2014ರಲ್ಲಿ ಇವಿಎಂ ಹ್ಯಾಕ್ ಆಗಿತ್ತು ಎಂಬ ಹೇಳಿಕೆ: ಸೈಬರ್ ‌ತಜ್ಞನ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚನೆ

Update: 2019-01-22 14:59 GMT

ಹೊಸದಿಲ್ಲಿ,ಜ.22: ಮತಯಂತ್ರಗಳನ್ನು (ಇವಿಎಂ) ತಿರುಚಬಹುದು ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಕಳ್ಳಮತದಾನ ನಡೆದಿತ್ತು ಎಂದು ಹೇಳಿಕೆ ನೀಡಿರುವ ಸ್ವಯಂಘೋಷಿತ ಸೈಬರ್ ಪರಿಣತನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದಿಲ್ಲಿ ಪೊಲೀಸರಿಗೆ ಚುನಾವಣಾ ಆಯೋಗ ಸೂಚಿಸಿದೆ.

ಸೈಬರ್ ತಜ್ಞನ ಹೇಳಿಕೆ ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು ಆಯೋಗ ತಿಳಿಸಿದೆ. ಈ ರೀತಿ ಹೇಳಿಕೆ ನೀಡುವ ಮೂಲಕ, ಸುಳ್ಳುಸುದ್ದಿಗಳನ್ನು ಹರಡುವ ವಿರುದ್ಧ ಶಿಕ್ಷೆ ನೀಡುವ ಭಾರತೀಯ ದಂಡ ಸಂಹಿತೆಯ ಕೆಲವು ವಿಧಿಗಳನ್ನು ಮತ್ತು ಸಂಬಂಧಿತ ಇತರ ಕಾನೂನುಗಳನ್ನು ಉಲ್ಲಂಘಿಸಿರುವ ಬಗ್ಗೆ ತನಿಖೆ ನಡೆಸುವಂತೆ ಹೊಸದಿಲ್ಲಿಯ ಪೊಲೀಸ್ ಸಹಾಯಕ ಆಯುಕ್ತರಿಗೆ ನೀಡಿದ ದೂರಿನಲ್ಲಿ ಆಯೋಗ ಮನವಿ ಮಾಡಿದೆ.

“ನಾನು ಇವಿಎಂ ವಿನ್ಯಾಸಗೊಳಿಸಿದ ತಂಡದಲ್ಲಿದ್ದೆ ಮತ್ತು ಭಾರತದಲ್ಲಿ ಚುನಾವಣೆಗಳಲ್ಲಿ ಉಪಯೋಗಿಸಲಾದ ಇವಿಎಂಗಳನ್ನು ನಾನು ತಿರುಚಬಲ್ಲೆ ಎಂದು ಸೈಯದ್ ಶುಜಾ ಎಂಬವರು ಜನವರಿ 21ರಂದು ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿಕೊಂಡಿರುವುದು ಆಯೋಗದ ಗಮನಕ್ಕೆ ಬಂದಿದೆ. ಶುಜಾ ಅವರ ಹೇಳಿಕೆ ಐಪಿಸಿ ಸೆಕ್ಷನ್ 505(1)(ಬಿ)ಯ ಉಲ್ಲಂಘನೆಯಾಗಿದೆ ಎಂದು ಆಯೋಗ ತಿಳಿಸಿದೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಇವಿಎಂಗಳನ್ನೇ ಉಪಯೋಗಿಸುತ್ತಾ ಬರಲಾಗುತ್ತಿದ್ದು ಇದರ ಬಳಕೆಯನ್ನು ಸರ್ವೋಚ್ಚ ನ್ಯಾಯಾಲಯ ಹಾಗೂ ಇತರ ಹಲವು ಉನ್ನತ ನ್ಯಾಯಾಲಯಗಳು ತಮ್ಮ ತೀರ್ಪಿನ ಮೂಲಕ ಸಮರ್ಥಿಸಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮತಯಂತ್ರಗಳನ್ನು ತಿರುಚಬಹುದು ಎಂದು ಸೋಮವಾರ ಸೈಯದ್ ಶುಜಾ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ, ತಾನು ಭಾರತದ ಇವಿಎಂಗಳು ಸುಭದ್ರವಾಗಿವೆ ಎಂಬ ಹಿಂದಿನ ಹೇಳಿಕೆಗೆ ಬದ್ಧವಾಗಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ನಾನು ಇವಿಎಂಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ಭಾರತೀಯ ಇಲೆಕ್ಟ್ರಾನಿಕ್ ನಿಗಮ ನಿಯಮಿತ (ಇಸಿಐಎಲ್)ನ ತಂಡದ ಸದಸ್ಯನಾಗಿದ್ದೆ ಎಂದು ಶುಜ ತಿಳಿಸಿದ್ದರು. ಭಾರತೀಯ ಪತ್ರಕರ್ತರ ಸಂಘ (ಯೂರೋಪ್) ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದ್ದರು. ಆದರೆ ಅವರ ಹೇಳಿಕೆಯನ್ನು ದೃಢಪಡಿಸಲಾಗಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News