ಸುಪ್ರೀಂ ಆದೇಶದಂತೆ ಶಿವಾಜಿ ಸ್ಮಾರಕದ ಕಾಮಗಾರಿ ನಿಲ್ಲಿಸಿದ ಮಹಾರಾಷ್ಟ್ರ ಸರಕಾರ

Update: 2019-01-16 17:41 GMT

ಮುಂಬೈ,ಜ.16: ಸರ್ವೋಚ್ಚ ನ್ಯಾಯಾಲಯದ ಜ.11ರ ಆದೇಶಕ್ಕನುಗುಣವಾಗಿ ಮಹಾರಾಷ್ಟ್ರ ಸರಕಾರದ ಲೋಕೋಪಯೋಗಿ ಇಲಾಖೆಯು ಅರಬ್ಬಿ ಸಮುದ್ರದಾಚೆ ಶಿವಾಜಿ ಸ್ಮಾರಕದ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಗುತ್ತಿಗೆದಾರ ಕಂಪನಿ ಎಲ್ ಆ್ಯಂಡ್ ಟಿಗೆ ನೋಟಿಸ್‌ನ್ನು ಹೊರಡಿಸಿದೆ.

ಛತ್ರಪತಿ ಶಿವಾಜಿ ಮಹಾರಾಜರ ವಿಗ್ರಹ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಕೋರಿ ಕನ್ಸರ್ವೇಷನ್ ಆ್ಯಕ್ಷನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿತ್ತು.

ಶಿವಾಜಿ ಸ್ಮಾರಕವನ್ನು ದೇವೇಂದ್ರ ಫಡ್ನವೀಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯೆಂದು ಪರಿಗಣಿಸಲಾಗಿದೆ. ಶಿವಾಜಿ ಸ್ಮಾರಕ ಸಮಿತಿಯ ಮುಖ್ಯಸ್ಥ ವಿನಾಯಕ ಮೇಟೆ ಅವರು ಬುಧವಾರ ಫಡ್ನವೀಸ್ ಅವರನ್ನು ಭೇಟಿಯಾಗಿ ಈ ವಿಷಯದಲ್ಲಿ ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ವಿವರವಾಗಿ ಚರ್ಚೆಗಳನ್ನು ನಡೆಸಿದ್ದಾರೆ. ರಾಜ್ಯ ಸರಕಾರವು ಇಂತಹುದೇ ಕೋರಿಕೆಯನ್ನು ತಳ್ಳಿಹಾಕಿದ್ದ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿ ಅಫಿದಾವಿತ್ತನ್ನು ಸಲ್ಲಿಸಬಹುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News