“ಇವಿಎಂ ಹ್ಯಾಕಿಂಗ್ ಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧವಿದೆ”

Update: 2019-01-21 17:33 GMT

ಲಂಡನ್, ಜ.21: 2014ರ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎನ್ನುವ ಬಗ್ಗೆ ವರದಿ ಪ್ರಕಟಿಸಲು ಪತ್ರಕರ್ತೆ ಗೌರಿ ಲಂಕೇಶ್ ಸಿದ್ಧರಿದ್ದರು. ಇವಿಎಂಗಳಲ್ಲಿ ಬಳಸಲಾದ ಕೇಬಲ್ ಗಳನ್ನು ಯಾರು ತಯಾರಿಸಿದ್ದರು ಎನ್ನುವುದನ್ನು ತಿಳಿದುಕೊಳ್ಳಲು ಗೌರಿ ಲಂಕೇಶ್ ಆರ್ ಟಿಐ ಅರ್ಜಿ ಸಲ್ಲಿಸಿದ್ದರು. ಆನಂತರ ಅವರನ್ನು ಕೊಲ್ಲಲಾಯಿತು ಎಂದು ಅಮೆರಿಕ ಮೂಲದ ಹ್ಯಾಕರ್ ಸೈಯದ್ ಶುಜಾ ಆರೋಪಿಸಿದ್ದಾರೆ.

ಲಂಡನ್ ನಲ್ಲಿ ಇಂಡಿಯನ್ ಜರ್ನಲಿಸ್ಟ್ ಅಸೋಸಿಯೇಶನ್ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬ್ಲೂಟೂತ್ ಗಳನ್ನು ಬಳಸಿ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇವಿಎಂ ಹ್ಯಾಕ್ ಗೆ ಗ್ರಾಫೈಟ್ ಆಧಾರಿತ ಟ್ರಾನ್ಸ್ ಮಿಟರ್ ನ ಅಗತ್ಯವಿದೆ. 2014ರಲ್ಲಿ ಈ ಟ್ರಾನ್ಸ್ ಮಿಟರನ್ನು ಬಳಸಲಾಗಿತ್ತು ಎಂದವರು ಆರೋಪಿಸಿದರು.

ಗ್ರಾಫೈಟ್ ಆಧಾರಿತ ಟ್ರಾನ್ಸ್‌ಮಿಟರ್ ಬಳಸಿ ಕನ್ನ ಹಾಕಲು ಸಾಧ್ಯ

ಇಲೆಕ್ಟ್ರಾನಿಕ್ ಮತಯಂತ್ರವನ್ನು ಬ್ಲೂಟೂತ್ ಬಳಸಿ ತಿರುಚಲು ಸಾಧ್ಯವಿಲ್ಲ; ಇವಿಎಂನ ಒಳಗೆ ಪ್ರವೇಶಿಸಲು ಗ್ರಾಫೈಟ್ ಆಧಾರಿತ ಟ್ರಾನ್ಸ್‌ಮಿಟರ್‌ನ ಅಗತ್ಯವಿದೆ ಎಂದು ಸೈಯದ್ ಶುಜಾ ಹೇಳುತ್ತಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಈ ಟ್ರಾನ್ಸ್‌ಮಿಟರ್‌ಗಳನ್ನು ಬಳಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಮತ ಯಂತ್ರಗಳಲ್ಲಿರುವ ದತ್ತಾಂಶವನ್ನು ತಿರುಚುವುದಕ್ಕಾಗಿ ಒಬ್ಬ ವ್ಯಕ್ತಿ ‘ಪಿಂಗ್’ ಮಾಡುತ್ತಿದ್ದನು ಎಂದು ಅವರು ಹೇಳಿಕೊಂಡಿದ್ದಾರೆ.

 ‘‘ಮತಯಂತ್ರಗಳು ತಂತಿಯಿಲ್ಲದೆ ಸಂವಹನ ನಡೆಸಲಾರವು ಎಂಬುದಾಗಿ ಒಬ್ಬರ ನಂತರ ಒಬ್ಬರಂತೆ ಬಂದದ ಮುಖ್ಯ ಚುನಾವಣಾ ಆಯುಕ್ತರು ನನಗೆ ಹೇಳಿದ್ದಾರೆ. ಆದರೆ, ಕಡಿಮೆ ಫ್ರೀಕ್ವೆನ್ಸಿಯ, ಅಂದರೆ 7 ಹರ್ಟ್ಝ್ ಫ್ರೀಕ್ವೆನ್ಸಿಯ ಮಾಡ್ಯುಲೇಟರ್ ಬಳಸಿ ಇದನ್ನು ಸಾಧಿಸುವ ತಂತ್ರಜ್ಞಾನ ನಮ್ಮಲ್ಲಿದೆ. ಇದು ಸೇನಾ ಮಟ್ಟದ ಫ್ರೀಕ್ವೆನ್ಸಿಯಾಗಿದೆ’’ ಎಂದು ಸೈಯದ್ ಹೇಳಿದ್ದಾರೆ.

ಟ್ರಾನ್ಸ್‌ಮಿಶನ್ ನಿಲ್ಲಿಸಿದಾಗ ‘ಆಪ್’ ಗೆದ್ದಿತು

‘‘ನಾವು ದಿಲ್ಲಿಯಲ್ಲಿ ಟ್ರಾನ್ಸ್‌ಮಿಶನ್ ನಿಲ್ಲಿಸಿದಾಗ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಆಪ್) ವಿಜಯಿಯಾಯಿತು ಎಂದು ಸೈಯದ್ ಶುಜಾ ಹೇಳಿದರು.

 ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗ ಆರಂಭಿಸಿದ ಟ್ರಾನ್ಸ್‌ಮಿಶನನ್ನು ತಡೆಯಲಾಯಿತು ಎಂದರು.

‘‘ಆಮ್ ಆದ್ಮಿ ಪಾರ್ಟಿಗೆ ಸಹಾಯವಾಗುವಂತೆ ನಾವು ಫ್ರೀಕ್ವೆನ್ಸಿಯನ್ನು ಬದಲಾಯಿಸಿದೆವು. ವಾಸ್ತವಿಕ ಫಲಿತಾಂಶವು 2009ರ ಚುನಾವಣಾ ಫಲಿತಾಂಶವನ್ನು ಹೋಲುತ್ತಿತ್ತು’’ ಎಂದು ಅವರು ಹೇಳಿದರು.

2008 ಅಕ್ಟೋಬರ್ 29ರಂದು ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, 70 ಸ್ಥಾನಗಳ ಪೈಕಿ ಕಾಂಗ್ರೆಸ್ 43, ಬಿಜೆಪಿ 23, ಬಹುಜನ ಸಮಾಜ ಪಕ್ಷ 2, ಲೋಕಜನ ಶಕ್ತಿ ಪಕ್ಷ ಮತ್ತು ಪಕ್ಷೇತರರು ತಲಾ ಒಂದು ಸ್ಥಾನಗಳನ್ನು ಗೆದ್ದಿದ್ದಾರೆ.

ನಮ್ಮ ಕಡಿಮೆ ಫ್ರೀಕ್ವೆನ್ಸಿ ಟ್ರಾನ್ಸ್‌ಮಿಶನನ್ನು ತಡೆಯಲೂ ಅವರು ಪ್ರಯತ್ನಿಸಿದರು ಎಂದು ಸೈಯದ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News