ್ ವೇಳೆಗೆ ಒಟ್ಟು 16,073 ಕೋಟಿ ರೂಪಾಯಿಗಳನ್ನು ಉಳಿಸಲಾಗಿದೆ ಎಂದು ಹೇಳಿಕೆ ನೀಡಿದೆ.

ಖೇರಾ ಹಾಗೂ ಡ್ರೇಝ್ ಅವರಂಥ ಅರ್ಥಶಾಸ್ತ್ರಜ್ಞರು ಹೇಳುವಂತೆ, ನಕಲಿ ಉದ್ಯೋಗ ಕಾರ್ಡ್ ‍ಗಳ ಲೆಕ್ಕಾಚಾರದಲ್ಲೇ ಸಮಸ್ಯೆ ಇದೆ. ಉದಾಹರಣೆಗೆ ಡ್ರೇಝ್ ಸಲ್ಲಿಸಿದ ಆರ್‍ ಟಿಐ ಅರ್ಜಿಯಲ್ಲಿ ಹೇಳಿದಂತೆ ನಕಲಿ ಅಥವಾ ಡೂಪ್ಲಿಕೇಟ್ ಉದ್ಯೋಗ ಕಾರ್ಡ್‍ ಗಳ ಕಡಿತದ ಸಂಖ್ಯೆ 2016-17ರಲ್ಲಿ ಶೇಕಡ 13ಕ್ಕಿಂತ ಕಡಿಮೆ. ಆ ವೇಳೆಗೆ ಒಟ್ಟು 94 ಲಕ್ಷ ಉದ್ಯೋಗ ಕಾರ್ಡ್ ‍ಗಳಿದ್ದವು.

ಆನಂದ ವೆಂಕಟನಾರಾಯಣನ್ ಅವರು ಕೈಗೊಂಡ ಮತ್ತೊಂದು ಸ್ವತಂತ್ರ ವಿಶ್ಲೇಷಣೆಯಲ್ಲಿ ಹೇಳಿದಂತೆ, ವಾಸ್ತವವಾಗಿ ಆಧಾರ್‍ ನಿಂದ ನರೇಗಾದಲ್ಲಿ ಇದುವರೆಗೆ ಅಂದರೆ 2014ರ ಏಪ್ರಿಲ್ 1 ರಿಂದ 2016ರ ಮಾರ್ಚ್ 31ರವರೆಗೆ ಆಗಿರುವ ಒಟ್ಟು ಉಳಿತಾಯದ ಪ್ರಮಾಣ 30 ಕೋಟಿಗಿಂತಲೂ ಕಡಿಮೆ.

ಅಡಿ ಟಿಪ್ಪಣಿ ಏನು?

ಡಿಬಿಟಿ ವಿಧಾನ ಅನುಸರಿಸುವ ಮೂಲಕ ಕೇಂದ್ರ ಸರ್ಕಾರ ವಾಸ್ತವವಾಗಿ ಎಷ್ಟು ಉಳಿತಾಯ ಮಾಡಿದೆ ಎಂದು ಅಂದಾಜಿಸುವುದು ನಾಗರಿಕ ಸಮಾಜಕ್ಕೆ ಮತ್ತು ಶೈಕ್ಷಣಿಕ ಸಮುದಾಯಕ್ಕೆ ಕಷ್ಟಸಾಧ್ಯ. ಆಧಾರ್-ಎಲ್‍ಪಿಜಿ ಉಳಿತಾಯವನ್ನು ಲೆಕ್ಕಾಚಾರ ಮಾಡುವಲ್ಲಿ ಸಮಸ್ಯೆಗಳಿದ್ದರೂ, 90 ಸಾವಿರ ಕೋಟಿ ಎನ್ನುವುದು ‘ಅತಿರಂಜಿತ ಅಂಕಿ ಅಂಶ’ ಎನ್ನುವುದು ಖಚಿತ.

ಆಧಾರ್ ಯೋಜನೆ ಭಾರತಕ್ಕೆ ಪ್ರತಿವರ್ಷ 11 ಶತಕೋಟಿ ಡಾಲರ್ ಸಬ್ಸಿಡಿಯನ್ನು ಉಳಿಸಲು ನೆರವಾಗಲಿದೆ ಎಂಬ ವಿಶ್ವಬ್ಯಾಂಕ್‍ನ ವಿವಾದಾತ್ಮಕ ಹೇಳಿಕೆಯನ್ನೇ ಈ ಹಿಂದೆ ಕೂಡಾ ಮೋದಿ ಸರ್ಕಾರ ನಂಬಿತ್ತು. ಅಂದರೆ ಈ ಮೊತ್ತ ಸುಮಾರು 75 ಸಾವಿರ ಕೋಟಿ ರೂಪಾಯಿ ಆಗುತ್ತದೆ.

‘ದ ವೈರ್’ ವಿಸ್ತೃತವಾಗಿ ವಿಶ್ಲೇಷಣೆ ಮಾಡಿದಾಗ ಕಂಡುಬಂದ ಅಂಶವೆಂದರೆ ವಿಶ್ವಬ್ಯಾಂಕಿನ ಸಂಶೋಧನೆಯಲ್ಲಿ ಕೂಡಾ ದೋಷಯುಕ್ತ ಅಂಶಗಳಿವೆ. ಸರಳವಾಗಿ ಹೇಳಬೇಕೆಂದರೆ, ಈ ನಿರ್ಣಯಗಳು ಪ್ರಾಥಮಿಕ ಸಂಶೋಧನೆಯನ್ನು ಅವಲಂಬಿಸಿದ್ದು, ಒಟ್ಟಾರೆ ಸಿದ್ಧಾಂತಕ್ಕೆ ಪೂರಕವಾಗಿಲ್ಲ.

ಪ್ರಧಾನಿ ಹಾಗೂ ಅವರ ಹಿರಿಯ ಸಚಿವರು ಹೇಳಿಕೊಳ್ಳುವ 90 ಸಾವಿರ ಕೋಟಿ ರೂಪಾಯಿ ಉಳಿತಾಯ ಎನ್ನುವ ಅಂಶವನ್ನು ಕೈಬಿಟ್ಟು, ಡಿಬಿಟಿ ಹಾಗು ಆಧಾರ್ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಪ್ರಯತ್ನ ಮಾಡುವುದು ಒಳ್ಳೆಯದು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News