ಪ್ರಧಾನಿ ಮೋದಿ, ಭಾರತ ಮಾತೆಗೆ ಅವಮಾನ ಆರೋಪ: ಲೊಯೊಲಾ ಕಾಲೇಜು ವಿರುದ್ಧ ಬಿಜೆಪಿ ಆಕ್ರೋಶ

Update: 2019-01-21 16:46 GMT

ಚೆನ್ನೈ,ಜ.21: ಚಿತ್ರಕಲಾ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಮತ್ತು ಭಾರತ ಮಾತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಇಲ್ಲಿನ ಪ್ರತಿಷ್ಠಿತ ಲೊಯೊಲಾ ಕಾಲೇಜು ವಿರುದ್ಧ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಲ್ಟರ್ನೇಟಿವ್ ಮೀಡಿಯ ಸೆಂಟರ್ ಸಹಯೋಗದೊಂದಿಗೆ ಲೊಯೊಲಾ ಕಾಲೇಜು ಜನವರಿ 19-20ರಂದು ಎರಡು ದಿನಗಳ ಬೀದಿ ಪ್ರಶಸ್ತಿ ಉತ್ಸವವನ್ನು ಆಯೋಜಿಸಿತ್ತು. ಉತ್ಸವದ ಹಿನ್ನೆಲೆಯಲ್ಲಿ ಚಿತ್ರಕಲೆ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆಮೂಲಕ ಅತೀಹೆಚ್ಚು ಸಂಖ್ಯೆಯ ಚಿತ್ರಕಲೆ ವಿಧಾನಗಳನ್ನು ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿತ್ತು.

ಪ್ರದರ್ಶನದಲ್ಲಿ ಜಾತಿ ಹಿಂಸಾಚಾರ, ಲೈಂಗಿಕ ಹಿಂಸಾಚಾರ, ಶೋಷಿತರ ದೌರ್ಜನ್ಯ ಮತ್ತು ಹೋರಾಟಗಾರರ ಧ್ವನಿಯನ್ನು ಯಾವ ರೀತಿ ಉಡುಗಿಸಲಾಗುತ್ತಿದೆ ಎನ್ನುವುದನ್ನು ಚಿತ್ರಗಳ ಮೂಲಕ ಬಿಂಬಿಸಲಾಗಿತ್ತು. ಮೀಟೂ ಹಿನ್ನೆಲೆಯಲ್ಲಿ ಭಾರತ ಮಾತೆಯನ್ನು ತೋರಿಸಿದ ಚಿತ್ರ ಅತೀಹೆಚ್ಚು ಟೀಕೆಗೆ ಒಳಗಾಗಿದೆ ಎಂದು ವರದಿಗಳು ತಿಳಿಸಿವೆ. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಲೊಯೊಲಾ ಕಾಲೇಜು ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಇಂಥ ಪ್ರದರ್ಶನವನ್ನು ಆಯೋಜಿಸಿರುವುದಕ್ಕಾಗಿ ಕಾಲೇಜಿನ ವಿರುದ್ಧ ಬಿಜೆಪಿ ಚೆನ್ನೈ ಡಿಜಿಪಿಯವರಲ್ಲಿ ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News