ಸೀತಾರಾಮ ಕಲ್ಯಾಣ: ಕಲ್ಯಾಣದಲ್ಲಿ ದೊರಕಿದ್ದು ರಸ ರಹಿತ ಭೋಜನ

Update: 2019-01-26 18:31 GMT

ಟೀಸರ್ ಬಿಡುಗಡೆಯ ದಿನಗಳಿಂದಲೇ ಯಾವುದೋ ತೆಲುಗು ಚಿತ್ರದ ಹೋಲಿಕೆ ಕಂಡು ಬಂದಿದ್ದ ಚಿತ್ರ ಸೀತಾರಾಮ ಕಲ್ಯಾಣ. ಆದರೆ ಆ ತೆಲುಗು ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಂತಹ ರಾಮ್ ಲಕ್ಷ್ಮಣ್ ಜೋಡಿಯೇ ಇಲ್ಲಿಯೂ ಸಾಹಸ ಸಂಯೋಜಿಸಿದ್ದೇ ಹೋಲಿಕೆಗೆ ಕಾರಣ ಎನ್ನುವ ಮೂಲಕ ಬಾಯಿ ಮುಚ್ಚಿಸಲಾಗಿತ್ತು. ಸಾಲದೆಂಬಂತೆ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರ ನಿರ್ವಹಿಸಿರುವಂಥ ಶರತ್ ಕುಮಾರ್ ಕೂಡ ಇದು ಯಾವುದೇ ಚಿತ್ರದ ರಿಮೇಕ್ ಅಲ್ಲ ಎಂದು ಭರವಸೆ ನೀಡಿದ್ದರು. ಇದೀಗ ಬಿಡಗಡೆಯಾಗಿರುವ ಸಿನೆಮಾ ಯಾವುದರ ರಿಮೇಕ್ ಕೂಡ ಅಲ್ಲ. ಆದರೆ ಹರ್ಷ ನಿರ್ದೇಶನದ ಇತರ ಚಿತ್ರಗಳಂತೆ ಇದು ಕೂಡ ಒಂದಷ್ಟು ಚಿತ್ರಗಳಲ್ಲಿ ಕಂಡ ಸನ್ನಿವೇಶಗಳನ್ನು ಮತ್ತೆ ನೆನಪಿಸುವಂಥ ಚಿತ್ರವಾಗಿ ಉಳಿದಿದೆ. ಮಾತ್ರವಲ್ಲ, ಇರುವ ಒಂದೇ ಒಂದು ಟ್ವಿಸ್ಟ್‌ಗಾಗಿ ಎರಡೂವರೆ ಗಂಟೆಗಳ ಕಾಲ ಕಾಯುವಂತೆ ಮಾಡುವುದರಿಂದ ಅದು ಕೂಡ ನಿರೀಕ್ಷಿತ ಪರಿಣಾಮ ನೀಡುವಲ್ಲಿ ವಿಫಲವಾಗುತ್ತದೆ.

ಹಳ್ಳಿಯಲ್ಲಿ ನಡೆಯುವ ವಿವಾಹವೊಂದಕ್ಕೆ ವರನ ಸ್ನೇಹಿತನಾಗಿ ಬರುತ್ತಾನೆ ಆರ್ಯ. ವರನ ಪಾತ್ರವನ್ನು ಚಿಕ್ಕಣ್ಣ ನಿರ್ವಹಿಸಿದ್ದರೆ ವಧುವಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ನಟಿಸಿದ್ದಾರೆ. ಅವರಿಬ್ಬರ ಜೊತೆಗೆ ಆರ್ಯನ ಪಾತ್ರದಲ್ಲಿ ನಿಖಿಲ್ ಮತ್ತು ಗೀತಾ ಪಾತ್ರದಲ್ಲಿ ರಚಿತಾ ಮಾಡುವ ಹುಡುಗಾಟಗಳೇ ತುಂಬಿವೆ. ನಗರಕ್ಕೆ ಮರಳುವ ಆರ್ಯ ಅಲ್ಲಿ ಶಂಕರ್ ಎನ್ನುವ ಶ್ರೀಮಂತನ ಪುತ್ರ ಎಂದು ಹಾಗೂ ಆತ ರೈತರ ಸೇವೆಗಾಗಿ ಡ್ಯಾಮ್ ನಿರ್ಮಾಣಕಾರ್ಯ ಕೈಗೆತ್ತಿಕೊಳ್ಳುತ್ತಾನೆ ಎನ್ನುವುದನ್ನು ತೋರಿಸಲಾಗಿದೆ. ಆದರೆ ಚಿತ್ರದ ಮೂಲ ಎಳೆ ಮತ್ತೆ ಸ್ನೇಹ ಸಂಬಂಧದ ಕತೆಯಾಗಿ ಮರಳುತ್ತದೆ. ಆರ್ಯನ ತಂದೆ ಶಂಕರ್ ಮತ್ತು ಗೀತಾಳ ತಂದೆ ನರಸಿಂಹ ಬಾಲ್ಯದಿಂದಲೇ ಸ್ನೇಹಿತರು. ಆದರೆ ಅವರ ಸ್ನೇಹ ಮುರಿಯುವಂತೆ ನಡೆದ ಘಟನೆ ಏನು? ಮತ್ತು ಅದರಲ್ಲಿ ಶಂಕರ್ ನಿರಪರಾಧಿಯಾಗಿರುತ್ತಾನೆ ಎನ್ನುವುದನ್ನು ಕ್ಲೈಮ್ಯಾಕ್ಸ್ ನಲ್ಲಿ ಆರ್ಯ ತಿಳಿಸುತ್ತಾನೆ ಎನ್ನುವಲ್ಲಿಗೆ ಎಲ್ಲರೂ ಒಂದಾಗುವ ಮೂಲಕ ಚಿತ್ರ ಸಮಾಪ್ತಿಯಾಗುತ್ತದೆ.

ಆರಂಭದಲ್ಲೇ ಹೇಳಿದಂತೆ ಈ ಸಿನೆಮಾದ ಮೇಲೆ ತೆಲುಗು ಚಿತ್ರಗಳ ಪ್ರಭಾವ ಹೆಚ್ಚಾಗಿಯೇ ಇವೆ. ಮುಖ್ಯವಾಗಿ ‘ರಾರಂಡೋಯ್ ವೇದುಕ ಚೂದ್ದಾಮ್’ ಚಿತ್ರ ನೋಡಿದವರು ಕತೆಯಲ್ಲಿ ಅದರ ಹೋಲಿಕೆಯನ್ನು ಗಮನಿಸಬಹುದು. ನಾಯಕನಾಗಿ ನಿಖಿಲ್ ಕುಮಾರ್ ಬಾಡಿ ಫಿಟ್ ನೆಸ್ ಒಂದನ್ನು ಬಿಟ್ಟು ಬೇರೆ ಯಾವುದೇ ಕಾರಣದಿಂದಲೂ ಗಮನ ಸೆಳೆಯುವುದಿಲ್ಲ. ಹಾಗಾಗಿ ಅವರ ಅಭಿನಯ ಯಂತ್ರಮಾನವನಂತೆ ಕಾಣಿಸುತ್ತದೆ. ನಾಯಕಿ ರಚಿತಾ ಯಾಕೋ ಗೊತ್ತಿಲ್ಲ ಮೈ ಬಣ್ಣ ಕಳೆದುಕೊಂಡಂತೆ ಕಾಣಿಸುತ್ತಾರೆ. ಆಕೆಗೆ ನೀಡಲಾದ ಕಾಸ್ಟೂಮ್‌ಗಳು ಕೂಡ ಹೊಂದಿಕೊಂಡ ಹಾಗೆ ಇಲ್ಲ. ಕ್ಯಾರೆಕ್ಟರ್ ಕೂಡ ಅಷ್ಟೇ ಮೊದಲಾರ್ಧವನ್ನು ಅವರ ಕ್ಯೂಟ್‌ನೆಸ್‌ಗೆ ಮೀಸಲುಗೊಳಿಸಲಾಗಿದೆ. ಹಾಗಾಗಿ ಅತಿಯಾದ ಅಮೃತ ವಿಷವಾಗಿದೆ.

ಬಸುರಿಯನ್ನು ಹಿಂಸಿಸುವಂಥ ದೃಶ್ಯಗಳನ್ನು ಅಷ್ಟೊಂದು ಕ್ರೂರವಾಗಿ ತೋರಿಸುವ ಬದಲು ಪ್ರೇಕ್ಷಕರ ಕಲ್ಪನೆಗೆ ಬಿಟ್ಟಿದ್ದರೆ ಚೆನ್ನಾಗಿತ್ತು ಅನಿಸದಿರದು. ಅರ್ಮಾನ್ ಮಲಿಕ್ ಕಂಠದಲ್ಲಿ ನಿನ್ನಾ ರಾಜ ನಾನು ಎನ್ನುವ ಹಾಡೊಂದು ಆಕರ್ಷಕವಾಗಿದೆ. ಶರತ್ ಕುಮಾರ್, ರವಿಶಂಕರ್, ಜ್ಯೋತಿ ರೈ ಮತ್ತು ಆದಿತ್ಯ ಮೆನೊನ್ ಪಾತ್ರಗಳನ್ನು ಹೊರತು ಪಡಿಸಿ ಉಳಿದ ತಾರಾಗಣವೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿವೆ. ಸ್ನೇಹ ಪ್ರೇಮ ಸಂಬಂಧಗಳ ಕತೆಯಲ್ಲಿ ಈ ಡ್ಯಾಮು ಯಾಕೆ ಬಂತು ಎಂದು ತಲೆ ಕೆಡಿಸುವುದಿಲ್ಲ ಎಂದಾದರೆ ನೀವು ಚಿತ್ರ ನೋಡಬಹುದು.

ಚಿತ್ರ: ಸೀತಾರಾಮ ಕಲ್ಯಾಣ
  ತಾರಾಗಣ: ನಿಖಿಲ್ ಕುಮಾರ್, ರಚಿತಾರಾಮ್
  ನಿರ್ದೇಶನ: ಎ. ಹರ್ಷ
  ನಿರ್ಮಾಣ: ಅನಿತಾ ಕುಮಾರಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News