ನೋಟು ನಿಷೇಧದಿಂದ ಯುವಜನರು ಕೈಗೆಟಕುವ ಬೆಲೆಯಲ್ಲಿ ಮನೆ ಖರೀದಿಸುವಂತಾಗಿದೆ: ಪ್ರಧಾನಿ ಮೋದಿ

Update: 2019-01-30 15:50 GMT

ಸೂರತ್,ಜ.30: ತನ್ನ ಸರಕಾರದ ನೋಟು ನಿಷೇಧ ನಿರ್ಧಾರವು ಮನೆಗಳ ಬೆಲೆಗಳು ಇಳಿದು,ಆಕಾಂಕ್ಷಿ ಯುವಜನರು

ಮನೆ ಖರೀದಿಸಲು ಸಾಧ್ಯವಾಗುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ಹೇಳಿದರು.

ತಾನು ಈವರೆಗೆ ಮಾಡಿರುವ ಕೆಲಸಗಳನ್ನು ಹಿಂದಿನ ಯುಪಿಎ ಸರಕಾರವು ಮಾಡುವುದಿದ್ದರೆ ಅದಕ್ಕೆ ಇನ್ನೂ 25 ವರ್ಷಗಳು ಬೇಕಾಗುತ್ತಿದ್ದವು ಎಂದೂ ಅವರು ಹೇಳಿದರು.

ಸೂರತ್ ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ನೋಟು ನಿಷೇಧದಿಂದ ಲಾಭವೇನಾಗಿದೆ ಎಂದು ತನ್ನನ್ನು ಪ್ರಶ್ನಿಸಲಾಗುತ್ತಿದೆ. ನೋಟು ನಿಷೇಧದ ಬಳಿಕ ಕೈಗೆಟಕುವ ಬೆಲೆಗಳಲ್ಲಿ ಮನೆಗಳನ್ನು ಖರೀದಿಸಲು ಸಾಧ್ಯವಾಗಿರುವ ಯುವಜನರಿಗೆ ಈ ಪ್ರಶ್ನೆಯನ್ನು ಕೇಳಬೇಕು. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಪ್ಪುಹಣವನ್ನು ತೊಡಗಿಸಲಾಗಿತ್ತು,ಆದರೆ ನೋಟು ನಿಷೇಧದಂತಹ ನಿರ್ಧಾರಗಳ ಮೂಲಕ ಅದಕ್ಕೆ ತಡೆಹಾಕಲಾಗಿದೆ ಎಂದರು.

ನಾಗರಿಕ ವಾಯುಯಾನ ಸಚಿವಾಲಯದ ‘ಉಡಾನ್’ಯೋಜನೆಯನ್ನು ಪ್ರಶಂಸಿಸಿದ ಅವರು,ಈ ಯೋಜನೆಯು ದೇಶದ ವಾಯುಯಾನ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದರು.

ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ 25 ಲಕ್ಷ ಮನೆಗಳು ನಿರ್ಮಾಣಗೊಂಡಿದ್ದರೆ ಎನ್‌ಡಿಎ ಆಡಳಿತದ ಕಳೆದ ನಾಲ್ಕು ವರ್ಷಗಳಲ್ಲಿ 1.30 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.

ಕಳೆದ 30 ವರ್ಷಗಳಿಂದ ದೇಶದಲ್ಲಿ ಅತಂತ್ರ ಸಂಸತ್ತು ಇತ್ತು ಮತ್ತು ಇದು ಅಭಿವೃದ್ಧಿಯ ಮೆಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿತ್ತು. ಆದರೆ ನಾಲ್ಕು ವರ್ಷಗಳ ಹಿಂದೆ ಜನರು ಪೂರ್ಣ ಬಹುಮತಕ್ಕಾಗಿ ಮತಗಳನ್ನು ನೀಡಿದ್ದರು ಮತ್ತು ಆಬಳಿಕವೇ ದೇಶವು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಮೋದಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News