×
Ad

ಬಜೆಟ್ ಅನುದಾನದಲ್ಲಿ ಶೇ.2.1ರಷ್ಟು ಕಡಿತ ಕಾರಣ: ಪೋಲಿಯೊ ಲಸಿಕೆ ದಿನ ಮುಂದೂಡಿಕೆ

Update: 2019-01-24 21:52 IST

ಹೊಸದಿಲ್ಲಿ, ಜ.24: ಪೋಲಿಯೊ ಲಸಿಕೆಯ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿರುವುದರಿಂದ ಫೆ.3ರಂದು ಆಯೋಜಿಸಲು ನಿರ್ಧರಿಸಿದ್ದ ರಾಷ್ಟ್ರೀಯ ಪೋಲಿಯೊ ಪ್ರತಿರಕ್ಷಣೆ (ಲಸಿಕೆ) ದಿನವನ್ನು ಮುಂದೂಡಲಾಗಿದೆ.

ಈ ಕುರಿತು ಜನವರಿ 18ರಂದು ರೋಗನಿರೋಧಕ ವಿಭಾಗದ ಡಾ ಪ್ರದೀಪ್ ಹಾಲ್ದರ್ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ (ಸಾಕಷ್ಟು ಪ್ರಮಾಣದ ದಾಸ್ತಾನು ಹೊಂದಿರುವ ಬಿಹಾರ, ಮಧ್ಯಪ್ರದೇಶ ಮತ್ತು ಕೇರಳವನ್ನು ಹೊರತುಪಡಿಸಿ)ಪತ್ರ ಬರೆದಿದ್ದು ಮುಂದಿನ ದಿನಾಂಕದ ಬಗ್ಗೆ ಶೀಘ್ರ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ಪೋಲಿಯೊ ಲಸಿಕೆ ಉತ್ಪಾದಿಸುವ ಮತ್ತು ಭಾರತಕ್ಕೆ ಏಕೈಕ ಐಪಿವಿ ಲಸಿಕೆ ಪೂರೈಕೆದಾರ ಸಂಸ್ಥೆ ‘ಸನೋಫಿ’ 2019ರಲ್ಲಿ ಒಂದು ಡೋಸ್ ಲಸಿಕೆಯ ಬೆಲೆಯನ್ನು 61 ರೂ.ಯಿಂದ 147 ರೂ.ಗೆ ಹೆಚ್ಚಿಸಿದೆ. ಅಲ್ಲದೆ 2020ರಿಂದ 2022ರವರೆಗಿನ ಅವಧಿಯಲ್ಲಿ ದರ 177 ರೂ.ಗೆ ಹೆಚ್ಚಲಿದೆ ಎಂದು ಯುನಿಸೆಫ್ ವರದಿ ತಿಳಿಸಿದೆ. ಐಪಿವಿ ಲಸಿಕೆಯನ್ನು ಆರೋಗ್ಯ ಇಲಾಖೆ ದೇಶಕ್ಕೆ ಪರಿಚಯಿಸಿದ್ದು , ಇದಕ್ಕೆ ಜಿಎವಿಐ 2015 ಮತ್ತು 2016ರಲ್ಲಿ 118.8 ಕೋಟಿ ರೂ. ನೀಡಿದೆ. ಭಾರತವು ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ವಿನಿಯೋಗಿಸಿಲ್ಲ ಎಂಬುದಕ್ಕೆ ಈ ಅಂಕಿಅಂಶ ಸಾಕ್ಷಿಯಾಗಿದೆ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಬಜೆಟ್ ಅನುದಾನದಲ್ಲಿ ಶೇ.2.1ರಷ್ಟು ಕಡಿತವಾಗಿರುವುದನ್ನು ಉದಾಹರಣೆಯಾಗಿ ನೀಡುತ್ತಾರೆ.

   ಕೆಲವು ಬ್ಯಾಚ್‌ನ ಪೋಲಿಯೊ ಲಸಿಕೆಗಳಲ್ಲಿ ಕಲುಷಿತ(ಮಲಿನಕಾರಕ) ವೈರಸ್‌ನ ಲಕ್ಷಣ ಕಂಡುಬಂದಿರುವುದು ದೇಶೀಯವಾಗಿ ಉತ್ಪಾದನೆಗೊಳ್ಳುವ ಲಸಿಕೆಯ ಪೂರೈಕೆ ಹಾಗೂ ದಾಸ್ತಾನಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜೊತೆಗೆ, ಸರಕಾರ ಇದೀಗ ಬಡದೇಶಗಳಲ್ಲಿ ನಡೆಯುತ್ತಿರುವ ಪೋಲಿಯೊ ಲಸಿಕೆ ಕಾರ್ಯಕ್ರಮಗಳಿಗೆ ನೆರವಾಗುವ ‘ಜಿಎವಿಐ’ ಎಂಬ ಅಂತರಾಷ್ಟ್ರೀಯ ಸಂಘಟನೆಯ ಸಹಾಯ ಬಯಸಿದೆ. ನಿಷ್ಕ್ರಿಯಗೊಳಿಸಿದ ಪೋಲಿಯೊ ವೈರಸ್ ಲಸಿಕೆ(ಐಪಿವಿ)ಯ ಪೂರೈಕೆಯನ್ನು ಅಗತ್ಯವಿರುವ ಮಟ್ಟದಲ್ಲಿ ವ್ಯವಸ್ಥೆಗೊಳಿಸುವಂತೆ ಮನವಿ ಮಾಡಿಕೊಂಡಿದೆ.

ದೇಶದಲ್ಲಿ ಐಪಿವಿ ಲಸಿಕೆಯ ಅಗತ್ಯವಿರುವ ಪ್ರದೇಶಗಳ ಮಕ್ಕಳಿಗೆ ಇವನ್ನು ಶೀಘ್ರ ಒದಗಿಸುವ ಮೂಲಕ ವರ್ಗ-2 ಸಹಿತ ಎಲ್ಲಾ ಮೂರು ವಿಧದ ಪೋಲಿಯೊ ವೈರಸ್‌ಗಳ ವಿರುದ್ಧ ರಕ್ಷಣೆ ಒದಗಿಸಬೇಕಿದೆ ಎಂದು ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

 ಅಲ್ಲದೆ ಉತ್ತರಪ್ರದೇಶದಲ್ಲಿ ಪೋಲಿಯೊ ಲಸಿಕೆಯ ಕೆಲವು ಬ್ಯಾಚ್‌ನಲ್ಲಿ ಮಲಿನಗೊಂಡ ಲಸಿಕೆ ಪತ್ತೆಯಾಗಿರುವುದು ಸಮಸ್ಯೆಯನ್ನು ಬಿಗಡಾಯಿಸಿದೆ. ಆ ಬಳಿಕ ಭದ್ರತಾ ನಿಯಮಾವಳಿಗಳನ್ನು ಪರಿಷ್ಕರಿಸಬೇಕಾಯಿತು. ಇದರಿಂದ ಪೋಲಿಯೊ ಲಸಿಕೆಯ ದಾಸ್ತಾನಿನ ಮೇಲೆ ಪರಿಣಾಮ ಬೀರಿದೆ. ದಾಸ್ತಾನು ಮತ್ತು ಪೂರೈಕೆ ಕೊರತೆಗೂ ರಾಜ್ಯಗಳ ಗಾತ್ರಕ್ಕೂ ಸಂಬಂಧವಿದೆ. ದೊಡ್ಡ ರಾಜ್ಯಗಳಿಗೆ ಹೆಚ್ಚಿನ ಲಸಿಕೆಯ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಸರಕಾರದ ಬಳಿ ಪೋಲಿಯೊ ಲಸಿಕೆಯ ಕೊರತೆಯಿಲ್ಲ ಅಥವಾ ವಿದೇಶಗಳಿಂದ ಖರೀದಿಸಲು ಹಣದ ಕೊರತೆಯೂ ಇಲ್ಲ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News