ಐಆರ್‌ಸಿಟಿಸಿ ಹಗರಣ: ಲಾಲು ಪ್ರಸಾದ್, ಪತ್ನಿ, ಪುತ್ರರಿಗೆ ದಿಲ್ಲಿ ನ್ಯಾಯಾಲಯ ಜಾಮೀನು
Update: 2019-01-28 22:57 IST
ಹೊಸದಿಲ್ಲಿ, ಜ. 28: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೋರೇಶನ್ (ಐಆರ್‌ಸಿಟಿಸಿ) ಹಗರಣಕ್ಕೆ ಸಂಬಂಧಿಸಿ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್, ಅವರ ಪತ್ನಿ ರಾಬ್ರಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ಅವರಿಗೆ ದಿಲ್ಲಿ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
1 ಲಕ್ಷ ರೂ. ವೈಯುಕ್ತಿಕ ಬಾಂಡ್‌ಗಳು ಹಾಗೂ ಅದೇ ಮೊತ್ತ ಶ್ಯೂರಿಟಿಗಳ ಮೇಲೆ ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಆರೋಪಿಗಳಿಗೆ ಜಾಮೀನು ನೀಡಿದರು. ಮೂವರ ಮಧ್ಯಂತರ ಜಾಮೀನನ್ನು ನ್ಯಾಯಾಲಯ ಜನವರಿ 19ರಂದು ವಿಸ್ತರಿಸಿತ್ತು. ಅದರ ಅವಧಿ ಇಂದು ಮುಕ್ತಾಯಗೊಂಡಿತ್ತು. ಎರಡು ಐಆರ್‌ಸಿಟಿಸಿ ಹೊಟೇಲ್‌ಗಳನ್ನು ಖಾಸಗಿ ಸಂಸ್ಥೆಗಳಿಗೆ ಕಾರ್ಯಾಚರಣೆ ಗುತ್ತಿಗೆ ನೀಡುವಲ್ಲಿ ಹಣ ವಂಚನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.