ಬಿಹಾರದಲ್ಲಿ ಮೇಲ್ಜಾತಿಗೆ ಮೀಸಲಾತಿ ಕಾನೂನು ಅಭಿಪ್ರಾಯದ ಬಳಿಕ ಅನುಷ್ಠಾನ: ನಿತೀಶ್ ಕುಮಾರ್

Update: 2019-01-21 16:10 GMT

ಪಾಟ್ನಾ, ಜ. 21: ಕಾನೂನು ಅಭಿಪ್ರಾಯದ ಬಳಿಕ ಬಿಹಾರ ಸರಕಾರ ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ಅನುಷ್ಠಾನಗೊಳಿಸಲಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಹೇಳಿದ್ದಾರೆ. ಈಗಿರುವ ಮೀಸಲಾತಿ ಅಲ್ಲದೆ, ಇತ್ತೀಚೆಗಿನ ಸಂವಿಧಾನ ತಿದ್ದುಪಡಿ ಮೂಲಕ ಪರಿಚಯಿಸಲಾದ ನೂತನ ಮೀಸಲಾತಿಯನ್ನು ವಿಧಾನ ಸಭೆಯಲ್ಲಿ ಕಾಯ್ದೆ ಮಂಜೂರು ಮಾಡುವ ಅಥವಾ ಆದೇಶ ತರುವ ಮೂಲಕ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಕಾನೂನು ಅಭಿಪ್ರಾಯ ಕೋರಲಾಗಿದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.

ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಶೇ. 50ರ ವರೆಗೆ ಮೀಸಲಾತಿ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ನಾವು ಬದ್ದರಾಗಿದ್ದೇವೆ. ಆದರೆ, ನಿಗದಿತ ಜಾತಿ ಗುಂಪಿನ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಮಿತಿ ಹೆಚ್ಚಿಸುವ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ಅವರು ಹೇಳಿದ್ದಾರೆ. ಇಲ್ಲಿ ನಡೆದ ‘ಲೋಕಸಂವಾದ್’ ಕಾರ್ಯಕ್ರಮದ ನೇಪಥ್ಯದಲ್ಲಿ ಅವರು ಮಾತನಾಡಿದರು.

ಈ ಬಗ್ಗೆ ಆಗ್ರಹಿಸಿರುವ ಪ್ರತಿಪಕ್ಷಗಳಿಗೆ ಹೇಗೆ ಮುಂದುವರಿಯಬೇಕು ಎಂಬ ಕಲ್ಪನೆ ಇಲ್ಲ. ನನ್ನ ನಿಲುವಿನ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗದಂತಹ ಸಾಮಾಜಿಕ ವಿಭಾಗದ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಹೊಸ ಸಮೀಕ್ಷೆ ನಡೆಸಬೇಕು. ಈ ವರದಿಯ ಆಧಾರದಲ್ಲಿ ವಿವಿಧ ಜಾತಿಗಳಿಗೆ ಅವರವರ ಪ್ರತಿನಿಧೀಕರಣ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನೀಡಬಹುದು ಎಂದು ಅವರು ಹೇಳಿದರು. ಇತರ ಹಿಂದುಳಿದ ಜಾತಿಗಳಲ್ಲಿರುವ ತೀರಾ ಹಿಂದುಳಿದ ವರ್ಗಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ವರ್ಗವಾಗಿ ಪರಿಣಮಿಸುವುದನ್ನು ನಾನು ಬೆಂಬಲಿಸುತ್ತೇನೆ ಎಂದು ಅವರು ಹೇಳಿದ್ದಾರೆ. ‘‘ಬಿಹಾರದಲ್ಲಿ ನಾವು ಇದನ್ನು ಮಾಡಿದ್ದೇವೆ. ಹಿಂದುಳಿದ ವರ್ಗಗಗಳನ್ನು ರಾಷ್ಟ್ರೀಯವಾಗಿ ಇದೇ ರೀತಿ ವರ್ಗೀಕರಿಸಲು ಕೇಂದ್ರದಲ್ಲಿ ಸಮಿತಿ ರಚಿಸಬೇಕು ಎಂಬುದು ನನ್ನ ನಿಲುವು’’ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News