ರಾಮಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಮೇಲೆ ಒತ್ತಡ ಹೇರಲು ಅಯೋಧ್ಯೆಗೆ ಪಾದಯಾತ್ರೆ: ಎಬಿವಿಪಿ ಅಧ್ಯಕ್ಷ

Update: 2019-01-20 04:31 GMT

ಲಕ್ನೋ, ಜ. 20: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಕರೆ ನೀಡಿದ ಬೆನ್ನಲ್ಲೇ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅಧ್ಯಕ್ಷ ಮಹಾಂತ ನರೇಂದ್ರ ಗಿರಿ, "ಅಯೋಧ್ಯೆ ರಾಮಮಂದಿರ ನಿರ್ಮಾಣ ಸಂಬಂಧ ಬಿಜೆಪಿ ಮೇಲೆ ಒತ್ತಡ ಹೇರಲು ಅಯೋಧ್ಯೆಗೆ ಪಾದಯಾತ್ರೆ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

ರಾಮಮಂದಿರ ನಿರ್ಮಾಣದ ವಿಳಂಬದ ಬಗ್ಗೆ ಬಿಜೆಪಿ ವಿರುದ್ಧ ಎಬಿವಿಪಿ ಅಧ್ಯಕ್ಷ ಹರಿಹಾಯ್ದಿದ್ದು, ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಬಿಜೆಪಿಯ ಉದ್ದೇಶದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅವರು, ರಾಮಮಂದಿರ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇದ್ದಂತಿಲ್ಲ ಎಂದು ಟೀಕಿಸಿದರು. ಜತೆಗೆ ವಿಶ್ವಹಿಂದೂ ಪರಿಷತ್ ಹಾಗೂ ಆರೆಸ್ಸೆಸ್ ಮುಖಂಡರ ವಿರುದ್ಧವೂ ವಾಗ್ದಾಳಿ ನಡೆಸಿದರು.

ಕುಂಭ ಮೇಳದಲ್ಲಿ ಜನವರಿ 31ರಂದು ನಡೆಯುವ ಧರ್ಮಸಂಸದ್‌ನಲ್ಲಿ ಕೂಡಾ ಮಂದಿರ ವಿವಾದದ ಬಗ್ಗೆ ದೃಢ ನಿರ್ಧಾರ ಕೈಗೊಳ್ಳುವುದು ಅನುಮಾನ ಎಂದು ಹೇಳಿದ ಅವರು, ವಿಎಚ್‌ಪಿಯ ಧರ್ಮಸಂಸದ್‌ಗೆ ಇದುವರೆಗೆ ಆಹ್ವಾನ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಕುಂಭ ಮೇಳದಿಂದ ಲಕ್ಷಾಂತರ ನಾಗಸಾಧುಗಳ ಜತೆಗೆ ಅಯೋಧ್ಯೆಗೆ ಪಾದಯಾತ್ರೆ ಆರಂಭಿಸುವುದಾಗಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News