ಶಸ್ತ್ರಚಿಕಿತ್ಸೆಗೆ ಒಳಗಾಗಿ ದಾಖಲೆ ನಿರ್ಮಿಸಿದ ವ್ಯಕ್ತಿ !
ಹೊಸದಿಲ್ಲಿ, ಜ.28: ಸೊಂಟ ಬದಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ದಾಖಲೆಗೆ ದಿಲ್ಲಿಯ 105 ವರ್ಷದ ಗುರ್ಬಚನ್ ಸಿಂಗ್ ಸಂಧು ಎಂಬ ವ್ಯಕ್ತಿ ಪಾತ್ರರಾಗಿದ್ದಾರೆ. ಜನವರಿ 19ರಂದು ಕೇಂದ್ರ ದಿಲ್ಲಿಯ ಪ್ರೈಮಸ್ ಆಸ್ಪತ್ರೆಯಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಕೌಶಲ್ ಕಾಂತ್ ಮಿಶ್ರ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಪಂಜಾಬ್‌ನಲ್ಲಿ ಜನಿಸಿರುವ ಸಂಧು 1971ರಲ್ಲಿ ಸಶಸ್ತ್ರ ಪಡೆಗಳ ಭದ್ರತಾ ಸಿಬ್ಬಂದಿ ಹುದ್ದೆಯಿಂದ ನಿವೃತ್ತರಾಗಿದ್ದರು. ಬಳಿಕ ದಿಲ್ಲಿಯಲ್ಲಿ ವಾಸವಿದ್ದ ಅವರು ಜನವರಿ 19ರಂದು ತನ್ನ ಮನೆಯ ಸ್ನಾನದ ಕೊಠಡಿಯಲ್ಲಿ ಕಾಲು ಜಾರಿ ಬಿದ್ದು ಸೊಂಟದ ಭಾಗಕ್ಕೆ ತೀವ್ರ ಏಟು ಬಿದ್ದ ಕಾರಣ ನಡೆದಾಡಲು ಅಸಮರ್ಥರಾಗಿದ್ದರು. ಜನವರಿ 19ರಂದು ಸೊಂಟದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಜನವರಿ 22ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಈಗ ಅವರು ನಡೆದಾಡುವ ಸ್ಥಿತಿಗೆ ಮರಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಂಪೂರ್ಣ ಸೊಂಟ ಬದಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ದಾಖಲೆ ಈಗ ಬ್ರಿಟನ್‌ನ ಜಾನ್ ರಾಂಡಾಲ್ ಎಂಬವರ ಹೆಸರಲ್ಲಿದೆ. ಇವರು 102ನೇ ವರ್ಷದಲ್ಲಿ ಸೊಂಟ ಬದಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಈ ದಾಖಲೆಯನ್ನು ಮುರಿದಿರುವ ಸಂಧು ಅವರ ಹೆಸರನ್ನು ದಾಖಲೆ ಸಹಿತ ಈಗ ಗಿನ್ನೆಸ್ ವಿಶ್ವದಾಖಲೆ ಕಚೇರಿಗೆ ಕಳುಹಿಸಲಾಗಿದೆ. ಸಂಧು ಅವರಿಗೆ ಮಾರ್ಚ್ 28ರಂದು 106 ವರ್ಷ ತುಂಬಲಿದೆ ಎಂದು ಕೌಶಲ್‌ಕಾಂತ್ ಮಿಶ್ರ ತಿಳಿಸಿದ್ದಾರೆ.
ಸೊಂಟ ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಸಿಮೆಂಟೆಡ್ ಮತ್ತು ಅನ್‌ಸಿಮೆಂಟೆಡ್ ಎಂಬ ಎರಡು ವಿಧಗಳಿವೆ. ಸಿಮೆಂಟೆಡ್ ವಿಧಾನದಲ್ಲಿ ಬೇಗನೆ ಒಣಗುವ ಎಲುಬಿನ ಪುಡಿ (ಸಿಮೆಂಟ್)ಯನ್ನು ತುಂಡಾದ ಎಲುಬಿಗೆ ಅಂಟಿಸಿ ಎಲುಬನ್ನು ಜೋಡಿಸಲಾಗುತ್ತದೆ. ಈ ವಿಧಾನದಲ್ಲಿ ಅಡ್ಡ ಪರಿಣಾಮದ ಅಪಾಯವಿದೆ. ಸಂಧು ಅನ್‌ಸಿಮೆಂಟೆಡ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಮಿಶ್ರ ತಿಳಿಸಿದ್ದಾರೆ.