ಆಧಾರ್ ಮಾಹಿತಿ ದುರುಪಯೋಗದ ಬಗ್ಗೆ ಜಾಗೃತೆ ಅಗತ್ಯ: ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾರಾಯಣನ್

Update: 2019-01-16 17:22 GMT

ಕೋಲ್ಕತಾ, ಜ.16: ಸೈಬರ್ ದಾಳಿಯಿಂದ ಬಾಧಿತವಾಗಿರುವ ವಿಶ್ವದ ಐದು ಅಗ್ರ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಸ್ಥಾನ ಪಡೆದಿದ್ದು ಆಧಾರ್ ಕಾರ್ಡ್‌ನ ಮಾಹಿತಿ ದುರುಪಯೋಗವಾಗದಂತೆ ಜಾಗರೂಕತೆ ವಹಿಸುವ ಅಗತ್ಯವಿದೆ ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂಕೆ ನಾರಾಯಣನ್ ಹೇಳಿದ್ದಾರೆ.

ದೇಶವು ಡಿಜಿಟಲ್ ಯುಗದ ಹೊಸ್ತಿಲಲ್ಲಿದ್ದು, ಆಧಾರ್ ಕಾರ್ಡ್‌ನ ಬಳಕೆ ದಿನಂಪ್ರತಿ ಸರ್ವವ್ಯಾಪಿಯಾಗುತ್ತಿದೆ ಎಂದು ನಾರಾಯಣನ್ ಹೇಳಿದರು. ಸೈಬರ್ ಸುರಕ್ಷತೆ ಕುರಿತು ಬಿಸಿಸಿಐ ಮತ್ತು ಸಿಇಎನ್‌ಇಆರ್‌ಎಸ್-ಕೆ ವತಿಯಿಂದ ಹಮ್ಮಿಕೊಳ್ಳಲಾದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಆನ್‌ಲೈನ್‌ನಲ್ಲಿ ಗುರುತು ಮರೆಮಾಚುವುದು ಸುಲಭ ಸಾಧ್ಯವಾಗಿದೆ. ಬಳಕೆದಾರನ ಗುಪ್ತಸಂಕೇತ(ಕೋಡ್)ವನ್ನು ಪಡೆಯುವ ಹ್ಯಾಕರ್‌ಗಳು ಅವನ್ನು ಪುನರಾವರ್ತಿಸಿ ದುರುಪಯೋಗ ಮಾಡಿಕೊಳ್ಳುತ್ತಾರೆ. ಸೂಕ್ಷ್ಮ ಮತ್ತು ಮಹತ್ವದ ವಲಯಗಳಾದ ಬ್ಯಾಂಕಿಂಗ್, ಆರ್ಥಿಕ ಸೇವೆ, ಇಂಧನ ಮತ್ತು ವಿಮಾ ಕ್ಷೇತ್ರಗಳಿಗೂ ಹ್ಯಾಕರ್‌ಗಳು ಪ್ರವೇಶ ಪಡೆಯುತ್ತಿದ್ದಾರೆ . ಭಾರತದ ಉದ್ಯಮ ಸಂಸ್ಥೆಗಳು ಸೈಬರ್ ದಾಳಿಯ ಅತ್ಯಧಿಕ ಬಲಿಪಶುಗಳಾಗಿದ್ದಾರೆ ಎಂದವರು ಕಳವಳ ವ್ಯಕ್ತಪಡಿಸಿದರು. ಅಂತರ್ ಸಂಪರ್ಕ ವ್ಯವಸ್ಥೆ ಹೆಚ್ಚಿದಂತೆ ಪಾರಂಪರಿಕ ಪರಿಧಿ ನಾಶವಾಗುತ್ತಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News