ಶರಪೋವಾಗೆ ಮಣಿದ ವೋಝ್ನಿಯಾಕಿ

Update: 2019-01-18 18:36 GMT

ಮೆಲ್ಬೋರ್ನ್, ಜ.18: ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಡೆನ್ಮಾರ್ಕ್‌ನ ಕರೊಲಿನ್ ವೋಝ್ನಿಯಾಕಿ ಅವರಿಗೆ ಮೂರನೇ ಸುತ್ತಿನ ಪಂದ್ಯದಲ್ಲಿ ಭಾರೀ ಆಘಾತ ನೀಡಿದ ರಶ್ಯದ ಮರಿಯಾ ಶರಪೋವಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ 4ನೇ ಸುತ್ತು ಪ್ರವೇಶಿಸಿದ್ದಾರೆ.

ಟೂರ್ನಿಯಲ್ಲಿ 30ನೇ ಶ್ರೇಯಾಂಕ ಪಡೆದಿರುವ ಶರಪೋವಾ ವಿಶ್ವ ನಂ.3 ಆಟಗಾರ್ತಿ ವೋಝ್ನಿಯಾಕಿ ಅವರನ್ನು 6-4, 4-6, 6-3 ಸೆಟ್‌ಗಳಿಂದ ಮಣಿಸಿ ಟೂರ್ನಿಯಿಂದ ಹೊರಗಟ್ಟಿದರು. 2017ರಲ್ಲಿ ಉದ್ದೀಪನ ಮದ್ದು ಸೇವೆನೆ ಆಪಾದನೆಯ ಮೇರೆಗೆ ಅಮಾನತು ಶಿಕ್ಷೆ ಅನುಭವಿಸಿ ವಾಪಸಾದ ನಂತರ ಶರಪೋವಾಗೆ ದೊರೆತ ದೊಡ್ಡ ಗೆಲುವು ಇದಾಗಿದೆ. ಅಂತಿಮ 16ರ ಪಂದ್ಯದಲ್ಲಿ ಶರಪೋವಾ, ಆಸ್ಟ್ರೇಲಿಯದ 31 ವರ್ಷದ ಆ್ಯಶ್ ಬಾರ್ಟಿ ಅವರನ್ನು ಎದುರಿಸಲಿದ್ದಾರೆ. ಬಾರ್ಟಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಉತ್ತಮ ಪ್ರದರ್ಶನದ ದಾಖಲೆ ಹೊಂದಿದ್ದಾರೆ.

ಪಂದ್ಯದ ನಂತರ ಪ್ರತಿಕ್ರಿಯಿಸಿದ ಶರಪೋವಾ, ‘‘ವೋಝ್ನಿಯಾಕಿ ಹಾಲಿ ಚಾಂಪಿಯನ್ ಆಗಿರುವುದರಿಂದ ಪಂದ್ಯದಲ್ಲಿ ಭಾರೀ ಸ್ಪರ್ಧೆ ಇರಲಿದೆ ಎಂಬ ಅರಿವಿತ್ತು. ಅದೂ ಅಲ್ಲದೆ ಅರೆನಾ (ಮೆಲ್ಬೋರ್ನ್ ಪಾರ್ಕ್ ಕ್ರೀಡಾಂಗಣ) ಅವರ ನೆಚ್ಚಿನ ಮೈದಾನವಾಗಿತ್ತು’’ ಎಂದರು.

ಶರಪೋವಾ 2014ರಲ್ಲಿ ಪ್ಯಾರಿಸ್‌ನ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಕೊನೆಯ ಬಾರಿ ಪ್ರಶಸ್ತಿ ಗೆದಿದ್ದಾರೆ.

►ಪ್ರಿ-ಕ್ವಾರ್ಟರ್‌ಗೆ ನಡಾಲ್ 

ಆಸ್ಟ್ರೇಲಿಯದ ಯುವ ಆಟಗಾರ ಅಲೆಕ್ಸ್ ಡಿ ಮಿನಾವುರ್ ಅವರನ್ನು ಮೂರನೇ ಸುತ್ತಿನ ಪಂದ್ಯದಲ್ಲಿ 6-1, 6-2, 6-4 ಸೆಟ್‌ಗಳಿಂದ ಮಣಿಸಿದ ದೈತ್ಯ ಆಟಗಾರ ಸ್ಪೇನ್‌ನ ರಫೆಲ್ ನಡಾಲ್ ಶುಕ್ರವಾರ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಅಂತಿಮ 16ರ ಘಟ್ಟಕ್ಕೆ ತಲುಪಿದ್ದಾರೆ.

2 ತಾಸು 22 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 17 ಬಾರಿ ಗ್ರಾನ್‌ಸ್ಲಾಮ್ ವಿಜೇತ ನಡಾಲ್ 19 ವರ್ಷದ ಆಸೀಸ್‌ನ 27ನೇ ಶ್ರೇಯಾಂಕದ ಆಟಗಾರನಿಗೆ ಸೋಲಿನ ರುಚಿ ತೋರಿಸಿದರು. ಕಳೆದ ಬಾರಿಯ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗಾಯದ ಕಾರಣದಿಂದ ಹೊರಗುಳಿದ ನಡಾಲ್ 2018ರ ಋತುವನ್ನು ಅರ್ಧದಲ್ಲೇ ಕೊನೆಗೊಳಿಸಿದ್ದರು. ನಡಾಲ್ ತಮ್ಮ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಝೆಕ್ ಗಣರಾಜ್ಯದ ಶ್ರೇಯಾಂಕರಹಿತ ಆಟಗಾರ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ.

►ಕೆರ್ಬರ್‌ಗೆ ಜಯ

ತಮ್ಮ 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದ್ವಿತೀಯ ಶ್ರೇಯಾಂಕದ ಜರ್ಮನಿ ತಾರೆ ಏಂಜೆಲಿಕ್ ಕೆರ್ಬರ್ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಮಹಿಳಾ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ ಶುಕ್ರವಾರ ಆಸ್ಟ್ರೇಲಿಯದ ಕಿಂಬರ್ಲಿ ಬಿರೆಲ್ ಅವರನ್ನು 6-1, 6-1 ಸೆಟ್‌ಗಳಿಂದ ಸೋಲಿಸಿ ಅಂತಿಮ 16ರ ಘಟ್ಟಕ್ಕೆ ಪ್ರವೇಶಿಸಿದರು. ವಿಂಬಲ್ಡನ್ ಚಾಂಪಿಯನ್ ಕೆರ್ಬರ್ ಕೇವಲ 58 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವ ನಂ.240ನೇ ಆಟಗಾರ್ತಿ ಬಿರೆಲ್‌ರಿಗೆ ಸೋಲುಣಿಸಿದರು. ತಮ್ಮ 16ರ ಘಟ್ಟದ ಪಂದ್ಯದಲ್ಲಿ ಕೆರ್ಬರ್ ಅವರು ಅಮೆರಿಕದ ಶ್ರೇಯಾಂಕರಹಿತ ಆಟಗಾರ್ತಿ ಡೇನಿಲ್ಲೆ ಕಾಲಿನ್ಸ್ ಅವರನ್ನು ಎದುರಿಸಲಿದ್ದಾರೆ.

ಅನಿಸಿಮೊವಾಗೆ ಶರಣಾದ ಸಬಾಲೆಂಕಾ

ಅಮೆರಿಕದ ಶ್ರೇಯಾಂಕರಹಿತ ಆಟಗಾರ್ತಿ ಅಮಂಡಾ ಅನಿಸಿಮೊವಾ ಅವರು ಮೂರನೇ ಸುತ್ತಿನ ಪಂದ್ಯದಲ್ಲಿ 11ನೇ ಶ್ರೇಯಾಂಕದ ಬೆಲಾರಶ್ಯದ ಆರ್ಯನ್ ಸಬಾಲೆಂಕಾ ಅವರನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. ಕೇವಲ 65 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಆರ್ಯನ್ ಅವರನ್ನು 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿ ಅಚ್ಚರಿ ಮೂಡಿಸಿದರು. 17 ವರ್ಷ 6 ತಿಂಗಳು ವಯಸ್ಸಿನ ಫ್ಲೊರಿಡಾ ಮೂಲದ ಅನಿಸಿಮೊವಾ, ಸದ್ಯ ಟೂರ್ನಿಯಲ್ಲಿ ಉಳಿದುಕೊಂಡಿರುವ ಅತೀ ಕಡಿಮೆ ವಯಸ್ಸಿನ ಆಟಗಾರ್ತಿಯಾಗಿದ್ದಾರೆ. 16ರ ಘಟ್ಟದ ಪಂದ್ಯದಲ್ಲಿ ಅನಿಸಿಮೊವಾ 8ನೇ ಶ್ರೇಯಾಂಕದ ಝೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News