ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಜೆಡಿಯು ಸೇರ್ಪಡೆಗೆ ಪ್ರಭಾವ ಬೀರಿದ್ದು ಯಾರು ಗೊತ್ತೇ?

Update: 2019-01-17 04:03 GMT

ಪಾಟ್ನಾ, ಜ.17: ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಚುನಾವಣಾ ಕಾರ್ಯತಂತ್ರ ಸಿದ್ಧಪಡಿಸಿದ ಪ್ರಶಾಂತ್ ಕಿಶೋರ್ ಅವರನ್ನು ಸಂಯುಕ್ತ ಜನತಾದಳ ಸೇರಿಸಿಕೊಳ್ಳುವಂತೆ ಶಿಫಾರಸು ಮಾಡಿದವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಹಿರಂಗಪಡಿಸಿದ್ದಾರೆ.

ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಪ್ರಶಾಂತ್ ಕಿಶೋರ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್, "ಅವರು ನಮಗೆ ಹೊಸಬರಲ್ಲ; 2015ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಜತೆ ಕೆಲಸ ಮಾಡಿದ್ದಾರೆ. ಅಲ್ಪಾವಧಿಯಲ್ಲಿ ಅವರು ಬೇರೆಡೆ ಹೋಗಿದ್ದರು. ಜೆಡಿಯುಗೆ ಅವರನ್ನು ಸೇರಿಸಿಕೊಳ್ಳುವಂತೆ ಅಮಿತ್ ಶಾ ಎರಡು ಬಾರಿ ನನಗೆ ಕೇಳಿಕೊಂಡಿದ್ದರು" ಎಂದು ಸ್ಪಷ್ಟಪಡಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಶಾಂತ್ ಕಿಶೋರ್ ಜೆಡಿಯುಗೆ ಸೇರ್ಪಡೆಯಾಗಿದ್ದರು. ಅವರನ್ನು ಒಂದು ತಿಂಗಳ ಬಳಿಕ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ನಿತೀಶ್ ಹೇಳಿಕೆ ಬಗ್ಗೆ ವಿರೋಧ ಪಕ್ಷಗಳು ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆದಿವೆ. "ಅಂತಿಮವಾಗಿ ಜೆಡಿಯು, ಬಿಜೆಪಿಯ ಪರಿಷ್ಕೃತ ಅವತರಣಿಕೆ ಎನ್ನುವುದನ್ನು ನಿತೀಶ್ ಒಪ್ಪಿಕೊಂಡಂತಾಗಿದೆ" ಎಂದು ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಹೇಳಿದ್ದಾರೆ. ಸಂಯುಕ್ತ ಜನತಾದಳದ ಪ್ರಮುಖ ನಿರ್ಧಾರಗಳನ್ನು ಶಾ ಅವರ ಸಲಹೆಯಂತೆ ತೆಗೆದುಕೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

"ಬಿಹಾರದಲ್ಲಿ ಏಕೆ ಗುಂಪು ಹತ್ಯೆಗಳು ಸರ್ಕಾರಿ ಪ್ರಾಯೋಜಿತ ಅಪರಾಧಗಳು ನಿಯತವಾಗಿ ನಡೆಯುತ್ತಿವೆ ಎನ್ನುವುದು ನಿಮಗೆ ಅರ್ಥವಾಗಿರಬೇಕಲ್ಲವೇ?" ಎಂದು ಆರ್‌ಜೆಡಿ ನಾಯಕ ಕೆಣಕಿದ್ದಾರೆ. ನಿತೀಶ್ ಕಾಲೆಳೆಯುವಲ್ಲಿ ಕಾಂಗ್ರೆಸ್ ಕೂಡಾ ಹಿಂದೆ ಬಿದ್ದಿಲ್ಲ. ಶಾ ಅವರ ಸಲಹೆ ಪಡೆಯುವ ಮೂಲಕ ಮುಖ್ಯಮಂತ್ರಿಯ ದೌರ್ಬಲ್ಯ ಬಹಿರಂಗವಾಗಿದೆ ಎಂದು ಬಿಹಾರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News