ಬ್ಲಾಕ್, ಡ್ರೀಂ, ರೋಲ್‌ಬ್ಯಾಕ್: ಬಜೆಟ್‌ಗಳಿಗೆ ಈ ಹೆಸರುಗಳು ಬಂದಿದ್ದು ಹೇಗೆ ಗೊತ್ತೇ?

Update: 2019-01-25 12:32 GMT

ಕೇಂದ್ರ ಸರಕಾರದ ಮುಂಗಡ ಪತ್ರ ಸಿದ್ಧಗೊಳ್ಳುತ್ತಿದ್ದು,ಫೆ.1ರಂದು ಸಂಸತ್ತಿನಲ್ಲಿ ಮಂಡನೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಅಂದ ಹಾಗೆ ಪ್ರತಿಯೊಂದೂ ಬಜೆಟ್‌ಗೆ ತನ್ನದೇ ಆದ ವ್ಯಕ್ತಿತ್ವವಿದೆ. ಅದು ಎಲ್ಲರನ್ನು ಸಂತೋಷಗೊಳಿಸಲು,ನಿರ್ದಿಷ್ಟ ವರ್ಗವನ್ನು ದಂಡಿಸಲು ಬಯಸಬಹುದು,ಭವಿಷ್ಯದ ಮುನ್ನೋಟವನ್ನು ಮಂಡಿಸಬಹುದು ಅಥವಾ ಎಲ್ಲರನ್ನೂ ನಿರಾಶೆಗೊಳಿಸಬಹುದು. ತಮ್ಮ ವಿಶಿಷ್ಟ ಅಂಶಗಳಿಂದಾಗಿ ಪ್ರತ್ಯೇಕತೆಯನ್ನು ಪ್ರದರ್ಶಿಸುವ ಬಜೆಟ್‌ಗಳು ಅವುಗಳನ್ನು ಸಂಕ್ಷಿಪ್ತವಾಗಿ ಬಣ್ಣಿಸುವ ವಿಶೇಷಣಗಳಿಗೂ ಪಾತ್ರವಾಗುತ್ತವೆ. ಬ್ಲಾಕ್ ಬಜೆಟ್,ಡ್ರೀಂ ಬಜೆಟ್ ಮತ್ತು ರೋಲ್‌ಬ್ಯಾಕ್ ಬಜೆಟ್ ಇವು ತಮ್ಮ ವಿಶಿಷ್ಟತೆಯಿಂದಾಗಿ ಜನರ ನೆನಪಿನಲ್ಲಿರುವ ಕೆಲವು ಬಜೆಟ್‌ಗಳಾಗಿವೆ.

► ಬ್ಲಾಕ್ ಬಜೆಟ್

ಹೌದು,ಈ ಬಜೆಟ್ ಈ ವಿಶೇಷಣಕ್ಕೆ ಅರ್ಹವಾಗಿಯೇ ಇತ್ತು. ಇಂದಿರಾ ಗಾಂಧಿ ಸರಕಾರದಲ್ಲಿ ವಿತ್ತಸಚಿವರಾಗಿದ್ದ ಯಶವಂತರಾವ್ ಬಿ.ಚವಾಣ್ ಅವರು 1973ರಲ್ಲಿ ಈ ಬಜೆಟ್ ಮಂಡನೆ ಮಾಡಿದ್ದರು. 550 ಕೋ.ರೂ.ಗಳ ವಿತ್ತೀಯ ಕೊರತೆ ಈ ಬಜೆಟ್‌ನ ಅತ್ಯಂತ ಕರಾಳ ಛಾಯೆಯ ಭಾಗವಾಗಿತ್ತು. ಈ ಬಜೆಟ್ ಕಲ್ಲಿದ್ದಲು ಗಣಿಗಳ ರಾಷ್ಟ್ರೀಕರಣವನ್ನು ಪ್ರಸ್ತಾಪಿಸಿದ್ದೂ ಬ್ಲಾಕ್ ಅಥವಾ ಕಪ್ಪು ಬಜೆಟ್ ಎಂಬ ಹೆಸರು ಪಡೆಯಲು ಕಾರಣವಾಗಿದ್ದಿರಬಹುದು. ವಿದ್ಯುತ್,ಸಿಮೆಂಟ್ ಮತ್ತು ಉಕ್ಕುಗಳಂತಹ ಕೈಗಾರಿಕೆಗಳಲ್ಲಿ ಕಲ್ಲಿದ್ದಲಿಗೆ ಹೆಚ್ಚುತ್ತಿದ್ದ ಬೇಡಿಕೆಗನುಗುಣವಾಗಿ ತಡೆರಹಿತ ಕಲ್ಲಿದ್ದಲು ಪೂರೈಕೆಗೆ ಅವಕಾಶ ಕಲ್ಪಿಸುವುದು ಈ ಪ್ರಸ್ತಾವದ ಉದ್ದೇಶವಾಗಿತ್ತು. ಆದರೆ ಈ ಬಜೆಟ್ ದೀರ್ಘಾವಧಿಯಲ್ಲಿ ಕಲ್ಲಿದ್ದಲಿನ ಉತ್ಪಾದನೆ ಕುಂಠಿತಗೊಳ್ಳುವಂತೆ ಮಾಡಿತ್ತು ಮತ್ತು ಭಾರತವು ಅಗತ್ಯ ಕಲ್ಲಿದ್ದಲು ಪೂರೈಕೆಗಾಗಿ ಆಮದನ್ನು ಅವಲಂಬಿಸುವಂತಾಗಿತ್ತು.

► ಡ್ರೀಂ ಬಜೆಟ್

1997ರಲ್ಲಿ ಆಗಿನ ತಮಿಳು ಮಾನಿಲ ಕಾಂಗ್ರೆಸ್ ನಾಯಕ ಹಾಗೂ ಎಚ್.ಡಿ.ದೇವೇಗೌಡ ಅವರ ಸಂಯುಕ್ತರಂಗ ಸರಕಾರದಲ್ಲಿ ವಿತ್ತಸಚಿವರಾಗಿದ್ದ ಪಿ.ಚಿದಂಬರಂ ಅವರು ಡ್ರೀಂ ಅಥವಾ ಕನಸಿನ ಬಜೆಟ್ ಎಂದೇ ಪ್ರಸಿದ್ಧವಾದ ಬಜೆಟ್‌ನ್ನು ಮಂಡಿಸಿದ್ದರು. ತೆರಿಗೆ ಪಾವತಿ ವಿಧೇಯತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದ ಚಿದಂಬರಂ ಆದಾಯ ಮತ್ತು ಕಾರ್ಪೊರೇಟ್ ತೆರಿಗೆಗಳಲ್ಲಿ ಭಾರೀ ಕಡಿತಗಳನ್ನು ಮಾಡಿದ್ದರು. ಲಾಫರ್ ಕರ್ವ್‌ನ ಆರ್ಥಿಕ ಸಿದ್ಧಾಂತವು ತೆರಿಗೆ ದರಗಳು ಮತ್ತು ಸರಕಾರದ ಆದಾಯದ ನಡುವೆ ಸಂಬಂಧವನ್ನು ಕಲ್ಪಿಸಿದೆ. ಈ ಸಿದ್ಧಾಂತವನ್ನು ತೆರಿಗೆಗಳನ್ನು ಏರಿಕೆ ಮಾಡುವುದರಿಂದ ಸರಕಾರದ ಆದಾಯ ಹೆಚ್ಚುವುದಿಲ್ಲ ಎಂದು ಸರಳವಾಗಿ ವ್ಯಾಖ್ಯಾನಿಸಬಹುದು. ಅತಿಯಾದ ಕಾರ್ಪೊರೇಟ್ ತೆರಿಗೆಗಳು ತೆರಿಗೆ ವಂಚನೆಗೆ ಕಾರಣ ಎನ್ನುವುದು ಅದಾಗಲೇ ಸಿದ್ಧಗೊಂಡಿದ್ದರಿಂದ ತೆರಿಗೆ ವಿಧೇಯತೆಯನ್ನು ಹೆಚ್ಚಿಸುವ ಆಶಯದಿಂದ ಚಿದಂಬರಂ ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿತಗೊಳಿಸಿದ್ದರು. ಕಾರ್ಪೊರೇಟ್ ತೆರಿಗೆಯ ಮೇಲಿನ ಸರ್‌ಚಾರ್ಜ್‌ನ್ನು ರದ್ದುಗೊಳಿಸಿದ್ದ ಅವರು ತೆರಿಗೆ ದರವನ್ನು ಶೇ.35ಕ್ಕೆ ಇಳಿಕೆ ಮಾಡಿದ್ದರು. ಕಸ್ಟಮ್ಸ್ ಶುಲ್ಕದ ಗರಿಷ್ಠ ದರವನ್ನೂ ಶೇ.50ರಿಂದ ಶೇ.40ಕ್ಕೆ ತಗ್ಗಿಸಿದ್ದರು.

ಬಜೆಟ್ ಮಂಡನೆಯಾದ ತಿಂಗಳ ಬಳಿಕ ದೇವೇಗೌಡ ಸರಕಾರವು ಪತನಗೊಂಡಿತ್ತು. ಆ ವೇಳೆಗಾಗಲೇ ಏಷ್ಯನ್ ಬಿಕ್ಕಟ್ಟು ಪ್ರದೇಶದ ಆರ್ಥಿಕತೆಗಳನ್ನೂ ಕಾಡಿದ್ದರಿಂದ ಚಿದಂಬರಂ ಅವರ ಕ್ರಾಂತಿಕಾರಿ ಹೆಜ್ಜೆಯ ತಕ್ಷಣದ ಪರಿಣಾಮವನ್ನು ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಅವರ ತೆರಿಗೆ ಕಡಿತಗಳು ದೀರ್ಘಾವಧಿಯಲ್ಲಿ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮಗಳನ್ನುಂಟು ಮಾಡಿದ್ದವು. ವಾಸ್ತವದಲ್ಲಿ ಅವರ 1997ರ ಬಜೆಟ್‌ನ್ನು 1991ರಲ್ಲಿ ಪಿ.ವಿ.ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ವಿತ್ತಸಚಿವ ಮನಮೋಹನ ಸಿಂಗ್ ಅವರು ತಂದಿದ್ದ ಆರ್ಥಿಕ ಸುಧಾರಣೆಗಳು ಮತ್ತು ಉದಾರೀಕರಣದ ಮುಂದುವರಿದ ಭಾಗವೆಂದೇ ಪರಿಗಣಿಸಲಾಗಿತ್ತು.

► ರೋಲ್‌ಬ್ಯಾಕ್ ಬಜೆಟ್

ಆಗಿನ ಎನ್‌ಡಿಎ ಸರಕಾರದಲ್ಲಿ ವಿತ್ತಸಚಿವರಾಗಿದ್ದ ಯಶವಂತ ಸಿನ್ಹಾ ಅವರು ಮಂಡಿಸಿದ್ದ 2002-03ನೇ ಸಾಲಿನ ಮುಂಗಡಪತ್ರವು ರೋಲ್‌ಬ್ಯಾಕ್ ಬಜೆಟ್ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಸಿನ್ಹಾ ಅವರು ಪ್ರತಿಪಕ್ಷಗಳ ಮತ್ತು ತನ್ನೊಳಗಿನ ಒತ್ತಡಗಳಿಗೆ ಮಣಿದು ಬಜೆಟ್‌ನಲ್ಲಿಯ ಹಲವಾರು ಪ್ರಸ್ತಾವಗಳನ್ನು ಹಿಂದೆಗೆದುಕೊಳ್ಳುವ ಮೂಲಕ ಅದನ್ನು ರೋಲ್‌ಬ್ಯಾಕ್ ಬಜೆಟ್‌ನ್ನಾಗಿಸಿದ್ದರು. ಅವರು ತನ್ನ ಬಜೆಟ್‌ನಲ್ಲಿ ಎಲ್‌ಪಿಜಿ,ಸೀಮೆಎಣ್ಣೆ ಮತ್ತು ಸಕ್ಕರೆಯ ಪಿಡಿಎಸ್(ಸಾರ್ವಜನಿಕ ವಿತರಣೆ ವ್ಯವಸ್ಥೆ) ದರಗಳನ್ನು ಹೆಚ್ಚಿಸಿದ್ದರು,ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದ್ದರು. ರಸಗೊಬ್ಬರಗಳ ಮೇಲಿನ ಸಬ್ಸಿಡಿ ಮತ್ತು ಆದಾಯ ತೆರಿಗೆ ಕಲಂ 88ರಡಿ ಆದಾಯ ತೆರಿಗೆ ವಿನಾಯಿತಿಗೂ ಅವರು ಕತ್ತರಿ ಹಾಕಿದ್ದರು. ಜನಮರುಳು ಕ್ರಮಗಳಿಂದಾಗಿ ಸಿನ್ಹಾ ಅವರು ಬಜೆಟ್‌ನಲ್ಲಿಯ ತನ್ನ ಹಲವಾರು ಪ್ರಸ್ತಾವಗಳನ್ನು ಹಿಂದೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಹೂಡಿಕೆದಾರರ ಕೈಗಳಲ್ಲಿಯ ಡಿವಿಡೆಂಡ್ ಆದಾಯಗಳ ಮೇಲೆ ತೆರಿಗೆ ಹೇರಿಕೆ ಮತ್ತು ಸಣ್ಣ ಉಳಿತಾಯ ಬಡ್ಡಿದರಗಳನ್ನು ಮಾರುಕಟ್ಟೆ ನಿರ್ಧರಿತ ಬಡ್ಡಿದರಗಳೊಂದಿಗೆ ತಳುಕು ಹಾಕುವಂತಹ ಕೆಲವು ಪ್ರಮುಖ ರಚನಾತ್ಮಕ ಬದಲಾವಣೆಗಳನ್ನು ಉಳಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News