ಗಣಿ ದುರಂತ ಕಾರ್ಮಿಕರ ಶವಗಳ ಹೊರ ತೆಗೆಯುವ ನೌಕಾಪಡೆಯ ಕಾರ್ಯಾಚರಣೆ ಅಂತ್ಯ

Update: 2019-01-21 16:08 GMT

ಶಿಲ್ಲಾಂಗ್, ಜ. 21: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್‌ನ ಕಲ್ಲಿದ್ದಲು ಗಣಿಯೊಳಗೆ ನಾಲ್ಕು ದಿನಗಳ ಹಿಂದೆ ಗುರುತಿಸಲಾದ ಕಾರ್ಮಿಕರ ಕೊಳೆತ ಮೃತದೇಹಗಳನ್ನು ಹೊರ ತೆಗೆಯುವ ಪ್ರಯತ್ನವನ್ನು ನೌಕಾ ಪಡೆ ರವಿವಾರ ಸ್ಥಗಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣಿಯ ಒಳಗಡೆ 160 ಅಡಿ ಆಳದಲ್ಲಿ ಕಾರ್ಮಿಕರ ಕೊಳೆತ ಶವಗಳು ಸಿಲುಕಿಕೊಂಡಿರುವುದನ್ನು ನೌಕಾ ಪಡೆಯ ಮುಳುಗುಗಾರರು ಮಾನವ ರಹಿತ ರಿಮೋಟ್ ನಿಯಂತ್ರಿತ ವಾಹನದ ಮೂಲಕ ಗುರುತಿಸಿದ್ದರು. ಕಳೆದ ವರ್ಷ ಡಿಸೆಂಬರ್ 13ರಂದು ಕಾರ್ಮಿಕನೋರ್ವ ಆಕಸ್ಮಿಕವಾಗಿ ಗಣಿಯ ಗೋಡೆಗೆ ಹಾನಿ ಮಾಡಿದ ಪರಿಣಾಮ ನೆರೆ ಸಂಭವಿಸಿ 15 ಕಾರ್ಮಿಕರು ನಾಪತ್ತೆಯಾಗಿದ್ದರು. ‘‘ರಿಮೋಟ್ ನಿಯಂತ್ರಿತ ವಾಹನದ ಮೂಲಕ ಕೊಳೆತ ಮೃತದೇಹಗಳನ್ನು ಹೊರಗೆಳೆಯುವಾಗ ಛಿದ್ರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರವಿವಾರ ಸಂಜೆಯಿಂದ ಆರಂಭಿಸಲಾದ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆಯನ್ನು ನೌಕಾ ಪಡೆ ಸೋಮವಾರ ಸ್ಥಗಿತಗೊಳಿಸಿದೆ.’’ ಎಂದು ಕಾರ್ಯಾಚರಣೆಯ ವಕ್ತಾರ ಆರ್. ಸುಸಂಗಿ ಹೇಳಿದ್ದಾರೆ.

ಅಂತ್ಯಕ್ರಿಯೆ ನಡೆಸಲು ಕೊಳೆತ ಶವಗಳನ್ನಾದರೂ ನೀಡಿ ಎಂದು 15 ಕಾರ್ಮಿಕರ ಕುಟುಂಬಗಳಲ್ಲಿ 4 ಕುಟಂಬಗಳು ಶನಿವಾರ ರಕ್ಷಣಾ ಕಾರ್ಯಕರ್ತರನ್ನು ಆಗ್ರಹಿಸಿತ್ತು. ಕಾರ್ಮಿಕರು ಸಿಲುಕಿಕೊಂಡ ಗಣಿಯ ಮುಖ್ಯ ಭಾಗದಿಂದ ಹಾಗೂ ಸಮೀಪದ ಗಣಿಗಳಿಂದ ನೀರು ಹೊರ ಹಾಕುವುದು ಸೇರಿದಂತೆ ಬಹು ಸಂಸ್ಥೆ ಕಾರ್ಯಾಚರಣೆ ವಿಫಲವಾಗಿತ್ತು. ಇದರಿಂದ ಯಾವುದೇ ಫಲಿತಾಂಶ ದೊರೆತಿರಲಿಲ್ಲ. ನೀರಿನ ಮಟ್ಟ ಇಳಿಕೆಯಾಗಿರಲಿಲ್ಲ.

ರಕ್ಷಣಾ ಕಾರ್ಯಾಚರಣೆ ನಿಲ್ಲಿಸುವುದಿಲ್ಲ

ರಕ್ಷಣಾ ಕಾರ್ಯಾಚರಣೆ ಪ್ರಯತ್ನವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ನಿಲ್ಲಿಸುವುದಿಲ್ಲ ಎಂದು ಮೇಘಾಲಯ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಎನ್‌ಡಿಆರ್‌ಎಫ್, ನೌಕಾ ಪಡೆ ಹಾಗೂ ಇತರ ತಜ್ಞರ ಸಾಮೂಹಿಕ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ. ಇದುವರೆಗಿನ ಕಾರ್ಯಾಚರಣೆಯಿಂದ ಯಾರೊಬ್ಬ ಕಾರ್ಮಿಕ ಕೂಡ ಜೀವಂತವಾಗಿ ಪತ್ತೆಯಾಗಿಲ್ಲ. ನೌಕಾ ಪಡೆಯ ರಿಮೋಟ್ ನಿಯಂತ್ರಿತ ವಾಹನ ಓರ್ವ ಕಾರ್ಮಿಕನನ್ನು ಪತ್ತೆ ಮಾಡಿದೆ. ಛಿದ್ರವಾಗುವ ಅಪಾಯ ಇದ್ದರೂ ಮೃತದೇಹಗಳನ್ನು ಶೋಧಿಸುವ ಕಾರ್ಯ ಮುಂದುವರಿದಿದೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News