ದಿಲ್ಲಿ ದರ್ಬಾರ್

Update: 2019-01-26 18:32 GMT

ಕೆ.ಸಿ. ವೇಣುಗೋಪಾಲ್ ಪ್ರಗತಿ

ಕಳೆದ ವಾರ ಪ್ರಿಯಾಂಕಾ ಗಾಂಧಿಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಸುದ್ದಿಯೇ ಎಲ್ಲ ಕಡೆ ವ್ಯಾಪಿಸಿತ್ತು. ಆದರೆ ಇದನ್ನು ಘೋಷಿಸಿದ್ದ ಮಾಧ್ಯಮ ಪ್ರಕಟನೆಯ ಮೇಲೆ ಕಣ್ಣಾಡಿಸಿದಾಗ ಆ ಸುದ್ದಿ ಎರಡನೇ ಪ್ಯಾರಾದಲ್ಲಿತ್ತು. ಮೊದಲ ಪ್ಯಾರಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿರಿಯ ನಾಯಕ ಕೆ.ಸಿ ವೇಣುಗೋಪಾಲ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಸುದ್ದಿಯಿತ್ತು. ಕಳೆದ ತಿಂಗಳು ರಾಜಸ್ಥಾನದ ಮುಖ್ಯಮಂತ್ರಿಯಾಗಿ ನೇಮಕಗೊಂಡ ಅಶೋಕ್ ಗೆಹ್ಲೋಟ್ ಅವರ ಸ್ಥಾನವನ್ನು ವೇಣುಗೋಪಾಲ್ ತುಂಬಿಸಿದ್ದಾರೆ. ಕೇರಳ ಮೂಲದವರಾದ ವೇಣುಗೋಪಾಲ್ ಅವರು ರಾಜಕೀಯದಲ್ಲಿ ಏರಿರುವ ಎತ್ತರವನ್ನು ಕಂಡರೆ ಕೆಲವರು ಆಶ್ಚರ್ಯಪಟ್ಟರೆ ಇನ್ನು ಕೆಲವರು ಇದು ನಿರೀಕ್ಷಿತ ಎಂದು ಹೇಳುತ್ತಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಯು ಅತ್ಯಂತ ಪ್ರಭಾವೀ ಸ್ಥಾನ ಎಂದು ನಂಬಲಾಗಿದೆ. ಕರ್ನಾಟಕದ ಪ್ರಧಾನ ಕಾರ್ಯದರ್ಶಿಯಾಗಿ ವೇಣುಗೋಪಾಲ್ ತೋರಿದ ದಕ್ಷತೆಯನ್ನು ಗುರುತಿಸಿರುವ ರಾಹುಲ್ ಗಾಂಧಿ ವೇಣುಗೋಪಾಲ್‌ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಪಕ್ಷದ ಒಳಗೆ ಸಮಸ್ಯೆಗಳು ಎದುರಾದಾಗ ವೇಣುಗೋಪಾಲ್ ತನ್ನ ಅನುಭವ ಮತ್ತು ಬುದ್ಧಿವಂತಿಕೆಯಿಂದ ಅದನ್ನು ಸಲೀಸಾಗಿ ನಿಭಾಯಿಸಿದ್ದರು. ವೇಣುಗೋಪಾಲ್ ಎತ್ತರಕ್ಕೆ ಏರುತ್ತಿರುವುದನ್ನು ಕಂಡರೆ ಕೇರಳದ ಇನ್ನೋರ್ವ ಮುತ್ಸದ್ದಿ ಹಿರಿಯ ನಾಯಕ ಎ.ಕೆ ಆ್ಯಂಟನಿಯವರ ಗ್ರಹಬಲ ಕುಸಿಯುತ್ತಾ ಬಂದಿರುವಂತೆ ಕಾಣುತ್ತಿದೆ. ವೇಣುಗೋಪಾಲ್ ತಮಗೆ ನೀಡಲಾದ ಹೊಸ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.


ಎಲ್ಲೋ ನೋಟ, ಎಲ್ಲೋ ಗುರಿ

ಬಾರಮತಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವ ವೇಳೆ ಪ್ರಧಾನಿ ಮೋದಿ, ವಂಶ ರಾಜಕಾರಣದ ಕೆಡುಕುಗಳನ್ನು ವಿವರಿಸುವಂತೆ ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ತಿಳಿಸಿದ್ದರು. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಕ್ಕು ಸಾಧಿಸಲು ಮುಂದಾದ ಪವಾರ್ ಅವರಿಗೆ ಕಾಂಗ್ರೆಸ್ ಯಾವ ರೀತಿ ನಿರ್ಗಮನದ ದಾರಿ ತೋರಿಸಿತ್ತು ಎಂಬುದನ್ನು ಮೋದಿ ಬಿಜೆಪಿ ಕಾರ್ಯಕರ್ತರಿಗೆ ವಿವರಿಸುತ್ತಾ ಇಂಥ ಘಟನೆಗಳು ಕೇವಲ ಕುಟುಂಬ ಪಕ್ಷಗಳಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ತಿಳಿಸಿದ್ದರು. ಖಂಡಿತವಾಗಿಯೂ, ಇತ್ತೀಚೆಗೆ ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ನಂತರ ಬಿಜೆಪಿಗೆ ಈ ಬಗ್ಗೆ ಮಾತನಾಡಲು ಹೆಚ್ಚಿನ ವಿಷಯ ದೊರೆತಂತಾಗಿದೆ. ಆದರೆ ತಮಾಷೆಯೆಂದರೆ, ಇದೀಗ ಶರದ್ ಪವಾರ್ ಕೂಡಾ ತಮ್ಮ ಪಕ್ಷದ ಜವಾಬ್ದಾರಿಯನ್ನು ಪುತ್ರಿ ಸುಪ್ರಿಯಾ ಸುಳೆ ಕೈಗೆ ನೀಡಲು ಮುಂದಾಗಿದ್ದು ಆಕೆಗಿಂತ ಹೆಚ್ಚು ಜನಪ್ರಿಯವಾಗಿರುವ ಸೋದರಳಿಯ ಅಜಿತ್ ಜೋಗಿಗೆ ನೀಡಲು ಹಿಂಜರಿಯುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಯ ನೇಮಕವನ್ನು ಪವಾರ್ ಸ್ವಾಗತಿಸಿದ್ದಾರೆ. 


ಗೋಯಲ್‌ಗೆ ತಿಳಿದಿತ್ತು?

ವಿತ್ತ ಸಚಿವ ಅರುಣ್ ಜೇಟ್ಲಿ ಕಳೆದ ವರ್ಷ ಕಿಡ್ನಿ ಶಸ್ತ್ರಚಿಕಿತ್ಸೆಗೆಂದು ಸ್ವಲ್ಪ ಸಮಯ ಹುದ್ದೆಯಿಂದ ದೂರ ಉಳಿದಿದ್ದ ಸಮಯದಲ್ಲಿ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರಿಗೆ ವಿತ್ತ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಲಾಗಿತ್ತು. ಗೋಯಲ್‌ಗೆ ಅದೇ ಹುದ್ದೆಯನ್ನು ವಾಪಸ್ ನೀಡಲಾಗುತ್ತದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹಬ್ಬಿತ್ತು. ಜೇಟ್ಲಿ ಪುನಃ ವೈದ್ಯಕೀಯ ಕಾರಣಗಳಿಂದ ಅಮೆರಿಕಕ್ಕೆ ತೆರಳಿದಾಗ ಮತ್ತೆ ಗೋಯಲ್ ಹೆಸರು ಪ್ರಸ್ತಾಪಕ್ಕೆ ಬಂತು. ಬುಧವಾರ ಅವರ ಹೆಸರನ್ನು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ ಹೊರಲು ಘೋಷಿಸಿದಾಗ ಯಾರಿಗೂ ಹೆಚ್ಚು ಆಶ್ಚರ್ಯವಾಗಲಿಲ್ಲ. ಗೋಯಲ್ ಸಂಪುಟವನ್ನು ಸಂಬೋಧಿಸಿದ ನಂತರ ವರದಿಗಾರರು, ನೀವು ಫೆಬ್ರವರಿ ಒಂದರಂದು ಮಧ್ಯಂತರ ಬಜೆಟನ್ನು ಮಂಡಿಸುತ್ತೀರಾ ಎಂದು ಕೇಳಿಯೇಬಿಟ್ಟರು. ಆದರೆ ಇದನ್ನು ಅಲ್ಲಗಳೆಯದ ಮತ್ತು ಜೇಟ್ಲಿ ಮರಳಿದ ನಂತರ ಬಜೆಟ್ ಮಂಡಿಸುತ್ತಾರೆ ಎಂದು ಹೇಳುವ ಬದಲು ಗೋಯಲ್ ತನಗೆ ಪ್ರಶ್ನೆಯೇ ಕೇಳಿಲ್ಲ ಎಂಬಂತೆ ವರ್ತಿಸುತ್ತಿದ್ದರು. ನೀವೆಲ್ಲ ಉರಿ ಸಿನೆಮಾ ವೀಕ್ಷಿಸಿದ್ದೀರಾ? ಎಂದು ಅವರು ಪತ್ರಕರ್ತರನ್ನು ಪ್ರಶ್ನಿಸಿದರು. ಬಜೆಟ್ ಕುರಿತ ಪ್ರಶ್ನೆಯನ್ನು ವಾಪಸ್ ಕೇಳಿದಾಗಲೂ ಅವರು ಉರಿ ಸಿನೆಮಾದ ಬಗ್ಗೆಯೇ ಮಾತನಾಡಿದರು. ಸಿನೆಮಾವನ್ನು ಹೊಗಳಿದ ಅವರು, ಕಳೆದ ರಾತ್ರಿಯಷ್ಟೇ ನಾನು ಈ ಸಿನೆಮಾ ನೋಡಿದೆ. ಚಿತ್ರಮಂದಿರದ ಒಳಗೆ ಜನರ ದೇಶಭಕ್ತಿಯನ್ನು ಕಂಡು ಬೆರಗಾದೆ ಎಂದು ತಿಳಿಸಿದರು. ವರದಿಗಾರರು ಅದೆಷ್ಟು ಬಾರಿ ಬಜೆಟ್ ಬಗ್ಗೆ ಪ್ರಶ್ನೆ ಕೇಳಿದರೂ ಕೇಳದಂತೆ ನಟಿಸಿದ ಗೋಯಲ್ ಉರಿ ಸಿನೆಮಾದ ಬಗ್ಗೆಯೇ ಮಾತನಾಡುತ್ತಿದ್ದರು. ಇದರರ್ಥ ಗೋಯಲ್‌ಗೆ ಮೊದಲೇ ತಿಳಿದಿತ್ತು. ಸರಕಾರ ಮಾತ್ರ ಮಂಗಳವಾರ ಈ ಘೋಷಣೆಯನ್ನು ಮಾಡಿದೆ.


ಮೈತ್ರಿ ನಡೆಸುವಲ್ಲಿ ಅಖಿಲೇಶ್ ವ್ಯಸ್ತ

ಮೈತ್ರಿ ನಡೆಸುವುದು ಬಹಳ ಕಷ್ಟ, ಮುಖ್ಯವಾಗಿ ತಲೆಗೊಬ್ಬರಂತೆ ಅಭಿಪ್ರಾಯಗಳನ್ನು ಹೊಂದಿರುವ ಭಾರತದಂಥ ಬಹುತ್ವ ಪ್ರಜಾಪ್ರಭುತ್ವ ದೇಶದಲ್ಲಿ ಇನ್ನೂ ಕಷ್ಟ. ಆದರೆ ಈ ವಿಷಯದಲ್ಲಿ ಅಖಿಲೇಶ್ ಯಾದವ್ ಪಕ್ಕಾ ದರ್ಜಿಯಂತೆ. ವಿರೋಧ ಪಕ್ಷಗಳ ಮಹಾಮೈತ್ರಿಯ ಮಾತುಗಳು ಆರಂಭವಾದಂದಿನಿಂದ ಯಾದವ್ ಸಮಾಧಾನದಿಂದಿದ್ದಾರೆ. ಅವರ ಬಹುದೊಡ್ಡ ಸಾಧನೆಯೆಂದರೆ ರಾಜಕೀಯ ಶತ್ರುವಾಗಿದ್ದ ಬಹುಜನ ಸಮಾಜ ಪಕ್ಷದ ಮಾಯಾವತಿ ಜೊತೆ ಹೊಂದಾಣಿಕೆಯನ್ನು ಮಾಡಿಕೊಂಡಿದ್ದು. ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಉತ್ತರ ಪ್ರದೇಶದಲ್ಲಿ ಹಾವು ಮುಂಗಿಸಿಯಂತೆ ಇದ್ದ ಪಕ್ಷಗಳು. ಆದರೆ, ತಮ್ಮ ಹೊಂದಾಣಿಕೆಯ ಕುರಿತು ಬರೆದುಕೊಟ್ಟ ಭಾಷಣವನ್ನು ಓದುವುದರಿಂದ ಮೈತ್ರಿಯಿಂದ ಕಾಂಗ್ರೆಸನ್ನು ಹೊರಗಿಡುವವರೆಗೆ ಬೆಹೆನ್‌ಜಿ (ಸಹೋದರಿ)ಯ ಎಲ್ಲ ಷರತ್ತುಗಳನ್ನು ಒಪ್ಪುವ ಮೂಲಕ ಅಖಿಲೇಶ್ ಈ ಸಾಧನೆ ಮಾಡಿದ್ದಾರೆ. ಅಜಿತ್ ಸಿಂಗ್ ಮತ್ತು ಅವರ ಮಗ ಜಯಂತನ್ನು ತಮ್ಮ ತೆಕ್ಕೆಗೆ ಸೇರಿಸಲು ಅಖಿಲೇಶ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಮೂಲಗಳ ಪ್ರಕಾರ ಅಖಿಲೇಶ್ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಅಬ್ದುಲ್ಲಾರನ್ನು ಹಾಗೂ ಮೂರನೇ ರಂಗದ ಇತರ ಪ್ರಮುಖ ನಾಯಕರನ್ನು ಭೇಟಿಯಾಗುವ ಇರಾದೆ ಹೊಂದಿದ್ದಾರೆ.


ಅಹಮದ್ ಪಟೇಲ್ ಚಿಂತೆಗಳು

ಲೋಕಸಭಾ ಚುನಾವಣೆ ಸಮೀಪದಲ್ಲಿದ್ದು ಜನರನ್ನು ಒಗ್ಗೂಡಿಸುವ ಮತ್ತು ಬಿಜೆಪಿಯಿಂದ ಮತದಾರರನ್ನು ದೂರ ಸರಿಸುವ ಕೆಲಸ ಮಾಡುವ ಬದಲು ಕಾಂಗ್ರೆಸ್ ಭಿಕ್ಷಾ ಪಾತ್ರೆ ಹಿಡಿದು ರಸ್ತೆಗಿಳಿದಿದೆ. ದೇಶದ ಅತ್ಯಂತ ಹಳೆಯ ಪಕ್ಷ ಹಣಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನಗಳನ್ನು ನಡೆಸುತ್ತಿದ್ದು ಲಕ್ಷಾಂತರ ಇಮೇಲ್‌ಗಳನ್ನು ರವಾನಿಸಿದೆ. ಜೊತೆಗೆ ತನ್ನ ಕಾರ್ಯಕರ್ತರನ್ನು ಮನೆಯ ಬಾಗಿಲುಗಳಿಗೆ ಕಳುಹಿಸಿ ತನ್ನ ಖಾಲಿ ಖಜಾನೆಯನ್ನು ತುಂಬಲು ಮುಂದಾಗಿದೆ. ಅಹಮದ್ ಪಟೇಲ್ ಅವರು ಅನಗತ್ಯ ವೆಚ್ಚಕ್ಕೆ ತಡೆ ಹಾಕಲು ನಿರ್ಧರಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ನೀಡುವ ಚಹಾ, ತಿಂಡಿ ಮತ್ತು ಪತ್ರಿಕೆಗಳ ಮೇಲೂ ನಿರ್ಬಂಧ ಹೇರಲಾಗಿದೆ. ಪಕ್ಷದ ಇತ್ತೀಚಿನ ಮನವಿ ಏನೆಂದರೆ, ಮೋದಿ ಕೋಟ್ಯಧಿಪತಿಗಳಿಂದ ಹಣ ಪಡೆದು ಅವರಿಗಾಗಿ ಕೆಲಸ ಮಾಡುತ್ತಿರುವಂತೆ ದೇಶದ ಸಾಮಾನ್ಯ ಜನರು ಕಾಂಗ್ರೆಸ್‌ಗೆ ಹಣ ನೀಡಬೇಕಂತೆ. ಈ ಘೋಷಣೆಗೆ ಒಂದು ಕಾರಣವೆಂದರೆ ಕಾಂಗ್ರೆಸ್‌ಗೆ ಬರುತ್ತಿದ್ದ ಕಾರ್ಪೊರೇಟ್ ದೇಣಿಗೆಗಳು ಕೇವಲ ಬೆರಳೆಣಿಕೆಗೆ ಸೀಮಿತವಾಗುಳಿದಿದೆ. 2017-18ರಲ್ಲಿ ಬಿಜೆಪಿ ಶೇ.92 ದೇಣಿಗೆಯನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಿಧಿಯ ವಿಷಯದಲ್ಲಿ ಬಿಜೆಪಿ ಬಳಿ ಸಿಂಹಪಾಲಿದೆ. ಆದರೆ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ನಿರ್ವಹಣೆ ತೋರುವ ಭರವಸೆಯಲ್ಲಿದೆ. ಕೈಗಾರಿಕೋದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದಿರುವ ಅಹಮದ್ ಪಟೇಲ್ ಪಕ್ಷಕ್ಕೆ ಹೆಚ್ಚಿನ ದೇಣಿಗೆ ನೀಡುವಂತೆ ಅವರಿಗೆ ಮನವಿ ಮಾಡಬಹುದು. ಬಿಜೆಪಿ ಬಳಿ ಹೆಚ್ಚಿನ ಹಣವಿರುವುದರಿಂದ ಕಾಂಗ್ರೆಸ್ ಕೂಡಾ ಸಿದ್ಧವಾಗಿರುವುದು ಉತ್ತಮ. ಇದೇ ಅಹಮದ್ ಪಟೇಲ್ ಚಿಂತೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News