ಮಹಾಮೈತ್ರಿ: ಕೋಲ್ಕತಾದ ಟಿಎಂಸಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಡಿಎಂಕೆ ಮುಖ್ಯಸ್ಥ ಸ್ಟಾಲಿನ್
ಚೆನ್ನೈ,ಜ.17: ಕೋಲ್ಕತಾದಲ್ಲಿ ಶನಿವಾರ ನಡೆಯಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ರ‍್ಯಾಲಿಯಲ್ಲಿ ತಾನು ಪಾಲ್ಗೊಳ್ಳುವುದಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಗುರುವಾರ ಇಲ್ಲಿ ತಿಳಿಸಿದರು. ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವೆಂದು ಹೇಳಲಾಗಿರುವ ಈ ರ‍್ಯಾಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,ಎನ್‌ಸಿಪಿಯ ಶರದ್ ಪವಾರ್,ಎಸ್‌ಪಿಯ ಅಖಿಲೇಶ್ ಯಾದವ್ ಮತ್ತು ಎನ್‌ಸಿಯ ಉಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರ‍್ಯಾಲಿಯಲ್ಲಿ ಭಾಗವಹಿಸದಿರಬಹುದು,ಆದರೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ರ‍್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ,ಆದರೆ ಪಕ್ಷದ ಸಂಸದ ಸತೀಶ್ ಮಿಶ್ರಾ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಬಿಜೆಪಿಯೇತರ ಪಕ್ಷಗಳ ನಾಯಕರು ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿ.ವಿಜಯನ್ ಸೇರಿದಂತೆ ಎಡರಂಗದ ನಾಯಕರನ್ನೂ ತಾನು ಆಹ್ವಾನಿಸಿದ್ದೇನೆ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಹೇಳಿದ್ದರು.