ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

Update: 2019-01-21 15:55 GMT

ಚೆನ್ನೈ, ಜ.21: ಸಾಮಾನ್ಯ ವರ್ಗದಲ್ಲಿರುವ ಬಡವರಿಗೆ ಶೇ.10 ಮೀಸಲಾತಿ ನೀಡುವ ಬಗ್ಗೆ ಫೆ.18ರ ಮೊದಲು ಉತ್ತರಿಸುವಂತೆ ತಿಳಿಸಿ ಕೇಂದ್ರ ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಸರಕಾರದ ನಿರ್ಧಾರ ಸಂವಿಧಾನದ ಮೂಲ ಆಶಯಗಳ ಉಲ್ಲಂಘನೆಯಾಗಿದೆ ಎಂದು ದೂರಿ ಡಿಎಂಕೆ ಜನವರಿ 18ರಂದು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

 ಮೀಸಲಾತಿಯು ಶತಮಾನಗಳಿಂದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಂದ ವಂಚಿತರಾಗಿದ್ದ ಸಮುದಾಯಗಳನ್ನು ಮೇಲ್ಮಟ್ಟಕ್ಕೇರಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದೆ. ಇದು ಬಡತನ ನಿವಾರಿಸುವ ಯೋಜನೆಯಲ್ಲ ಎಂದು ಡಿಎಂಕೆ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಈ ತಿಂಗಳ ಆರಂಭದಲ್ಲಿ ಅನುಮೋದನೆ ದೊರೆತಿದೆ. ಜನವರಿ 12ರಂದು ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದರು. ಮರುದಿನವೇ, ಶೇ.10 ಮೀಸಲಾತಿ ನಿಯಮವನ್ನು ಜಾರಿಗೊಳಿಸುವುದಾಗಿ ಘೋಷಿಸಿದ ಗುಜರಾತ್ ಈ ಸೌಲಭ್ಯ ಜಾರಿಗೊಳಿಸಿದ ದೇಶದ ಪ್ರಪ್ರಥಮ ರಾಜ್ಯವೆನಿಸಿದೆ. ಬಿಜೆಪಿ ಆಳ್ವಿಕೆಯ ಇತರ ಎರಡು ರಾಜ್ಯಗಳಾದ ಜಾರ್ಖಂಡ್ ಮತ್ತು ಉತ್ತರಪ್ರದೇಶ ರಾಜ್ಯಗಳೂ ಶೇ.10 ಮೀಸಲಾತಿ ಜಾರಿಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News