ಭಾರತವನ್ನು ಜೀವಂತಿಕೆಯಿಂದಿರಿಸಿರುವ ಸಂವಿಧಾನ

Update: 2019-01-25 18:33 GMT

ನಮ್ಮ ಭಾರತ ಒಂದು ಸುಂದರವಾದ ದೇಶ, ನಮ್ಮ ದೇಶ ಶತಮಾನಗಳ ಕಾಲ ಪರಕೀಯರ ಆಳ್ವಿಕೆಗೆ ಒಳಪಟ್ಟಿತ್ತು. ಪರಕೀಯರಿಂದ ಸ್ವ್ವಾತಂತ್ರ್ಯಕ್ಕಾಗಿ ಎಲ್ಲಾ ಧರ್ಮ, ಭಾಷೆ, ಜಾತಿ, ವರ್ಗ, ಅಲ್ಪಸಂಖ್ಯಾತರು, ಗಿರಿಜನರು, ದಲಿತರನ್ನೊಳಗೊಂಡ ದೀರ್ಘಕಾಲದ ಹೋರಾಟವು ನಮ್ಮ ಇತಿಹಾಸದಲ್ಲಿ ದಾಖಲಾಗಿದೆ. ಕೊನೆಗೆ ದೊರೆತ ಸ್ವಾತಂತ್ರ್ಯಕ್ಕೆ ಸಂವಿಧಾನದ ಅಡಿಪಾಯವನ್ನು ನಿರ್ಮಿಸಿದವರು ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರು. 

ಪ್ರತಿಯೊಂದು ದೇಶವು ಒಂದು ರೂಪುಗೊಳ್ಳಬೇಕಾದರೆ ಸಂವಿಧಾನ ಅತ್ಯಂತ ಅವಶ್ಯ. ಇದರನ್ವಯ 195 ಸ್ವತಂತ್ರ ದೇಶಗಳ ಪೈಕಿ 176 ದೇಶಗಳು ಪ್ರತ್ಯೇಕವಾದ ಸಂವಿಧಾನವನ್ನು ರಚಿಸಿಕೊಂಡಿವೆ. ಅದರಲ್ಲೂ ಕೆಲ ದೇಶದ ಸಂವಿಧಾನಗಳು ಪುನರ್‌ನಿರ್ಮಾಣ ಮತ್ತು ಬದಲಾವಣೆಯಂತಹ ಸನ್ನಿವೇಶಕ್ಕೆ ಒಳಗಾಗಿವೆ ಉದಾ: ನೇಪಾಲದಲ್ಲಿ 1948, 1951, 1959, 1962 ಮತ್ತು 1990ರಂತೆ ಐದು ಸಂವಿಧಾನ ಗಳಿವೆ. ಆದರೆ, ನಮ್ಮ ಸಂವಿಧಾನವು ದೇಶದ ಜನರ ಬಾಹ್ಯ ಹಾಗೂ ಆಂತರಿಕ ಅಭಿವೃದ್ಧಿಯನ್ನೊಳಗೊಂಡು ಒಂದು ನಿರ್ದಿಷ್ಟ ಪಥದಲ್ಲಿ ದೇಶವನ್ನು ಮುನ್ನಡೆಸುತ್ತಾ ನಮ್ನ ದೇಶವನ್ನು ಜೀವಂತಿಕೆಯಿಂದಿರಿಸಿದೆ. 26 ನವೆಂಬರ್ 1949ರಂದು ಸಂವಿಧಾನವನ್ನು ನಮ್ಮ ದೇಶದ ಜನರಿಗೆ ಅರ್ಪಿಸುತ್ತಾ ಸಭೆಯಲ್ಲಿ ಒಂದು ಎಚ್ಚರದ ನುಡಿಯನ್ನು ಹೇಳಿದ್ದಾರೆ.

ಅದು ‘‘1950ರ ಜನವರಿ 26ರಂದು ನಾವು ವೈರುಧ್ಯಗಳಿಂದ ಕೂಡಿದ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆದಿರುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರಿದಿರುತ್ತದೆ. ರಾಜಕೀಯದಲ್ಲಿ ಒಬ್ಬರಿಗೆ ಒಂದು ಓಟು ಮತ್ತು ಒಂದು ಓಟಿಗೆ ಒಂದು ಮೌಲ್ಯವನ್ನು ಪರಿಗಣಿಸಿರುತ್ತೇವೆ. ಆದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಒಬ್ಬ ಮನುಷ್ಯನಿಗೆ ಒಂದು ಮೌಲ್ಯವೆಂಬ ತತ್ವವನ್ನು ನಿರಾಕರಿಸುತ್ತಿರುತ್ತೇವೆ. ಈ ವೈರುಧ್ಯಗಳಿಂದ ಕೂಡಿದ ಸಾಮಾಜಿಕ ಬದುಕನ್ನು ಎಷ್ಟು ಕಾಲ ಮುಂದುವರಿಸಲು ಸಾಧ್ಯ? ಎಷ್ಟು ಕಾಲ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮನತೆಯನ್ನು ನಿರಾಕರಿಸಲು ಸಾಧ್ಯ? ಇನ್ನೂ ಇದೇ ಬಗೆಯ ನಿರಾಕರಣೆಯನ್ನು ಮುಂದುವರಿಸುತ್ತಾ ಹೋದರೆ ನಮ್ಮ ರಾಜಕೀಯ ಪ್ರಜಾಸತ್ತೆಗೆ ಆಪತ್ತು ಬರುತ್ತದೆ. ನಾವು ಆದಷ್ಟು ಬೇಗ ಈ ವೈರುಧ್ಯಗಳನ್ನು ನಿರ್ಮೂಲನೆ ಮಾಡದಿದ್ದರೆ ಅಸಮಾನತೆಯಿಂದ ನೊಂದ ಜನ ತಾವು ಕಷ್ಟಪಟ್ಟು ಕಟ್ಟಿರುವ ರಾಜಕೀಯ ಪ್ರಜಾಸತ್ತೆಯ ರಚನೆಯನ್ನೇ ಸ್ಫೋಟ ಮಾಡುತ್ತಾರೆ.’’
  
ಅಂಬೇಡ್ಕರ್‌ರವರು ನೀಡಿದ ಸಂವಿಧಾನ ಇಂದು ಹೇಗೆ ಜೀವಂತವಾಗಿದೆಯೋ ಅವರು ನೀಡಿದ ಎಚ್ಚರಿಕೆಯೂ ಸಹ ಇಂದು ಜೀವಂತವಾಗಿದೆ. ಏಕೆಂದರೆ, 69 ವರ್ಷ ಕಳೆದರೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯೂ ಗಗನಕುಸುಮವಾಗಿದೆ, ಸಮಾನತೆಯ ಆಶಯವನ್ನು ಬಲಿತೆಗೆದುಕೊಳ್ಳುವ ಜಾತಿ ಅಪಮಾನ, ಅಸ್ಪಶ್ಯತೆ ಮತ್ತು ತಾರತಮ್ಯವು ಇನ್ನಷ್ಟು ನವರೂಪದಲ್ಲಿ ಮುನ್ನೆಲೆಗೆ ಬರುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಕಲ್ಪಿಸಬೇಕಾದ ಆಳುವ ಸರಕಾರ ಇಂದು ತಮ್ಮ ಅಧಿಕಾರದ ಭದ್ರಬುನಾದಿಯಲ್ಲಿ ಅಸಮಾನತೆಯ ತೇರನ್ನು ಮತ್ತಷ್ಟು ಭದ್ರಗೊಳಿಸುತ್ತಾ ಎಳೆಯುತ್ತಿದೆೆ. ಧಾರ್ಮಿಕ ಸ್ವಾತಂತ್ರ್ಯವು ಮನುಷ್ಯನ ಭಕ್ತಿಯ ಅಧ್ಯಾತ್ಮ ಸಾಧನೆಯಾಗಿರಬೇಕಾದ್ದನ್ನು ಬಿಟ್ಟು ಇಂದು ರಾಜಕೀಯವಾಗಿ ಧರ್ಮ ದ್ವೇಷ ಸಾಧಿಸುವ ಕೋಮುವಾದದಲ್ಲಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿದೆ.

ನಮ್ಮ ಸಂವಿಧಾನದ ಪ್ರಥಮ ವಾಕ್ಯ ‘‘ಭಾರತದ ಜನತೆಯಾದ ನಾವು’’ ಎಂದು ಆರಂಭವಾಗುತ್ತದೆ, ಇಲ್ಲಿ ಅಭಿವ್ಯಕ್ತಿಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ ಈ ಅಭಿವ್ಯಕ್ತಿಯನ್ನು ಕುರಿತು ಫ್ರಾನ್ಸ್‌ನ ಚಿಂತಕ ವಾಲ್ಟೇರ್, ‘‘ನಿನ್ನ ಯಾವ ಮಾತನ್ನು ನಾನು ಒಪ್ಪುವುದಿಲ್ಲ. ಆದರೆ ನಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನನ್ನ ಉಸಿರಿರುವವರೆಗೂ ಸಮರ್ಥಿಸುತ್ತೇನೆ’’ ಎನ್ನುತ್ತಾರೆ. ಆದರೆ, ಇಲ್ಲಿ ಅಭಿವ್ಯಕ್ತಿ ಚಲಾಯಿಸುವ ನಮ್ಮದೇ ದೇಶದ ಜನತೆಯನ್ನು ಪರಕೀಯರನ್ನಾಗಿಸಿ ಅಪರಾಧಿಗಳನ್ನಾಗಿಸಲಾಗುತ್ತಿದೆ, ಸತ್ಯ ಹೇಳುವವರ ಹಣೆಗೆ ಗುಂಡು, ಪ್ರಶ್ನಿಸುವವರಿಗೆ ದೇಶದ್ರೋಹಿಯ ಪಟ್ಟ ಹಾಗೂ ವಿಮರ್ಶಿಸುವವರನ್ನು ‘ನಗರ ನಕ್ಸಲ್’ ಎಂಬ ಬಿರುದುಗಳಿಂದ ಅಲಂಕರಿಸುವ ಮೂಲಕ ಕೋಮುವಾದವು ಹುಸಿ ದೇಶಪ್ರೇಮದ ರೌದ್ರನರ್ತನವಾಡುತ್ತಿದೆ. ಎಷ್ಟೆಂದರೆ ಸಂವಿಧಾನದ ಅಡಿ ರಾಜಕೀಯದಲ್ಲಿ ಸಮಾನತೆ ಪಡೆದ ನಮ್ಮನ್ನಾಳುವ ಸರಕಾರದ ಕೇಂದ್ರ ಮಂತ್ರಿಗಳೇ ‘‘ಸಂವಿಧಾನವನ್ನು ಬದಲಾಯಿಸಬೇಕು ಅದಕ್ಕಾಗಿ ನಾವು ಅಧಿಕಾರಕ್ಕೆ ಬಂದಿದ್ದೇವೆ’’ ಎಂದು ಹೇಳುತ್ತಾರೆ. ಇವರ ಮಾತಿಗೆ ಪುಷ್ಟಿ ನೀಡುವಂತೆ ದಿಲ್ಲಿಯ ಜಂತರ್ ಮಂತರ್‌ನಲ್ಲೇ ಸಂವಿಧಾನ ಪ್ರತಿಯನ್ನು ಸುಟ್ಟ ಘಟನೆ ಇಡೀ ದೇಶಕ್ಕೆ ಮಾಡಿದ ಅಪಚಾರ ಮತ್ತು ದೇಶದ್ರೋಹದ ಕೃತ್ಯವಾಗಿದೆ.
   
ನಮ್ಮ ಸಂವಿಧಾನ ಸಾಮಾಜಿಕ ನ್ಯಾಯದ ಬಗ್ಗೆ ಒತ್ತಿ ಹೇಳುತ್ತದೆ. ಈ ಸಾಮಾಜಿಕ ನ್ಯಾಯವು ಸಾಮಾಜದ ಕಟ್ಟ ಕಡೆಯ ಹಿಂದುಳಿದ, ಬಡವ, ತುಳಿತಕ್ಕೆ ಮತ್ತು ಶೋಷಣೆಗೆ ಒಳಗಾದ ಅಸಹಾಯಕರನ್ನು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಮಾನತೆಯಿಂದ ಕೂಡಿರುವ ಒಂದು ಚೌಕಟ್ಟಿನಲ್ಲಿ ಸೇರಿಸಲು ಇರುವ ಅಂಗ. ಆದರೆ ಇಂದು ಸಾಮಾಜಿಕ ನ್ಯಾಯದ ಕಲ್ಪನೆಯೂ ಕಾಣದಂತಾಗಿ ಬಕಾಸುರ ಬಂಡವಾಳಿಶಾಹಿಗಳ ಕಪಿಮುಷ್ಟಿಯಲ್ಲಿರುವ ಸರಕಾರದಿಂದಾಗಿ ದೇಶದ ಜನರು ಸಿಲುಕಿ ಒದ್ದಾಡುವಂತಾಗಿದೆ. ಇದರಿಂದಾಗಿಯೇ ಶೇ. 79ರಷ್ಟು ಜನರ ಆದಾಯ ಕೇವಲ ಶೇ. 3 ಜನರ ಬಳಿ ಬಂದಿಯಾಗಿವೆ. ನಮ್ಮ ದೇಶ ಭವ್ಯ ಭಾರತ, ನಮ್ಮ ಸಂವಿಧಾನದಲ್ಲಿ ಸಾರಿರುವ ಸ್ವಾತಂತ್ರ್ಯ-ಸಮಾನತೆ ಮತ್ತು ಭ್ರಾತೃತ್ವಗಳನ್ನು ಅಳವಡಿಸಿಕೊಂಡು ಭಾರತವನ್ನು ಒಂದು ನಿಜವಾದ ಗಣರಾಜ್ಯವನ್ನಾಗಿಸಬೇಕಾಗಿದೆ. ಇಲ್ಲಿ ಸಮಾನತೆಯ ಹಕ್ಕು ಪ್ರತಿಯೊಬ್ಬರಿಗೆ ದೊರಕುವಂತಾಗಬೇಕು, ನಾವೆಲ್ಲರೂ ಸರಿಯಾದ ದಿಕ್ಕಿನಲ್ಲಿ ಸಾಗುವಂತಾಗಬೇಕು, ಈ ದಿಕ್ಕಿಗೆ ಬೆಳಕು ತೋರಬೇಕಾದದ್ದು ನಮ್ಮ ಸರಕಾರಗಳ ಜವಾಬ್ದಾರಿ. ಸಂವಿಧಾನ ಜಾರಿಯಾದ ದಿನ ನೀಡಿದ ಅಂಬೇಡ್ಕರ್‌ರವರ ಎಚ್ಚರಿಕೆ ಯನ್ನು ನಾವು ಸದಾಕಾಲ ಅಳವಡಿಸಿಕೊಂಡು ನಡೆಯುವಂತಾಗಬೇಕು.

Writer - ಪುನೀತ್. ಎನ್., ಮೈಸೂರು

contributor

Editor - ಪುನೀತ್. ಎನ್., ಮೈಸೂರು

contributor

Similar News