ಆಂಧ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದಾಗಿ ಕೇಂದ್ರದ ಬೆದರಿಕೆ: ಚಂದ್ರಬಾಬು ನಾಯ್ಡು

Update: 2019-01-21 16:06 GMT

ಅಮರಾವತಿ, ಜ. 21: ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುವುದು ಎಂದು ಕೇಂದ್ರ ಸರಕಾರ ಬೆದರಿಕೆ ಒಡ್ಡುತ್ತಿದೆ. ಆದರೆ, ಇಂತಹ ಬೆದರಿಕೆಗಳ ಮೂಲಕ ನಮ್ಮನ್ನು ಮಣಿಸಲು ಸಾಧ್ಯವಿಲ್ಲ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಕುಸಿಯುತ್ತಿದೆ ಎಂದು ಅವರು ಹೇಳಿದರು. ಟಿಡಿಪಿ ನಾಯಕರೊಂದಿಗೆ ಟೆಲಿಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಆಂಧ್ರಪ್ರದೇಶಕ್ಕೆ ಏನನ್ನೂ ಮಾಡಿಲ್ಲ ಎಂದರು. ‘‘ಪ್ರತಿ ವಾರ ರಾಜ್ಯಕ್ಕೆ ಓರ್ವ ಕೇಂದ್ರ ಸಚಿವ ಆಗಮಿಸಲಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಅವರು ಈ ರಾಜ್ಯಕ್ಕಾಗಿ ಮಾಡಿರುವ ಉತ್ತಮ ಕೆಲಸವಾದರೂ ಏನು?, ಉನ್ನತ ಮಟ್ಟದಲ್ಲಿ ಅವರು ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಅವರ ಬೆದರಿಕೆಗಳಿಗೆ ತಲೆಬಾಗಲು ಇಲ್ಲಿ ಯಾರೂ ಇಲ್ಲ’’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಕೋಲ್ಕೊತ್ತಾದಲ್ಲಿ ನಡೆದ ಪ್ರತಿಪಕ್ಷಗಳ ರ್ಯಾಲಿ ಉಲ್ಲೇಖಿಸಿ ಮಾತನಾಡಿದ ಅವರು, ಇದು ಸರ್ವಾಧಿಕಾರ ಆಡಳಿತ ಅಂತ್ಯದ ಚಿಹ್ನೆಯಾಗಿದೆ. ಇದು ದೇಶದ ಜನತೆಗೆ ಆತ್ಮಸ್ಥೈರ್ಯ ನೀಡಲಿದೆ ಎಂದು ಅವರು ಹೇಳಿದರು.

ಕೆ. ಚಂದ್ರಶೇಖರ್ ಹಾಗೂ ವೈಎಸ್‌ಆರ್ ಕಾಂಗ್ರೆಸ್‌ನ ಅಧ್ಯಕ್ಷ ವೈ.ಎಸ್. ಜಗನ್‌ಮೋಹನ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡ ಚಂದ್ರಬಾಬು ನಾಯ್ಡು, ಅವರು ಮೋದಿ ಅವರ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News