ರಫೇಲ್ ಬಗ್ಗೆ ನಾನು ರಾಹುಲ್ ಗಾಂಧಿ ಜೊತೆ ಮಾತನಾಡಿಲ್ಲ: ಪಾರಿಕ್ಕರ್

Update: 2019-01-30 15:17 GMT

ಪಣಜಿ,ಜ.30: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜಕೀಯ ಲಾಭವನ್ನು ಪಡೆಯುವ ಉದ್ದೇಶದಿಂದ ನನ್ನನ್ನು ಭೇಟಿಯಾಗಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಬುಧವಾರ ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಮಂಗಳವಾರ ಪಣಜಿಯ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪಾರಿಕ್ಕರ್ ಅವರನ್ನು ಭೇಟಿಯಾಗಿದ್ದರು. ಗೋವಾಕ್ಕೆ ಖಾಸಗಿ ಕೆಲಸಕ್ಕಾಗಿ ಭೇಟಿ ನೀಡಿದ್ದ ರಾಹುಲ್ ಗಾಂಧಿ ಮತ್ತು ಪಾರಿಕ್ಕರ್ ಮಧ್ಯೆ ಹತ್ತು ನಿಮಿಷಗಳ ಮಾತುಕತೆ ನಡೆದಿತ್ತು. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಪಾರಿಕ್ಕರ್ ಬಳಿಯಿದೆ ಎಂದು ಹೇಳಿರುವ ಟೇಪ್ ವೊಂದು ಸಿಕ್ಕಿರುವುದಾಗಿ ಗಾಂಧಿ ಹೇಳಿಕೆ ನೀಡಿದ ಮರುದಿನ ಈ ಭೇಟಿ ನಡೆದಿತ್ತು.

“ರಫೇಲ್ ಒಪ್ಪಂದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪಾರಿಕ್ಕರ್ ತಿಳಿಸಿದ್ದಾರೆ” ಎಂದು ರಾಹುಲ್ ಗಾಂಧಿ ಭೇಟಿಯ ನಂತರ ಮಾಧ್ಯಮಗಳಿಗೆ ತಿಳಿಸಿದ್ದರು.

ಈ ಕುರಿತು ಗಾಂಧಿಗೆ ಪತ್ರ ಬರೆದಿರುವ ಪಾರಿಕ್ಕರ್, “ಯಾವುದೇ ಪೂರ್ವ ಮಾಹಿತಿ ನೀಡದೆ ನೀವು ನನ್ನನ್ನು ಭೇಟಿಯಾಗಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದೀರಿ. ಭಾರತದಲ್ಲಿ ಎಲ್ಲ ವೈಮನಸ್ಸುಗಳಿಂದ ಮೇಲೆದ್ದು ವಿರೋಧಿಗಳಿಗೂ ರೋಗದಿಂದ ಶೀಘ್ರ ಗುಣಮುಖರಾಗಿ ಎಂದು ಹಾರೈಸುವ ಸಂಪ್ರದಾಯವಿದೆ. ನಿಮ್ಮ ಭೇಟಿಯನ್ನು ನಾನು ಆ ದೃಷ್ಟಿಯಿಂದ ನೋಡಿದೆ. ನಿಮ್ಮ ನಡೆಗೆ ನಾನು ಮೆಚ್ಚುಗೆ ಸೂಚಿಸುತ್ತೇನೆ” ಎಂದು ತಿಳಿಸಿದ್ದಾರೆ. “ಆದರೆ ಈ ಭೇಟಿಯನ್ನು ನೀವು ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿರುವುದು ನನಗೆ ಬೇಸರ ಮೂಡಿಸಿದೆ. ನೀವು ನನ್ನ ಜೊತೆ ಕಳೆದ ಐದು ನಿಮಿಷಗಳಲ್ಲಿ ನಾವು ರಫೇಲ್ ಬಗ್ಗೆ ಏನನ್ನೂ ಮಾತನಾಡಿಲ್ಲ’ ಎಂದು ಪಾರಿಕ್ಕರ್ ಸ್ಪಷ್ಟಪಡಿಸಿದ್ದಾರೆ.

“ಈ ಯುದ್ಧವಿಮಾನಗಳನ್ನು ರಾಷ್ಟ್ರೀಯ ಭದ್ರತೆ ಅತ್ಯಂತ ಮುಖ್ಯವಾದುದು ಎಂಬುದನ್ನು ಗಮನದಲ್ಲಿಟ್ಟು ಎಲ್ಲ ಅಗತ್ಯ ನಿಯಮಗಳನ್ನು ಪಾಲಿಸಿ ಖರೀದಿಸಲಾಗುತ್ತಿದೆ. ಇದನ್ನು ನಾನು ಈ ಹಿಂದೆಯೇ ಹೇಳಿದ್ದೇನೆ ಮುಂದೆಯೂ ಹೇಳುತ್ತೇನೆ” ಎಂದು ಪಾರಿಕ್ಕರ್ ತಿಳಿಸಿದ್ದಾರೆ. “ಸೌಜನ್ಯ ಭೇಟಿಯನ್ನು ನೀಡಿ ನಂತರ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳಿಕೆಯನ್ನು ನೀಡುವಂತ ಹೀನಾಯ ಮಟ್ಟಕ್ಕಿಳಿಯುವುದನ್ನು ಕಂಡಾಗ ನಿಮ್ಮ ಭೇಟಿಯ ಹಿಂದಿನ ಉದ್ದೇಶ ಮತ್ತು ಪ್ರಾಮಾಣಿಕತೆ ಬಗ್ಗೆಯೇ ನನಗೆ ಸಂದೇಹ ಮೂಡುತ್ತದೆ” ಎಂದು ಪಾರಿಕ್ಕರ್ ರಾಹುಲ್ ಗಾಂಧಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News