ಚುನಾವಣೆಯಲ್ಲಿ ಸೋತ ಪತ್ನಿ : ಮತದಾರರಿಗೆ ವಿತರಿಸಿದ ಹಣ ವಾಪಸ್ ಕೇಳಿದ ಪತಿ

Update: 2019-01-29 12:57 GMT

ಹೈದರಾಬಾದ್, ಜ. 29 : ಇತ್ತೀಚೆಗೆ ಸೂರ್ಯಪೇಟ್ ಜಿಲ್ಲೆಯ ಜಗೋರೆಡ್ಡಿಗುಡೆಂ ಎಂಬಲ್ಲಿನ  ಸ್ಥಳೀಯಾಡಳಿತ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 9ರಲ್ಲಿ ಸ್ಪರ್ಧಿಸಿದ್ದ  ಟಿಆರ್ ಎಸ್ ಅಭ್ಯರ್ಥಿ ಹಾಗೂ ಮಾಜಿ ಕಾಂಗ್ರೆಸ್ ನಾಯಕಿ ಉಪ್ಪು ಹೈಮಾವತಿ ಕೇವಲ 24 ಮತಗಳನ್ನು ಪಡೆದು ಸೋತಿದ್ದೇ ತಡ, ಆಕೆಯ ಪತಿ ಪ್ರಭಾಕರ್ ವಾರ್ಡಿನ ಮನೆ ಮನೆಗೆ ತೆರಳಿ ಮತ ಹಾಕಲೆಂದು ಜನರಿಗೆ ವಿತರಿಸಿದ ಹಣ ವಾಪಸ್ ನೀಡುವಂತೆ ಆಗ್ರಹಿಸಿದ ಘಟನೆ ನಡೆದಿದೆ.

ಪ್ರಭಾಕರ್ ಮೊದಲು ಮತದಾರರಲ್ಲಿ ಹಣ ವಾಪಸ್ ನೀಡುವಂತೆ ವಿನಂತಿಸುತ್ತಿರುವುದು ಹಾಗೂ ನಂತರ  ಬೇಡಿಕೆಯಿಡುತ್ತಿದ್ದುದು ವಿಡಿಯೋದಲ್ಲಿ ದಾಖಲಾಗಿದೆ.

ಹಣ ಪಡೆದ ಹೊರತಾಗಿಯೂ ತನ್ನ ಪತ್ನಿಗೆ ಮತ ನೀಡಿಲ್ಲದೇ ಇರುವುದರಿಂದ ಹಣ ವಾಪಸ್ ನೀಡಲೇ ಬೇಕು ಎಂದು ಆತ ಆಗ್ರಹಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಮೂಲಗಳ ಪ್ರಕಾರ ದಂಪತಿ 500 ರಿಂದ 700  ರೂ. ತನಕ ಹಣ ವಿತರಿಸಿದ್ದರು.

ಕೊನೆಗೆ ಗ್ರಾಮಸ್ಥರು ಒಟ್ಟಾಗಿ ಪ್ರಭಾಕರ್ ನನ್ನು ಅಲ್ಲಿಂದ ಓಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News