‘ಉಡಾನ್’ನಿಂದ ಗರಿಗೆದರಿದ ಪ್ರವಾಸೋದ್ಯಮ: ಡಿಜಿಸಿಎ ವರದಿ

Update: 2019-01-22 16:11 GMT

ಹೊಸದಿಲ್ಲಿ, ಜ.22: ಕೇಂದ್ರ ಸರಕಾರದ ಪ್ರಮುಖ ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆ ‘ಉಡಾನ್’ಗೆ ಚಾಲನೆ ದೊರೆತ ಬಳಿಕ ಪ್ರವಾಸೀ ತಾಣಗಳಾದ ಕರ್ನಾಟಕದ ಹಂಪಿ, ಸಿಕ್ಕಿಂನ ಗ್ಯಾಂಗ್ಟಕ್, ಉತ್ತರಾಖಂಡದ ಪಿಥೋರಾಗಢ ಮತ್ತು ಹಿಮಾಚಲ ಪ್ರದೇಶದ ಶಿಮ್ಲ ಸೇರಿದಂತೆ 37 ಹೊಸ ನಗರಗಳನ್ನು ವಾಯುಸಂಪರ್ಕ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ನಾಗರಿಕ ವಾಯುಯಾನ ನಿರ್ದೇಶನಾಲಯ(ಡಿಜಿಸಿಎ)ದ ವರದಿಯಲ್ಲಿ ತಿಳಿಸಲಾಗಿದೆ.

2017ರ ಎಪ್ರಿಲ್‌ನಲ್ಲಿ ‘ಉಡಾನ್’ಗೆ ಚಾಲನೆ ದೊರೆತಿದ್ದು ಇದುವರೆಗೆ ಸುಮಾರು 11 ಲಕ್ಷ ಪ್ರಯಾಣಿಕರು ಹೊಸ ಅಥವಾ ಕಡಿಮೆ ಬಳಕೆಯಲ್ಲಿದ್ದ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಇದುವರೆಗೆ ಪ್ರವಾಸಿಗರು ತಲುಪಲು ಹರಸಾಹಸ ಪಡಬೇಕಿದ್ದ ಪ್ರೇಕ್ಷಣೀಯ ಸ್ಥಳಗಳನ್ನು ಸುಲಭವಾಗಿ ತಲುಪಲು ಅನುಕೂಲವಾಗಿದೆ. ವಿಶ್ವಪಾರಂಪರಿಕ ನಗರಗಳ ಪಟ್ಟಿಯಲ್ಲಿರುವ ಹಂಪಿಗೆ ಭೇಟಿ ನೀಡಬಯಸುವ ಪ್ರವಾಸಿಗರು ಇದುವರೆಗೆ ರೈಲು ಅಥವಾ ಬಸ್ಸು ಪ್ರಯಾಣವನ್ನು ನೆಚ್ಚಿಕೊಳ್ಳಬೇಕಿತ್ತು. ಆದರೆ ಈಗ ‘ಟ್ರೂಜೆಟ್’ ಸಂಸ್ಥೆ ಹೈದರಾಬಾದ್ ಮತ್ತು ಬೆಂಗಳೂರಿನಿಂದ ದಿನನಿತ್ಯ ಬಳ್ಳಾರಿಗೆ ನೇರ ವಿಮಾನಯಾನದ ಸೌಲಭ್ಯ ಕಲ್ಪಿಸಿದೆ. ಬಳ್ಳಾರಿಯಿಂದ ಹಂಪಿ ಕೇವಲ 40 ಕಿ.ಮೀ. ದೂರವಿದೆ. ಬಳ್ಳಾರಿಯ ವಿದ್ಯಾನಗರ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ಮೊದಲು ಬೆಳಗಾಂ (ಸುಮಾರು 270 ಕಿ.ಮೀ. ದೂರವಿದೆ) ಹಂಪಿಗೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿತ್ತು

ಈ ಕಾರಣದಿಂದಲೇ ‘ನ್ಯೂಯಾರ್ಕ್ ಟೈಮ್ಸ್’ ಸಿದ್ಧಪಡಿಸಿರುವ, 2019ರಲ್ಲಿ ಭೇಟಿ ನೀಡಲೇಬೇಕಾದ 52 ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ಹಂಪಿಗೆ ಎರಡನೇ ಸ್ಥಾನ ನೀಡಲಾಗಿದೆ. ಟ್ರೂಜೆಟ್ ಸಂಸ್ಥೆಯ ವಿಮಾನಯಾನ ಆರಂಭಕ್ಕೆ ಮೊದಲು ಬೆಂಗಳೂರು-ವಿದ್ಯಾನಗರ-ಬೆಂಗಳೂರು ಮಾರ್ಗದಲ್ಲಿ ಒಂದು ತಿಂಗಳಲ್ಲಿ 60 ಪ್ರಯಾಣಿಕರು ಪ್ರಯಾಣಿಸಿದ್ದರೆ, 2018ರ ಮಾರ್ಚ್ 1ರಂದು ಟ್ರೂಜೆಟ್ ವಿಮಾನ ಸಂಚಾರ ಆರಂಭಗೊಂಡ ಬಳಿಕ ಒಂದು ತಿಂಗಳಲ್ಲಿ 2,820 ಪ್ರಯಾಣಿಕರು ಪ್ರಯಾಣಿಸಿದ್ದಾರೆ.

 2018ರ ಮಾರ್ಚ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ 28,677 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ವರದಿಯಲ್ಲಿ ತಿಳಿಸಲಾಗಿದೆ. ಇವರಲ್ಲಿ ಎಲ್ಲರೂ ಹಂಪಿಗೆ ಭೇಟಿ ನೀಡಿದ್ದಾರೆ ಎನ್ನಲಾಗದು. ಆದರೆ ಈ ಮಾರ್ಗದಲ್ಲಿ ವಿಮಾನಯಾನಕ್ಕೆ ಇರುವ ಬೇಡಿಕೆ ಈ ಅಂಕಿಅಂಶದಿಂದ ತಿಳಿದು ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ರೀತಿ ಸಿಕ್ಕಿಂಗೆ ಭೇಟಿ ನೀಡಬೇಕಿದ್ದರೆ ಈ ಹಿಂದೆ ಪ್ರವಾಸಿಗರು ಬಾಗ್ದೋಗ್ರಾ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಆರು ಗಂಟೆ ರಸ್ತೆ ಪ್ರಯಾಣದ ಮೂಲಕ ಸಿಕ್ಕಿಂ ತಲುಪಬೇಕಿತ್ತು .ಆದರೆ 2018ರ ಅಕ್ಟೋಬರ್‌ನಲ್ಲಿ ಸ್ಪೈಸ್‌ಜೆಟ್ ಸಂಸ್ಥೆ ಸಿಕ್ಕಿಂನ ಪಕ್ಯೋಂಗ್ ವಿಮಾನ ನಿಲ್ದಾಣಕ್ಕೆ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಿದ ಬಳಿಕ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News