ಯಡಿಯೂರಪ್ಪ ಅವರ ಕೈಯಿಂದ ಆಪರೇಷನ್ ಮಾಡಿಸ್ಕೋಬಾರದೆ?

Update: 2019-01-20 05:36 GMT

‘‘ಕಣ್ಣಾಮುಚ್ಚೆ ಕಾಡೇ ಗೂಡೆ, ನಮ್ಮ ಹಕ್ಕಿ ಬಿಟ್ಟೇ ಬಿಟ್ಟೆ, ನಿಮ್ಮ ಹಕ್ಕಿ ಮುಚ್ಚಿ ಕೊಳ್ಳಿ....’’ ಎಂದು ಯಡಿಯೂರಪ್ಪ ಸೂಚನೆ ನೀಡಿದ್ದೇ ಡಿಕೆಶಿಯವರು ತಮ್ಮ ಹಕ್ಕಿಗಳನ್ನೆಲ್ಲ ಮುಚ್ಚಿ ರೆಸಾರ್ಟ್‌ನಲ್ಲಿ ಇಟ್ಟರು. ವಿಧಾನಸೌಧ ನೋಡಿದರೆ ಖಾಲಿ ಖಾಲಿ. ಎಂಜಲು ಕಾಸಿಗೆ ಯಾಕೋ ವಿಧಾನಸೌಧ ಭೂತದ ಬಂಗಲೆ ಕಂಡಂತಾಯಿತು. ಏನಾದರೂ ಮಾಡಬೇಕಲ್ಲ ಎನ್ನುವಾಗ, ಕಕಿಬಕ ಯಾನೆ ಪೆಕರವರ್ತಿ ಬೇಲೆ ಸೂಳಿಯ ನೆನಪಾಯಿತು. ಆತ ತನ್ನ ಬ್ರಿಗೇಡ್ ಬ್ರಾಂಡಿನ ಟೀ ಅಂಗಡಿ ತೆರೆದಿರುವ ಸುದ್ದಿ ಸಿಕ್ಕಿತ್ತು. ಆತನ ಗೂಡಂಗಡಿಗೆ ಹೋಗಿ ಟೀಯಾದರೂ ಕುಡಿಯೋಣ ಎಂದು ಅತ್ತ ನಡೆದ. ನೋಡಿದರೆ ಪೆಕರವರ್ತಿ ನೊಣ ಓಡಿಸುತ್ತಿದ್ದ.
‘‘ಸಾರ್...ನಮಸ್ಕಾರ...ಒಂದು ಸ್ಟ್ರಾಂಗ್ ಟೀ ಕೊಡಿ....’’ ಎಂದಂದದ್ದೇ ತಡ ಕಕಿಬಕ ತನ್ನ ಕರುಳು ಕಿತ್ತು ಬರುವಂತೆ ಮಾತನಾಡ ತೊಡಗಿದ ‘‘ನಿಮ್ಮನ್ನು ನೋಡಿ ನನ್ನ ಕರುಳು ಕಿತ್ತು ಬಂತು ಕಣ್ರೀ...’’ ಎಂದ. ಕಾಸಿ ಬೆಚ್ಚಿ ಬಿದ್ದ ‘‘ಸಾರ್, ದೊಡ್ಡ ಕರುಳ? ಸಣ್ಣ ಕರುಳ?’’
‘‘ದೊಡ್ಡದಾದ್ರೇನೂ, ಸಣ್ಣದಾದ್ರೇನೂ....ಕಿತ್ತು ಬರುವಾಗ ನೋವಾಗಲ್ವೇನ್ರೀ? ಇರ್ಲಿ ನಿಮಗೆ ಖಡಕ್ ಚಹಾ ಕೊಡುತ್ತೇನೆ....ಜಿಎಸ್‌ಟಿ ಬ್ರಾಂಡ್ ಇದೆ, ಡಿಮೋನಿಟೈಸೇಶನ್ ಬ್ರಾಂಡ್ ಇದೆ...ನಿಮಗೆ ಬೇಕಾದ ಬ್ರಾಂಡ್ ಟೀ ಪುಡಿ ಹಾಕಿ ಕೊಡುವೆ...’’ ಕಕಿಬಕ ಹೇಳಿದ.
‘‘ಯಾವುದಾದರೂ ಕೊಡಿ....ಸಾಕು...’’ ಎಂದ ಕಾಸಿ...‘‘ಸಾರ್...ಮೂಲವ್ಯಾದಿ ಇದ್ದಾಗ ಈ ಕರುಳುಕಿತ್ತು ಬರೋದು ಸಹಜ. ಅದಕ್ಕೊಂದು ಸಣ್ಣ ಆಪರೇಷನ್ ಮಾಡ್ಸಿಕೊಳ್ಳಿ. ಹೇಗೂ ಯಡಿಯೂರಪ್ಪ ಅವರು ಆಪರೇಷನ್ ಮಾಡುವುದರಲ್ಲಿ ವಿಶ್ವವಿಖ್ಯಾತರಾಗಿದ್ದಾರೆ. ಯಾವುದಾದರೂ ರೆಸಾರ್ಟ್‌ನಲ್ಲಿ ಅವರಿರಬಹುದು. ನೇರ ಅಲ್ಲಿಗೇ ಹೋಗಿ....’’ ಕಾಸಿ ಸಲಹೆ ನೀಡಿದ.
‘‘ರೀ...ಇದು ಆ ಕರುಳಳ್ಳ ಕಣ್ರೀ....ನಿಮಗೆಲ್ಲ ಅರ್ಥವಾಗಲ್ಲ ಬಿಡಿ. ನಾನು ಜಿಎಸ್‌ಟಿ ಮತ್ತು ಡಿಮೋನಿಟೈಸೇಶನ್ ಟೀ ಪುಡಿ ಮಿಕ್ಸ್ ಮಾಡಿ ಒಂದು ಟೀ ಮಾಡಿ ಕೊಡುವೆ....ಅತ್ಯದ್ಭುತವಾದ ಟೀ ಇದು. ಮೋದಿಯವರು ಗಡಿಯಲ್ಲಿ ಸೇನೆಯವರಿಗೆ ಇದೇ ಟೀ ಮಾಡಿ ಕೊಡ್ತಾ ಇದ್ದರಂತೆ ಹಿಂದೆ. ನೀವೂ ಕುಡಿಯಿರಿ...’’
ಕಾಸಿಗೆ ಖುಷಿಯಾಯಿತು ‘‘ಏನು ಸಾರ್ ಈ ಟೀಯ ವಿಶೇಷ?’’ ಕೇಳಿದ.
‘‘ಹಾಲು, ಸಕ್ಕರೆ, ಮಾತ್ರವಲ್ಲ ನರೇಂದ್ರ ಮೋದಿಯವರು ಹಿಮಾಲಯದಲ್ಲಿ ತಪಸ್ಸು ಮಾಡಿ ಮುಗಿಸಿ ವಾಪಸ್ ಬರುವಾಗ ತಂದ ಮಹತ್ವದ ಗಿಡಮೂಲಿಕೆಗಳ ರಸಗಳನ್ನು ಇದಕ್ಕೆ ಸೇರಿಸಲಾಗುತ್ತದೆ....’’
‘‘ಸಾರ್...ಒಂದು ಅನುಮಾನ ....’’
‘‘ಕೇಳಿ’’
‘‘ಮೋದಿ ಬರುವ ಮುಂಚೆ ಈ ದೇಶ ಭಿಕ್ಷೆ ಬೇಡುತ್ತಿತ್ತು ಎನ್ನುವುದು ನಿಜನಾ?’’ ಕಾಸಿ.
‘‘ಹೌದು ಕಣ್ರೀ...ಮೋದಿ ಬರೋಮುಂಚೆ ಈ ದೇಶ ಭಿಕ್ಷೆ ಬೇಡುತ್ತಿತ್ತು ಎನ್ನುವುದಕ್ಕೆ ನಾನೇ ಉದಾಹರಣೆ’’ ಕಕಿಬಕ ಉತ್ತರಿಸಿದ.
‘‘ಅದು ಹೇಗೆ ಸಾರ್?’’
‘‘ಮೋದಿ ಬರೋ ಮೊದ್ಲು ನಾನು ಒಂದು ಕಪ್ ಟೀಗೆ ಯಾರ್ಯಾರ ಕೈಯಲ್ಲಿ ಭಿಕ್ಷೆ ಬೇಡ್ತಾ ಇದ್ದೆ. ಇದೀಗ ಮೋದಿ ಬಂದು ನಾಲ್ಕೂವರೆ ವರ್ಷದಲ್ಲಿ ನನ್ನಲ್ಲಿ ಎಷ್ಟು ದುಬಾರಿ ಕಾರು ಇದೆ ಗೊತ್ತಾ? ದೇಶ ಉದ್ಧಾರ ಆಗಿದೆ ಎನ್ನುವುದಕ್ಕೆ ಈ ಉದಾಹರಣೆ ಸಾಕಾಗಲ್ವಾ?’’ ಕಕಿಬಕ ಹೇಳಿದಾಗ ಹೌದಲ್ವಾ ಎನಿಸಿತು.
ಕಕಿಬಕ ಅದೇನೋ ಬಣ್ಣಬಣ್ಣದ ಚಿತ್ತಾರಗಳು ಇರುವ ಪೆಟ್ಟಿಗೆಯನ್ನು ತೆರೆಯ ತೊಡಗಿದ.
‘‘ಸಾರ್ ಅದೇನದು...’’ ಕಾಸಿ ಆಸಕ್ತಿಯಿಂದ ಕೇಳಿದ.
‘‘ಇದು ಹಿಮಾಲಯದಿಂದ ಮೋದಿ ತಂದ ಟೀ ಪುಟಿ...’’ ಕಕಿಬಕ ಹೇಳಿದ.
ಕಾಸಿ ಆಸಕ್ತಿಯಿಂದ ಪೆಟ್ಟಿಗೆಯೊಳಗೆ ಇಣುಕಿದ...ನೋಡಿದರೆ ಅದು ಖಾಲಿಯಾಗಿತ್ತು. ಆದರೆ ಕಕಿಬಕ ಮುಂದುವರಿಸಿದ ‘‘ನೋಡಿ ಪೆಟ್ಟಿಗೆಯ ಆ ಭಾಗದಲ್ಲಿ ಕಾಣುತ್ತಿರುವ ಕೇಸರಿ ಬಣ್ಣದ ಟೀಪುಡಿಯಿದೆಯಲ್ಲ ಅದು ಅಮೃತಬಿಂದು ಅಂತ. ದೇವತೆಗಳು ಮುಂಜಾನೆ ಇದೇ ಟೀಪುಡಿ ಹಾಕಿ ಬೆಡ್‌ಟೀ ಕುಡೀತಾರೆ. ಮೋದಿಯ ತಪಸ್ಸಿಗೆ ಮೆಚ್ಚಿ ಅವರು ಕೊಟ್ಟು ಹೋಗಿರುವುದು. ಇಲ್ಲಿ ನೀಲಿ ಬಣ್ಣದ್ದಿದೆಯಲ್ಲ, ಅದು ಗೌರಿಶಂಕರದ ತುತ್ತ ತುದಿಯನ್ನೇರಿ ಮೋದಿಯವರು ತಂದಿರುವುದು. ಕ್ಷೀರಸಾಗರ ಕಡೆಯುವಾಗ ಈ ಟೀಪುಡಿ ಹುಟ್ಟಿತಂತೆ. ಅಲ್ಲಿಂದ ತಂದಿರುವುದು. ಈ ಟೀಪುಡಿಗೆ ದೈವೀಶಕ್ತಿಯಿದೆ. ನಾವೂ ಆಶಕ್ತಿಯನ್ನು ಹೊಂದಿದ್ದರೆ, ನಮಗೂ ಕಾಣುತ್ತದೆ. ನೋಡಿ ನಿಮಗೆ ಕಾಣುತ್ತದೆಯೇ?’’ ಕಕಿ ಬಕ ಕೇಳಿದ.
ಕಾಸಿಗೆ ಏನೂ ಕಾಣುತ್ತಿರಲಿಲ್ಲ. ತಾನೀಗ ಏನು ಹೇಳಬೇಕು? ಕಾಣುವುದಿಲ್ಲ ಎಂದರೆ ಚೆನ್ನಾಗಿರುತ್ತದೆಯೆ? ಅಷ್ಟರಲ್ಲಿ ಕಕಿ ಬಕ ಹೇಳಿದ ‘‘ನೋಡಿ...ನೀವು ಅಪ್ರತಿಮ ದೇಶಭಕ್ತ ಪತ್ರಕರ್ತರಾಗಿರುವುದರಿಂದ ನಿಮಗೆ ಕಾಣಲೇ ಬೇಕು.....ನಿಮಗೆಲ್ಲ ನಾನು ವಿವರಿಸುವ ಅಗತ್ಯವೇ ಇಲ್ಲ’’ ಅಷ್ಟು ಹೇಳಿದ್ದೇ ತಡ ಕಾಸಿಗೆ ಬಣ್ಣದ ಪೆಟ್ಟಿಗೆಯೊಳಗಿರುವ ಬಗೆ ಬಗೆಯ ದೈವ ಸಂಭೂತವಾದ ಟೀಪುಡಿಗಳು ಕಾಣಿಸತೊಡಗಿದವು.
‘‘ಹೌದೌದು ಕಾಣುತ್ತಿದೆ’’ ಕಾಸಿ ಹೇಳಿದ.

 ‘‘ಇಡೀ ವಿಶ್ವಕ್ಕೆ ಕಾಣುತ್ತಿದೆ. ಆದರೆ ನೆಹರೂ ವಂಶಸ್ಥರಿಗೆ ಕಾಣುತ್ತಿಲ್ಲ. ಇಂದು ಇಡೀ ವಿಶ್ವ ಭಾರತದ ಕಡೆಗೆ ಬೆರಗು ಗಣ್ಣಿನಿಂದ ನೋಡುತ್ತಿದೆ....’’ ಎನ್ನುತ್ತಾ ಕಕಿಬಕ ಟೀ ಮಾಡತೊಡಗಿದ. ಸ್ಟವ್‌ನಲ್ಲಿ ಪಾತ್ರೆ ಇತ್ತು. ಪೆಟ್ಟಿಗೆಯಿಂದ ಟೀಪುಡಿಯನ್ನು ಎತ್ತಿ ಪಾತ್ರೆಗೆ ಹಾಕಿದಂತೆ ಮಾಡಿದ. ಗ್ಯಾಸ್ ಹಚ್ಚಿದ. ಆದರೆ ಬೆಂಕಿ ಹತ್ತಲೇ ಇಲ್ಲ. ‘‘ನೋಡ್ರೀ ಮೋದಿ ಕೊಟ್ಟಿರುವ ಫ್ರೀ ಉಜ್ವಲಾ ಗ್ಯಾಸ್ ಸಿಲಿಂಡರ್....’’ ಎಂದು ಕಕಿಬಕ ಪರಿಚಯಿಸಿದ. ದೇಶಭಕ್ತರಿಗೆ ಮಾತ್ರ ಅದರಲ್ಲಿ ಬೆಂಕಿ ಉರಿಯುತ್ತಿರುವುದು ಕಾಣುವುದಾದುದರಿಂದ ಕಾಸಿ ಪ್ರಶ್ನಿಸಲು ಹೋಗಲಿಲ್ಲ. ಟೀ ಕುದಿಯುತ್ತಿದ್ದಂತೆಯೇ ಕಕಿಬಕ ಸಕ್ಕರೆ ಹಾಕಿದಂತೆ ಮಾಡಿದ. ಹಾಲು ಸುರಿದಂತೆ ಮಾಡಿದ ‘‘ಇದು ಮೋದಿಯವರು ಹಿಮಾಲಯದಿಂದ ತಂದ ನಂದಿನಿ ಹಸುವಿನ ಹಾಲು....’’ ಎಂದು ತನ್ನ ಮಾತಿಗೆ ತಾನೇ ಬೆಕ್ಕಸ ಬೆರಗಾದ. ಆಮೇಲೆ ಚಹಾವನ್ನು ಗ್ಲಾಸಿಗೆ ಸುರಿದಂತೆ ಮಾಡಿದ. ‘‘ನೋಡಿ...ಚಹಾ ಎಷ್ಟು ಪರಿಮಳ ಅಲ್ವಾ....’’ ಎಂದು ಕೇಳಿದ.
‘‘ಹೌದು...’’ ಎನ್ನುವಂತೆ ಕಾಸಿ ತಲೆ ಅಲ್ಲಾಡಿಸಿದ.
‘‘ಕುಡಿಯಿರಿ, ಕುಡಿಯಿರಿ’’ ಎಂದು ದೊಡ್ಡ ಗ್ಲಾಸ್‌ನಲ್ಲಿ ಕಕಿಬಕ ಚಹಾ ಕೊಟ್ಟ. ಕಾಸಿ ನೋಡುತ್ತಾನೆ, ಅದರಲ್ಲಿ ಚಹಾ ಎಲ್ಲಿದೆ? ಖಾಲಿ ಗ್ಲಾಸ್. ಒಂದು ಗ್ಲಾಸ್‌ನಲ್ಲಿ ತಾನೂ ಚಹಾ ಹಾಕಿ ಕಕಿಬಕ ಕುಡಿಯುವಂತೆ ನಟಿಸತೊಡಗಿದ. ಅವನನ್ನು ನೋಡಿ ಕಾಸಿ ಕೂಡ ಚಹಾ ಕುಡಿಯುವವನಂತೆ ನಟಿಸಿದ.
‘‘ಬಿಸಿಯಿದೆ...ಬಿಸಿಯಿದೆ....ಆರಿಸಿ ಕುಡಿಯಿರಿ’’ ಕಕಿಬಕ ಸಲಹೆ ನೀಡಿದ.
ಅದರಂತೆ ಕಾಸಿ ಟೀಯನ್ನು ನಿಧಾನಕ್ಕೆ ಕುಡಿಯತೊಡಗಿದ. ಎಲ್ಲ ಮುಗಿದ ಬಳಿಕ ಕಕಿಬಕ ಕೇಳಿದ ‘‘ಕಾಸಿಯವ್ರೇ ಟೀ ಹೇಗಿತ್ತು?’’
‘‘ಮೋದಿಯವರ ಅಚ್ಛೇದಿನದಷ್ಟೇ ಚೆನ್ನಾಗಿತ್ತು....’’ ಎಂದವನೇ ಅಲ್ಲಿಂದ ಹೊರಗೆ ಧಾವಿಸಿ, ಪಕ್ಕದಲ್ಲೇ ಇರುವ ಅಬ್ಬೂಕಾಕನ ಗೂಡಂಗಡಿಯಲ್ಲಿ ಒಂದು ಟೀಗೆ ಆರ್ಡರ್ ಮಾಡಿದ.

 

Writer - *ಚೇಳಯ್ಯ chelayya@gmail.com

contributor

Editor - *ಚೇಳಯ್ಯ chelayya@gmail.com

contributor

Similar News