ಗೋಪಿನಾಥ್ ಮುಂಡೆ ಸಾವಿನ ತನಿಖೆಗೆ ಆಗ್ರಹಿಸಿದ ಸೋದರಳಿಯ ಧನಂಜಯ್ ಮುಂಡೆ

Update: 2019-01-22 06:20 GMT

ಹೊಸದಿಲ್ಲಿ, ಜ.22:  ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಸಾವಿನ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಅಥವಾ ‘ರಾ’ ಮೂಲಕ ನಡೆಸಬೇಕೆಂದು ಅವರ ಸೋದರಳಿಯ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಧನಂಜಯ್ ಮುಂಡೆ  ಆಗ್ರಹಿಸಿದ್ದಾರೆ.

ಮೋದಿ ಸರಕಾರ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ,  ಜೂನ್ 3, 2014ರಂದು ದಿಲ್ಲಿಯಲ್ಲಿ ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ ಗೋಪಿನಾಥ್ ಮುಂಡೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಭಾರತೀಯ ಮೂಲದ ಸೈಬರ್ ತಜ್ಞ  ಸೈಯದ್ ಶುಜಾ ಸೋಮವಾರ ಲಂಡನ್ ನಗರದಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿಕೊಂಡ ಹಿನ್ನೆಲೆಯಲ್ಲಿ ಈ ಆಗ್ರಹ ಕೇಳಿ ಬಂದಿದೆ.  2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರಗಳನ್ನು ತಿರುಚಲಾಗಿದೆಯೆಂದು ಗೋಪಿನಾಥ್ ಮುಂಡೆ ಅವರಿಗೆ ತಿಳಿದಿದ್ದರಿಂದ ಹಾಗೂ ಅದನ್ನು ಬಯಲುಗೊಳಿಸುವುದಾಗಿ ಅವರು ಹೇಳಿದ್ದರಿಂದ ಅವರನ್ನು ಕೊಲ್ಲಲಾಯಿತು ಎಂದು ಶುಜಾ ಹೇಳಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಮಹಾರಾಷ್ಟ್ರ ವಿಧಾನ ಪರಿಷತ್  ವಿಪಕ್ಷ ನಾಯಕರೂ ಆಗಿರುವ ಧನಂಜಯ್ ಮುಂಡೆ, ``ಇದು ಜನ ನಾಯಕನೊಬ್ಬನ ಸಾವಿನ ಕುರಿತಾಗಿರುವುದರಿಂದ ಈ ವಿಚಾರಕ್ಕೆ ತಕ್ಷಣ  ಗಮನ ನೀಡಬೇಕಿದೆ  ಹಾಗೂ ತನಿಖೆಯಾಗಬೇಕಿದೆ'' ಎಂದು ಬರೆದಿದ್ದಾರೆ.

“ಗೋಪಿನಾಥ್ ಮುಂಡೆ ಅವರ ಬಗ್ಗೆ ಪ್ರೀತಿ, ಅಭಿಮಾನವಿರುವವರು ಯಾವತ್ತೂ ಅವರ ಸಾವಿನ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ ಹಾಗೂ ಸೈಬರ್ ತಜ್ಞರು ಪತ್ರಿಕಾಗೋಷ್ಠಿಯಲ್ಲಿ ನೀಡುವ ಹೇಳಿಕೆಯೂ ಈ ಸಂಶಯಕ್ಕೆ ಪುಷ್ಠಿ ನೀಡುವಂತಿದೆ'' ಎಂದು ಧನಂಜಯ್ ಹೇಳಿದ್ದಾರೆ.

ಗೋಪಿನಾಥ್ ಮುಂಡೆ ಅವರನ್ನು  ಹತ್ಯೆ ಮಾಡಲಾಗಿದೆ ಎಂದು ಎಫ್‍ಐಆರ್ ದಾಖಲಿಸಲು ಯೋಜಿಸಿದ್ದ ರಾಷ್ಟ್ರೀಯ ತನಿಖಾ ಏಜನ್ಸಿಯ ಅಧಿಕಾರಿ ತಂಝೀಲ್ ಅಹ್ಮದ್  ಅವರನ್ನೂ ಹತ್ಯೆಗೈಯ್ಯಲಾಗಿದೆ ಎಂದು ಸೈಬರ್ ತಜ್ಞ ಶುಜಾ ವಾದಿಸಿದ್ದರು.

 ಗೋಪಿನಾಥ್ ಮುಂಡೆ ರಸ್ತೆ ಅಪಘಾತದಿಂದುಂಟಾದ ಗಾಯಗಳಿಂದ ಸಾವನ್ನಪ್ಪಿದ್ದರು ಎಂದು ಸಿಬಿಐ ಅಕ್ಟೋಬರ್ 2014ರಲ್ಲಿ  ತನಿಖೆಯ ನಂತರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News