ಇವಿಎಂ ಕುರಿತ ಲಂಡನ್ ಹ್ಯಾಕರ್ ಪ್ರತಿಪಾದನೆ ನಿರಾಕರಿಸಿದ ಚುನಾವಣಾ ಆಯೋಗ

Update: 2019-01-21 17:06 GMT

ಹೊಸದಿಲ್ಲಿ, ಜ. 21: ಭಾರತದಲ್ಲಿ ಬಳಸುತ್ತಿರುವ ಎಲೆಕ್ಟ್ರಾನಿಕ್ಸ್ ಮತದಾನ ಯಂತ್ರ (ಇವಿಎಂ) ವನ್ನು ತಾನು ಹ್ಯಾಕ್ ಮಾಡಬಲ್ಲೆ ಎಂದ ಲಂಡನ್ ಮೂಲದ ಹ್ಯಾಕರ್ ಪ್ರತಿಪಾದನೆಯನ್ನು ಚುನಾವಣಾ ಆಯೋಗ ನಿರಾಕರಿಸಿದೆ.

ಪ್ರತಿಪಕ್ಷಗಳು ಹೊಸದಾಗಿ ಈ ಪ್ರಶ್ನೆಗಳನ್ನು ಎತ್ತಿರುವ ಸಂದರ್ಭದಲ್ಲಿ ಸೋಮವಾರ ಸಂಜೆ ನಡೆದ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಹ್ಯಾಕರ್ ಸೈಯದ್ ಶುಜಾ ಈ ಹೇಳಿಕೆ ನೀಡಿದ್ದಾರೆ. ಇವಿಎಂ ಯಾವುದೇ ಸಂಪರ್ಕ ಇಲ್ಲದ ಯಂತ್ರ. ಯಾವುದೇ ನಿಸ್ತಂತು ಸಂವಹನದ ಮೂಲಕ ಯಾವುದೇ ದತ್ತಾಂಶವನ್ನು ರವಾನಿಸುವ ಅಥವಾ ಸ್ವೀಕರಿಸುವ ಸಾಮರ್ಥ್ಯ ಈ ಯಂತ್ರಕ್ಕಿಲ್ಲ ಎಂದು ಚುನಾವಣಾ ಆಯೋಗದ ಉನ್ನತ ತಾಂತ್ರಿಕ ತಜ್ಞ ಡಾ. ರಜತ್ ಮೂನಾ ಸ್ಪಷ್ಟಪಡಿಸಿದ್ದಾರೆ. ಆದುದರಿಂದಲೇ ಇದು ‘ತಿರುಚಲು ಸಾಧ್ಯವಾಗದ’ ಯಂತ್ರ ಎಂದು ಭಿಲಾಯಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಹಾಗೂ ಇವಿಎಂಗಳ ಕುರಿತ ಚುನಾವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರಾಗಿರುವ ಡಾ. ಮೂನಾ ಹೇಳಿದ್ದಾರೆ.

ಇದನ್ನು ‘‘ಉದ್ದೇಶಿತ ಕೆಸರೆರೆಚಾಟ’’ ಎಂದು ಚುನಾವಣಾ ಆಯೋಗ ಕರೆದಿದೆ. ಈ ವಿಷಯದ ಬಗ್ಗೆ ಯಾವ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯ ಹಾಗೂ ತೆಗೆದುಕೊಳ್ಳಬೇಕು ಎಂಬುದನ್ನು ಪರಿಶೀಲಿಸಲಿದ್ದೇವೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News