2ನೇ ಬ್ರೆಕ್ಸಿಟ್ ಜನಮತಗಣನೆ ನಡೆಸಿ: ಬ್ರಿಟನ್‌ಗೆ ಜರ್ಮನಿ ಸಲಹೆ

Update: 2019-01-22 17:24 GMT

ಬರ್ಲಿನ್, ಜ. 22: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ (ಬ್ರೆಕ್ಸಿಟ್) ಪ್ರಕ್ರಿಯೆಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸಲು ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ತೆಗೆದುಕೊಂಡಿರುವ ನಿರ್ಧಾರದಿಂದ ನನಗೆ ನಿರಾಶೆಯಾಗಿದೆ ಎಂದು ಜರ್ಮನಿ ಕಾನೂನು ಸಚಿವೆ ಕ್ಯಾಟರೀನಾ ಬಾರ್ಲಿ ಮಂಗಳವಾರ ಹೇಳಿದ್ದಾರೆ. ಅದಕ್ಕೆ ಬದಲಾಗಿ, ಎರಡನೇ ಜನಮತಗಣನೆ ನಡೆಸುವಂತೆ ಅವರು ಬ್ರಿಟನ್‌ಗೆ ಸಲಹೆ ನೀಡಿದ್ದಾರೆ.

‘‘ಹೌದು, ನನಗೆ ನಿರಾಶೆಯಾಗಿದೆ. ಅದು ಮುಂದುವರಿಯುವ ಸರಿಯಾದ ದಾರಿಯಲ್ಲ’’ ಎಂದು ಸ್ಥಳೀಯ ರೇಡಿಯೊಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಿಕೊಳ್ಳಲಾದ ಬ್ರೆಕ್ಸಿಟ್ ಒಪ್ಪಂದಕ್ಕೆ ಬೆಂಬಲ ಕ್ರೋಢೀಕರಿಸುವ ಅವಕಾಶವೊಂದನ್ನು ತೆರೇಸಾ ಮೇ ಕಳೆದುಕೊಂಡಿದ್ದಾರೆ ಎಂದು ಬಾರ್ಲಿ ಹೇಳಿದರು.

ಕರಡು ಒಪ್ಪಂದವನ್ನು ಬದಲಾಯಿಸಲಾಗುವುದಿಲ್ಲ ಎಂದು ಜರ್ಮನ್ ಮತ್ತು ಬ್ರಿಟಿಶ್- ಎರಡೂ ಪೌರತ್ವಗಳನ್ನು ಹೊಂದಿರುವ ಅವರು ನುಡಿದರು. ಆದರೆ, ಎರಡನೇ ಜನಮತಗಣನೆ ನಡೆದರೆ, ಸಮಯ ಮಿತಿಯಲ್ಲಿ ವಿನಾಯಿತಿ ನೀಡಬಹುದಾಗಿದೆ ಎಂದರು.

‘‘ಎರಡನೇ ಜನಮತಗಣನೆಯು ಪರಿಸ್ಥಿತಿಯನ್ನು ತಿಳಿಯಾಗಿಸಬಹುದು’’ ಎಂದು ಬಾರ್ಲಿ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News